ಬೆಂಗಳೂರು, (ಆಗಸ್ಟ್ 22): ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ (ST Somashekhar) ಬಿಜೆಪಿ ತೊರೆದು ವಾಪಸ್ ಕಾಂಗ್ರೆಸ್ (Congress) ಸೇರುತ್ತಾರೆ ಎನ್ನುವ ಸದ್ದು ಗದ್ದಲ ಜೋರಾಗಿದೆ. ಕಳೆದ ನಾಲ್ಕೈದು ಈ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದರ ಮಧ್ಯೆ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಬಿಎಂಪಿಯಿಂದ ಭರಪೂರ ಅನುದಾನ ನೀಡಲಾಗಿದೆ. ದಾಸರಹಳ್ಳಿ, ಯಲಹಂಕ, ಬೆಂಗಳೂರು ದಕ್ಷಿಣ ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡಲಾಗಿದೆ. ಆದ್ರೆ, ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರಕ್ಕೆ ರಪೂರ ಅನುದಾನ ಬಿಡುಗಡೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಕಾಂಗ್ರೆಸ್ ಸೇರ್ಪಡೆ ಚರ್ಚೆ ಬೆನ್ನಲ್ಲೇ ಸೋಮಶೇಖರ್ ಕ್ಷೇತ್ರಕ್ಕೆ ಹೆಚ್ಚು ಅನುದಾನ ಮಂಜೂರು ಮಾಡಿರುವುದು ಭಾರೀ ಚರ್ಚೆಗೆ ಹಾಗೂ ಕುತೂಹಲ ಮೂಡಿಸಿದೆ. ಅಲ್ಲದೇ ಅನುದಾನ ನಿಡುವ ಮೂಲಕ ಅವರನ್ನು ಕಾಂಗ್ರೆಸ್ಗೆ ಸೆಳೆಯುವ ತಂತ್ರವೇ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಬಿಜೆಪಿ ಶಾಸಕ S.T.ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರಕ್ಕೆ ಬಿಬಿಎಂಪಿಯಿಂದ ಒಟ್ಟು 7 ಕೋಟಿ 63 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ. ಹೇರೋಹಳ್ಳಿ ಹಾಗೂ ಕೆಂಗೇರಿ ಭಾಗಕ್ಕೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಾಗಿ 7.63 ಕೋಟಿ ಅನುದಾನ ನೀಡಲಾಗಿದೆ. ನೀರು ಪೂರೈಸುವ ಟ್ಯಾಂಕರ್‌ಗಳಿಗೆ 1 ಕೋಟಿ 63 ಲಕ್ಷ ರೂ. ಮೀಸಲಿಡಲಾಗಿದೆ. ಹೊಸದಾಗಿ ಬೋರ್ವೆಲ್ ಕೊರೆಸಲು 4 ಕೋಟಿ ರೂಪಾಯಿ ಮೀಸಲು ಹಾಗೂ ನಿರ್ವಹಣೆ ಮಾಡಲು 2 ಕೋಟಿ ರೂಪಾಯಿ ಅನುದಾನ ಮೀಸಲು ಇಡಲಾಗಿದೆ.
ಇದನ್ನೂ ಓದಿ: ಆಪರೇಷನ್ ಹಸ್ತ ಸದ್ದು-ಗದ್ದಲದ ಮಧ್ಯೆ ಸಿದ್ದರಾಮಯ್ಯ ಭೇಟಿಯಾದ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್
ಇನ್ನು ಎಸ್ಟಿ ಸೋಮಶೇಖರ್ ಅವರನ್ನು ಕಾಂಗ್ರೆಸ್ಗೆ ಕರೆತರಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆ ಇದೀಗ ಅನುದಾನ ನೀಡಿದಲ್ಲದೇ ಖುದ್ದು ಡಿಕೆ ಶಿವಕುಮಾರ್ ಅವರು ಯಶವಂತಪುರ ಕ್ಷೇತ್ರಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ. ಹೌದು…ಇದೇ ಆಗಸ್ಟ್ 26ರಂದು ಯಶವಂತಪುರ ಕ್ಷೇತ್ರಕ್ಕೆ ಡಿಸಿಎಂ ಡಿಕೆಶಿ ಭೇಟಿ ನೀಡಲಿದ್ದು, ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆ.
ಯಶವಂತಪುರ ಕ್ಷೇತ್ರದಲ್ಲಿ ಕೆಲ ಮೂಲ ಬಿಜೆಪಿಗರ ನಡೆಯಿಂದ ಬೇಸತ್ತು ಅಸಮಾಧಾನಗೊಂಡಿರುವ ಶಾಸಕ ಎಸ್ಟಿ ಸೋಮಶೇಖರ್ ನಿನ್ನೆ ಅಷ್ಟೇ (ಆಗಸ್ಟ್ 21) ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದರು. ಬೆಂಗಳೂರಿನಲ್ಲಿ ಸಿಎಂ ಅಧಿಕೃತ ನಿವಾಸದಲ್ಲಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಯಶವಂತಪುರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದ್ದರು. ಈ ವೇಳೆ ತಮ್ಮ ಕ್ಷೇತ್ರದ ಕಾರ್ಯಗಳ ಬಗ್ಗೆ ಒಟ್ಟು ಎರಡು ಮನವಿ ಪತ್ರ ಸಲ್ಲಿಸಿದ್ದರು. ಭೇಟಿಯಾದ 24 ಗಂಟೆಗಳಲ್ಲೇ ಸೋಮಶೇಖರ್ ಕ್ಷೇತ್ರದಕ್ಕೆ ಅನುದಾನ ಹರಿದುಬಂದಿದ್ದು, ಅಚ್ಚರಿಕೆ ಕಾರಣವಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ