ಸ್ವದೇಶಿ ಕೊವ್ಯಾಕ್ಸಿನ್ ಲಸಿಕೆ ಪ್ರಭಾವ ಇಳಿಕೆಯಾಗಿದೆ: ಡಿಸಿಜಿಐ ಅಂತಿಮ ಡಾಟಾ ಏನು ಹೇಳುತ್ತದೆ?
Bharat Biotech Covaxin: ಈಗ ಕೋವ್ಯಾಕ್ಸಿನ್ ಲಸಿಕೆಯು 3ನೇ ಹಂತದ ಅಂತಿಮ ಅಂಕಿಅಂಶಗಳ ಪ್ರಕಾರ, ಶೇ.77.8 ರಷ್ಟು ಪರಿಣಾಮಕಾರಿ ಎಂದು ದಾಖಲೆ ಸಲ್ಲಿಸಿರುವುದು ವಿಶೇಷ. ಮಧ್ಯಂತರ ವರದಿಗೆ ಹೋಲಿಸಿದರೇ, ಕೊವ್ಯಾಕ್ಸಿನ್ ಲಸಿಕೆಯ ಪರಿಣಾಮಕಾರಿತನದಲ್ಲಿ ಇಳಿಕೆಯಾಗಿದೆ.
ನಮ್ಮ ಭಾರತದ ಸ್ವದೇಶಿ ಕೊರೊನಾ ಲಸಿಕೆಯಾದ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಅಂತಿಮ ಡಾಟಾ ಬಹಿರಂಗವಾಗಿದೆ. ಮೂರನೇ ಹಂತದ ಪ್ರಯೋಗದಲ್ಲಿ ಕೊವ್ಯಾಕ್ಸಿನ್ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಶೇ. 77.8 ರಷ್ಟು ಪರಿಣಾಮಕಾರಿ ಎಂದು ತಿಳಿದು ಬಂದಿದೆ. 3ನೇ ಹಂತದ ಪ್ರಯೋಗದ ಅಂತಿಮ ಅಂಕಿಅಂಶಗಳನ್ನು ಭಾರತ್ ಬಯೋಟೆಕ್ ಡಿಸಿಜಿಐಗೆ ಸಲ್ಲಿಸಿತ್ತು. ಇದರ ಬಗ್ಗೆ ಇವತ್ತು ಡಿಸಿಜಿಐ ನ ವಿಷಯ ತಜ್ಞರ ಸಮಿತಿಯು ಪರಿಶೀಲನೆ ನಡೆಸಿದೆ. ತನ್ನ ವರದಿಯನ್ನು ಡಿಸಿಜಿಐಗೆ ರವಾನೆ ಮಾಡಿದೆ.
ಅಂತಿಮವಾಗಿ ಕೊವ್ಯಾಕ್ಸಿನ್ ಲಸಿಕೆ ಶೇ.77.8 ರಷ್ಟು ಪರಿಣಾಮಕಾರಿ: ಭಾರತದ ಸ್ವದೇಶಿ ಲಸಿಕೆಯಾದ ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ಅಂತಿಮ ಅಂಕಿಅಂಶಗಳನ್ನು ಇದುವರೆಗೂ ಡಿಸಿಜಿಐಗೆ ಸಲ್ಲಿಸಿರಲಿಲ್ಲ. ಕೇವಲ ಮಧ್ಯಂತರ ಅಂಕಿಅಂಶಗಳ ಆಧಾರದ ಮೇಲೆಯೇ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಒಪ್ಪಿಗೆ ನೀಡಿತ್ತು. ಈಗ ಭಾರತ್ ಬಯೋಟೆಕ್ ಕಂಪನಿಯು ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ಅಂತಿಮ ಅಂಕಿಅಂಶಗಳನ್ನು ಡಿಸಿಜಿಐಗೆ ಸಲ್ಲಿಸಿದೆ. 3ನೇ ಹಂತದ ಅಂತಿಮ ಅಂಕಿಅಂಶಗಳ ಪ್ರಕಾರ, ಕೊವ್ಯಾಕ್ಸಿನ್ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಶೇ.77.8 ರಷ್ಟು ಪರಿಣಾಮಕಾರಿಯಾಗಿದೆ.
3ನೇ ಹಂತದ ವೈದ್ಯಕೀಯ ಪ್ರಯೋಗದ ಮಧ್ಯಂತರ ಅಂಕಿಅಂಶಗಳ ಪ್ರಕಾರ, ಕೊವ್ಯಾಕ್ಸಿನ್ ಲಸಿಕೆಯು ಶೇ. 81 ರಷ್ಟು ವೈರಸ್ ವಿರುದ್ಧ ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ಕಂಪನಿ ಮಾರ್ಚ್ ತಿಂಗಳಲ್ಲಿ ಹೇಳಿತ್ತು. ಆದರೇ, ಈಗ ಕೋವ್ಯಾಕ್ಸಿನ್ ಲಸಿಕೆಯು 3ನೇ ಹಂತದ ಅಂತಿಮ ಅಂಕಿಅಂಶಗಳ ಪ್ರಕಾರ, ಶೇ.77.8 ರಷ್ಟು ಪರಿಣಾಮಕಾರಿ ಎಂದು ದಾಖಲೆ ಸಲ್ಲಿಸಿರುವುದು ವಿಶೇಷ. ಮಧ್ಯಂತರ ವರದಿಗೆ ಹೋಲಿಸಿದರೇ, ಕೊವ್ಯಾಕ್ಸಿನ್ ಲಸಿಕೆಯ ಪರಿಣಾಮಕಾರಿತನದಲ್ಲಿ ಇಳಿಕೆಯಾಗಿದೆ.
ನಮ್ಮ ದೇಶದಲ್ಲಿ ಕೊವಿಶೀಲ್ಡ್ ಲಸಿಕೆಗಿಂತ ಕೊವ್ಯಾಕ್ಸಿನ್ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಹೆಚ್ಚು ಪರಿಣಾಮಕಾರಿ ಎಂಬ ಕಾರಣಕ್ಕೆ ಕೊವ್ಯಾಕ್ಸಿನ್ ಲಸಿಕೆಗೆ ಬಾರಿ ಬೇಡಿಕೆ ಇದೆ. ಈಗಲೂ ಕೂಡ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಗಿಂತ ಕೊವ್ಯಾಕ್ಸಿನ್ ಲಸಿಕೆಯೇ ಹೆಚ್ಚು ಪರಿಣಾಮಕಾರಿ. ಕೊವಿಶೀಲ್ಡ್ ಲಸಿಕೆಯು 3ನೇ ಹಂತದ ವೈದ್ಯಕೀಯ ಪ್ರಯೋಗದ ಅಂತಿಮ ಅಂಕಿಅಂಶಗಳ ಪ್ರಕಾರ, ಶೇ.70 ರಷ್ಟು ಪರಿಣಾಮಕಾರಿ. ಆದರೇ, ಈಗ ಕೊವ್ಯಾಕ್ಸಿನ್ ಲಸಿಕೆಯು ಶೇ.77.8 ರಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.
(ಲೇಖನ: ಎಸ್. ಚಂದ್ರಮೋಹನ್, ಹಿರಿಯ ವರದಿಗಾರ, ಟಿವಿ9)
ಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪನಿಯು 3ನೇ ಹಂತದಲ್ಲಿ 25,800 ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿತ್ತು. ಬಾರಿ ಸಂಖ್ಯೆಯಲ್ಲಿ 3ನೇ ಹಂತದಲ್ಲಿ ಲಸಿಕೆಯ ಪ್ರಯೋಗ ನಡೆದಿರುವುದರಿಂದ 3ನೇ ಹಂತದ ಪ್ರಯೋಗದಲ್ಲಿ ಲಸಿಕೆಯ ಪರಿಣಾಮಕಾರಿತನದ ಡಾಟಾ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಭಾರತ್ ಬಯೋಟೆಕ್ ಹೇಳಿತ್ತು. ಈಗ ನಾಲ್ಕನೇ ಹಂತದ ವೈದ್ಯಕೀಯ ಪ್ರಯೋಗವನ್ನು ನಡೆಸಿ, ಲಸಿಕೆಯ ನಿಜವಾದ ಪರಿಣಾಮಕಾರಿತನದ ಬಗ್ಗೆ ಅಧ್ಯಯನ ನಡೆಸುವುದಾಗಿ ಭಾರತ್ ಬಯೋಟೆಕ್ ಕಂಪನಿ ಹೇಳಿದೆ.
ಭಾರತ್ ಬಯೋಟೆಕ್ ಕಂಪನಿಯು ಜನವರಿಯಿಂದ ಇಲ್ಲಿಯವರೆಗೂ 3 ಹಂತದ ಪ್ರಯೋಗದ ಅಂತಿಮ ಅಂಕಿಅಂಶಗಳನ್ನು ಡಿಸಿಜಿಐ ಗೆ ಸಲ್ಲಿಸದೇ ಇರುವ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈಗ 3ನೇ ಹಂತದ ವೈದ್ಯಕೀಯ ಪ್ರಯೋಗದ ಅಂತಿಮ ಅಂಕಿಅಂಶಗಳನ್ನು ಡಿಸಿಜಿಐ ಗೆ ಸಲ್ಲಿಸಲಾಗಿದೆ. ಇನ್ನೂ ಮುಂದೆ ಕೊವ್ಯಾಕ್ಸಿನ್ ಲಸಿಕೆಯ ಬಗ್ಗೆ ಅಂತಾರಾಷ್ಟ್ರೀಯ ಮೆಡಿಕಲ್ ಜರ್ನಲ್ ಗಳಲ್ಲಿ ಭಾರತ್ ಬಯೋಟೆಕ್ ಕಂಪನಿಯು ಲೇಖನ ಪ್ರಕಟಿಸಲಿದೆ.
ಇನ್ನೂ ಬೇರೆ ಲಸಿಕೆಗಳ ಪರಿಣಾಮಕಾರಿತನದ ಬಗ್ಗೆ ನೋಡುವುದಾದರೇ, ರಷ್ಯಾದ ಸ್ಪುಟ್ನಿಕ್ 5 ಲಸಿಕೆಯು ಶೇ.91.6ರಷ್ಟು ಪರಿಣಾಮಕಾರಿತನ ಹೊಂದಿದೆ. ಆಮೆರಿಕಾದ ಫೈಜರ್ ಕಂಪನಿಯ ಕೊರೊನಾ ಲಸಿಕೆಯು ಶೇ.91.3 ರಷ್ಟು ಪರಿಣಾಮಕಾರಿತನ ಹೊಂದಿದೆ. ಆಮೆರಿಕಾದ ನೋವಾವ್ಯಾಕ್ಸ್ ಲಸಿಕೆಯು ಶೇ.91 ರಷ್ಟು ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿತನ ಹೊಂದಿದೆ.
ಇನ್ನೂ ಜೂನ್ 23ರ ಬುಧವಾರ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳ ಜೊತೆಗೆ ಭಾರತ್ ಬಯೋಟೆಕ್ ಕಂಪನಿಯ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮೋದನೆ ಪಡೆಯುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಾಳಿನ ಸಭೆಯಲ್ಲಿ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಲು ಏನೆಲ್ಲಾ ದಾಖಲೆ ಸಲ್ಲಿಸಬೇಕು, ಯಾವ ಪ್ರಕ್ರಿಯೆ ಅನುಸರಿಸಬೇಕು ಎನ್ನುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಭಾರತ್ ಬಯೋಟೆಕ್ ಕಂಪನಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ.
ಡೆಲ್ಟಾ ರೂಪಾಂತರಿ ವಿರುದ್ಧ ಕೋವಿಡ್-19 ಲಸಿಕೆಗಳ ಪ್ರಭಾವ ಕಡಿಮೆಯಾಗುತ್ತಿದೆ ಎಂದ ವಿಶ್ವ ಆರೋಗ್ಯ ಸಂಸ್ಥೆ (Bharat Biotech company Covaxin vaccine 3rd experiment successful DCGI)