ಸೂಪರ್ ಸೋಮವಾರ, ಕೇವಲ 24 ಗಂಟೆಯಲ್ಲಿ 86 ಲಕ್ಷ ಡೋಸ್ ಕೊರೊನಾ ಲಸಿಕೆ ವಿಶ್ವದ ಯಾವುದೇ ದೇಶದಲ್ಲೂ ನೀಡಿಲ್ಲ
Super Monday: ಭಾರತದಲ್ಲಿ ಕೊರೊನಾ ಲಸಿಕೆ ನೀಡಿಕೆಯಲ್ಲಿ ಜೂನ್ 21ರ ಸೋಮವಾರ ಹೊಸ ವಿಶ್ವದಾಖಲೆಯೇ ನಿರ್ಮಾಣವಾಗಿದೆ. ಬರೋಬ್ಬರಿ 86 ಲಕ್ಷ ಜನರಿಗೆ ಒಂದೇ ದಿನ ಕೊರೊನಾ ಲಸಿಕೆ ನೀಡಲಾಗಿದೆ. ಕೇವಲ 24 ಗಂಟೆಯಲ್ಲಿ 86 ಲಕ್ಷ ಡೋಸ್ ಲಸಿಕೆಯನ್ನು ವಿಶ್ವದ ಯಾವುದೇ ದೇಶದಲ್ಲೂ ನೀಡಿಲ್ಲ.
ನಮ್ಮ ದೇಶದಲ್ಲಿ ಜೂನ್ 21ರ ಸೋಮವಾರ ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ನೀಡಲಾಗಿದೆ. ಬರೋಬ್ಬರಿ 86.16 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಇದರಲ್ಲಿ ಯಾವ ವಯೋವರ್ಗದ ಜನರು ಹೆಚ್ಚಿನ ಕೊರೊನಾ ಲಸಿಕೆ ಪಡೆದಿದ್ದಾರೆ? ಮೊದಲ ಡೋಸ್ ಎಷ್ಟು ಜನರು ಪಡೆದರು? ಎರಡನೇ ಡೋಸ್ ಲಸಿಕೆ ಎಷ್ಟು ಜನರು ಪಡೆದರು ಎನ್ನುವುದರ ಡೀಟೈಲ್ಸ್ ಇಲ್ಲಿದೆ ನೋಡಿ.
ಭಾರತದಲ್ಲಿ ಕೊರೊನಾ ಲಸಿಕೆ ನೀಡಿಕೆಯಲ್ಲಿ ಜೂನ್ 21ರ ಸೋಮವಾರ ಹೊಸ ವಿಶ್ವದಾಖಲೆಯೇ ನಿರ್ಮಾಣವಾಗಿದೆ. ಬರೋಬ್ಬರಿ 86 ಲಕ್ಷ ಜನರಿಗೆ ಒಂದೇ ದಿನ ಕೊರೊನಾ ಲಸಿಕೆ ನೀಡಲಾಗಿದೆ. ಕೇವಲ 24 ಗಂಟೆಯಲ್ಲಿ 86 ಲಕ್ಷ ಡೋಸ್ ಲಸಿಕೆಯನ್ನು ವಿಶ್ವದ ಯಾವುದೇ ದೇಶದಲ್ಲೂ ನೀಡಿಲ್ಲ.
ಭಾರತದಲ್ಲಿ ಈ ಸಾಧನೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಕೇಂದ್ರೀಕೃತ ಲಸಿಕೆ ಖರೀದಿ, ಪೂರೈಕೆ ವ್ಯವಸ್ಥೆ ಮತ್ತೆ ಜಾರಿಯಾದ ಮೊದಲ ದಿನವೇ 86 ಲಕ್ಷ ಡೋಸ್ ಲಸಿಕೆ ನೀಡಿರುವುದು ಕೊರೊನಾ ವಿರುದ್ಧದ ಹೋರಾಟದಲ್ಲಿ ಒಳ್ಳೆಯ ಬೆಳವಣಿಗೆ. ಇಸ್ರೇಲ್ ದೇಶದ ಒಟ್ಟು ಜನಸಂಖ್ಯೆಯಷ್ಟು ಕೊರೊನಾ ಲಸಿಕೆಯನ್ನು ಒಂದೇ ದಿನದಲ್ಲಿ ಭಾರತದಲ್ಲಿ ನೀಡಲಾಗಿದೆ. ನ್ಯೂಜಿಲ್ಯಾಂಡ್ ದೇಶದ ಜನಸಂಖ್ಯೆಯ ಎರಡು ಪಟ್ಟು ಜನರಿಗೆ ಭಾರತದಲ್ಲಿ ಕೊರೊನಾ ಲಸಿಕೆ ನೀಡಿರುವುದು ವಿಶೇಷ.
ಆದರೆ, ಭಾರತದಲ್ಲಿ ಒಂದೇ ದಿನ 86 ಲಕ್ಷ ಡೋಸ್ ಲಸಿಕೆ ಪಡೆದವರು ಯಾವ ವಯೋ ವರ್ಗದವರು?, ಎಷ್ಟು ಜನರು ಸೂಪರ್ ಸೋಮವಾರ ಮೊದಲ ಡೋಸ್ ಲಸಿಕೆ ಪಡೆದರು? ಎಷ್ಟು ಜನರು ಎರಡನೇ ಡೋಸ್ ಲಸಿಕೆ ಪಡೆದರು ಎನ್ನುವುದರ ವಿವರವನ್ನು ಈಗ ನಾವು ನೀಡ್ತೀವಿ.
ಸೋಮವಾರದ ಸೂಪರ್ ಲಸಿಕಾ ಅಭಿಯಾನದ ಹಿಂದಿನ ಶಕ್ತಿ ದೇಶದ ಯುವಜನತೆ ಎನ್ನುವುದು ವಿಶೇಷ. ಸೋಮವಾರ ಲಸಿಕೆ ಪಡೆದ ನಾಲ್ವರಲ್ಲಿ ಮೂವರು 18-44 ವರ್ಷ ವಯೋಮಾನದವರು ಎಂಬುದು ವಿಶೇಷ. 86 ಲಕ್ಷ ಡೋಸ್ ಗಳ ಪೈಕಿ ಶೇ.72 ರಷ್ಟು ಲಸಿಕೆಯನ್ನು 18-44 ವರ್ಷ ವಯೋಮಾನದವರು ಪಡೆದಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ಹೇಳುತ್ತಿವೆ. ದೇಶದಲ್ಲಿ 18-44 ವರ್ಷ ವಯೋಮಾನದವರು ಸೋಮವಾರ 61.5 ಲಕ್ಷ ಡೋಸ್ ಲಸಿಕೆ ಪಡೆದಿದ್ದಾರೆ.
ದೇಶಧಲ್ಲಿ 18-44 ವರ್ಷ ವಯೋಮಾನದ ವರ್ಗದಲ್ಲಿ ಕೊರೊನಾ ಲಸಿಕೆಗಾಗಿ ಬಾರಿ ಬೇಡಿಕೆ ಇತ್ತು. ಈಗ ದೇಶದ ಬಹುತೇಕ ಭಾಗ ಲಾಕ್ ಡೌನ್ ನಿಂದ ಆನ್ ಲಾಕ್ ನತ್ತ ಹೊರಳಿದೆ. 18-44ವಯೋಮಾನದ ವರ್ಗದವರೇ ಉದ್ಯೋಗಕ್ಕಾಗಿ ಮನೆಯಿಂದ ಹೊರಗಡೆ ಹೋಗಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಹೊರಗಡೆ ಹೋದಾಗ ಕೊರೊನಾ ಸೋಂಕು ತಗುಲುವ ಭಯ, ಭೀತಿ, ಆತಂಕ ಸಹಜ.
(ಲೇಖನ: ಎಸ್. ಚಂದ್ರಮೋಹನ್, ಹಿರಿಯ ವರದಿಗಾರ, ಟಿವಿ9) ಹೀಗಾಗಿ ಈ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದಿರುವುದು ಒಳ್ಳೆಯ ಬೆಳವಣಿಗೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಲಸಿಕೆ ಪಡೆದಿರುವುದರಿಂದ ಮನೆಯಿಂದ ಹೊರಗೆ ಉದ್ಯೋಗಕ್ಕೆ ಹೋಗುವವರಿಗೆ ಹೊಸ ಆತ್ಮವಿಶ್ವಾಸ ಕೂಡ ಬರುತ್ತೆ. ಉದ್ಯೋಗದ ಸ್ಥಳದಲ್ಲಿ ಲಸಿಕೆ ಪಡೆದಿದ್ದರೇ, ಎಲ್ಲರಿಗೂ ಒಳ್ಳೆಯದು.
ಸೂಪರ್ ಸೋಮವಾರದ 86 ಲಕ್ಷ ಡೋಸ್ ಪೈಕಿ ಸೋಮವಾರ 78 ಲಕ್ಷ ಡೋಸ್ ಮೊದಲ ಡೋಸ್ ಆಗಿ ಜನರಿಗೆ ನೀಡಲಾಗಿದೆ. ಬರೀ 7.8 ಲಕ್ಷ ಡೋಸ್ ಲಸಿಕೆಯನ್ನು 2ನೇ ಡೋಸ್ ಆಗಿ ಜನರಿಗೆ ನೀಡಲಾಗಿದೆ. ಒಟ್ಟಾರೆ 86 ಲಕ್ಷ ಡೋಸ್ ಪೈಕಿ 2ನೇ ಡೋಸ್ ಅನ್ನು ಶೇ.10 ರಷ್ಟು ಮಾತ್ರ ನೀಡಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ಆದರೆ, ಈಗ ಕೊವಿಶೀಲ್ಡ್ ಲಸಿಕೆಯ 2 ಡೋಸ್ ಗಳ ನಡುವಿನ ಅಂತರವನ್ನು 12-16 ವಾರಕ್ಕೆ ಏರಿಸಿರುವುದರಿಂದ 2ನೇ ಡೋಸ್ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ.
ದೇಶದಲ್ಲಿ 18-44ವರ್ಷ ವಯೋಮಾನದವರ ಪೈಕಿ ಈಗಾಗಲೇ 13.74 ಕೋಟಿ ಜನರು ಕೊರೊನಾ ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಇವರ ಪೈಕಿ 7.9 ಕೋಟಿ ಜನರು ಮಾತ್ರ ಇದುವರೆಗೂ ಕೊರೊನಾ ಲಸಿಕೆ ಪಡೆದಿದ್ದಾರೆ. ಹೀಗಾಗಿ ಯುವಜನತೆಯ ಪೈಕಿ ಇನ್ನೂ ಕೋಟಿಗಟ್ಟಲೇ ಜನರು ಲಸಿಕೆ ಪಡೆಯುವುದು ಬಾಕಿ ಇದೆ.
ಈಗ ದೇಶದಲ್ಲಿ 18-44 ವಯೋಮಾನದವರಿಗೆ ಕೇಂದ್ರ ಸರ್ಕಾರವೇ ಲಸಿಕೆ ಖರೀದಿಸಿ ರಾಜ್ಯಗಳಿಗೆ ಪೂರೈಸುತ್ತಿದೆ. ಹೀಗಾಗಿ ಲಸಿಕಾ ಅಭಿಯಾನಕ್ಕೆ ವೇಗ ಸಿಗುವ ನಿರೀಕ್ಷೆ ಇದೆ. ಕೊರೊನಾದ ಮೂರನೇ ಅಲೆ ಬರುವ ಮುನ್ನವೇ ಯುವಜನತೆಯು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ಪಡೆಯುವ ಮೂಲಕ ಕೊರೊನಾದಿಂದ ತಮ್ಮನ್ನು ಹಾಗೂ ಕುಟುಂಬದ ಆಧಾರ ಸ್ತಂಭವನ್ನು ರಕ್ಷಿಸಬೇಕಾಗಿದೆ.
ಸ್ವದೇಶಿ ಕೊವ್ಯಾಕ್ಸಿನ್ ಲಸಿಕೆ ಪ್ರಭಾವ ಇಳಿಕೆಯಾಗಿದೆ: ಡಿಸಿಜಿಐ ಅಂತಿಮ ಡಾಟಾ ಏನು ಹೇಳುತ್ತದೆ? (super monday for corona vaccination in India)