ಬಹುಕೋಟಿ ಮೇವು ಹಗರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲೂಪ್ರಸಾದ್ ಯಾದವ್‌ಗೆ ಜಾರ್ಖಂಡ ಹೈಕೋರ್ಟ್ ಇಂದು ಜಾಮೀನು ನೀಡಿದ್ದು, ಶೀಘ್ರವೇ ಲಾಲೂಪ್ರಸಾದ್ ಯಾದವ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ದೇಶದ ಪ್ರಮುಖ ಕೇಸ್ಗಳಲ್ಲಿ ಒಂದಾದ ಈ ಬಹುಕೋಟಿ ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ದೋಷಿಯೆಂದು ಸಾಬೀತಾಗಿ ಜೈಲು ಸೇರಿದ್ದರು. ಇದೀಗ ಜಾರ್ಖಂಡ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. 1 ಲಕ್ಷ ರೂ.ವೈಯಕ್ತಿಕ ಬಾಂಡ್ ವಿಧಿಸಿದ್ದು, ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗಬಾರದು, ವಿಳಾಸ, ಮೊಬೈಲ್ನಂಬರ್ಗಳನ್ನು ಬದಲಿಸಬಾರದು ಎಂದು ಸೂಚನೆ ನೀಡಿದೆ.
ಲಾಲೂಪ್ರಸಾದ್ ಯಾದವ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಪ್ರತ್ಯುತ್ತರ ಸಲ್ಲಿಸಲು ಸಿಬಿಐ ಅವಕಾಶ ಕೇಳಿತ್ತು. ಹೀಗಾಗಿ ಮುಂದೂಡಲಾಗಿತ್ತು. ಲಾಲೂ ಪ್ರಸಾದ್ ಯಾದವ್ ವಿರುದ್ಧ ಸಿಬಿಐ ಚೈಬಾಸಾ ಹಾಗೂ ದುಮ್ಕಾ ಖಜಾನೆ ಹಗರಣದಡಿ ಪ್ರಕರಣ ದಾಖಲಿಸಿತ್ತು. ಅದರಲ್ಲಿ ಚೈಬಾಸಾ ಹಗರಣಕ್ಕೆ ಸಂಬಂಧಪಟ್ಟಂತೆ 2020ರ ಅಕ್ಟೋಬರ್ನಲ್ಲಿ ಜಾರ್ಖಂಡ ಹೈಕೋರ್ಟ್ ಲಾಲೂಗೆ ಜಾಮೀನು ನೀಡಿತ್ತು. ಆದರೆ ದುಮ್ಕಾ ಖಜಾನೆ ಹಗರಣದಲ್ಲಿ ಜಾಮೀನು ಸಿಗದ ಕಾರಣ ಅವರು ಜೈಲಿನಿಂದ ಹೊರಗೆ ಬಂದಿರಲಿಲ್ಲ. ಇದೀಗ ಈ ಪ್ರಕರಣದಲ್ಲೂ ಬೇಲ್ ಸಿಕ್ಕಂತಾಗಿದ್ದು, ಸದ್ಯದ ಮಟ್ಟಿಗೆ ರಿಲೀಫ್ ಸಿಕ್ಕಿದೆ.
ಲಾಲೂ ವಿರುದ್ಧ ಎರಡು ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದ್ದು, 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅರ್ಧದಷ್ಟು ಶಿಕ್ಷೆ ಪೂರ್ಣಗೊಳಿಸಿದ್ದನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಲಾಲೂ ಪ್ರಸಾದ್ ಯಾದವ್ ಸದ್ಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವು ಪ್ರಕ್ರಿಯೆಗಳ ಬಳಿಕ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಇದನ್ನೂ ಓದಿ: ಬಿಹಾರ ಮಾಜಿ CM ಲಾಲೂ ಪ್ರಸಾದ್ ಯಾದವ್‌ಗೆ ಸಿಕ್ತು ಜಾಮೀನು..