ಈ ಮಾಜಿ ಸಂಸದನ ಮನೆಯಲ್ಲಿರುವ ಕೆಲಸಗಾರರ ಹೆಸರಲ್ಲಿದೆ ಒಂಬತ್ತು ಕಂಪೆನಿ!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 23, 2020 | 4:35 PM

ಅಕ್ರಮವಾಗಿ ಹಣ ವಹಿವಾಟು ಮಾಡುವ ಉದ್ದೇಶದಿಂದ 9 ನಕಲಿ ಕಂಪೆನಿಗಳನ್ನು ರಾಯಪತಿ ಸೃಷ್ಟಿ ಮಾಡಿದ್ದ. ರಾಯಪತಿ ಕೆನರಾ ಬ್ಯಾಂಕ್​ ಸೇರಿ 13 ಬ್ಯಾಂಕ್​ಗಳಿಂದ ಬರೋಬ್ಬರಿ 9,394 ಕೋಟಿ ರೂಪಾಯಿ ಸಾಲ ಪಡೆದಿದ್ದ ಎನ್ನಲಾಗಿದೆ.

ಈ ಮಾಜಿ ಸಂಸದನ ಮನೆಯಲ್ಲಿರುವ ಕೆಲಸಗಾರರ ಹೆಸರಲ್ಲಿದೆ ಒಂಬತ್ತು ಕಂಪೆನಿ!
ರಾಯಪತಿ
Follow us on

ಹೈದರಾಬಾದ್​:  ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ₹ 7,296 ಕೋಟಿ ಬ್ಯಾಂಕ್​ ವಂಚನೆ ಪ್ರಕರಣದಲ್ಲಿ ಟ್ರಾನ್ಸ್‌ಸ್ಟ್ರಾಯ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ಥಾಪಕ ಹಾಗೂ ಟಿಡಿಪಿ ಮಾಜಿ ಸಂಸದ ರಾಯಪತಿ ಸಾಂಬಶಿವ ರಾವ್​​ ಹೆಸರನ್ನು ಮುಖ್ಯ ಆರೋಪಿ ಸ್ಥಾನದಲ್ಲಿರಿಸಿದೆ. ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಬ್ಯಾಂಕ್​ ವಂಚನೆ ಪ್ರಕರಣದಲ್ಲಿ ಇದು ಕೂಡ ಒಂದು ಎಂದು ಹೇಳಲಾಗಿದೆ.

ಇಲ್ಲೊಂಚು ಅಚ್ಚರಿಯ ವಿಚಾರವಿದೆ. ವಂಚನೆ ಎಸಗುವ ಉದ್ದೇಶದಿಂದ ರಾಯಪತಿ ಸಾಕಷ್ಟು ಬೇನಾಮಿ ಕಂಪೆನಿಗಳನ್ನು ಸೃಷ್ಟಿ ಮಾಡಿದ್ದ. ಈ ಕಂಪೆನಿಗಳು ಇವರ ಮನೆಯಲ್ಲಿ ಕೆಲಸ ಮಾಡುವ ಕಾರು ಚಾಲಕರು, ಕಸ ಗುಡಿಸುವವರು ಹಾಗೂ ಅಡುಗೆ ಮಾಡುವವರ ಹೆಸರಲ್ಲಿದೆ ಎಂದು ಸಿಬಿಐ ದೋಷಾರೋಪಪಟ್ಟಿಯಲ್ಲಿ ಹೇಳಿದೆ.

ಅಕ್ರಮವಾಗಿ ಹಣ ವಹಿವಾಟು ಮಾಡುವ ಉದ್ದೇಶದಿಂದ 9 ನಕಲಿ ಕಂಪೆನಿಗಳನ್ನು ರಾಯಪತಿ ಸೃಷ್ಟಿ ಮಾಡಿದ್ದ. ರಾಯಪತಿ ಕೆನರಾ ಬ್ಯಾಂಕ್​ ಸೇರಿ 13 ಬ್ಯಾಂಕ್​ಗಳಿಂದ ಬರೋಬ್ಬರಿ ₹ 9,394 ಕೋಟಿ ರೂಪಾಯಿ ಸಾಲ ಪಡೆದಿದ್ದ ಎನ್ನಲಾಗಿದೆ. ಬೆಂಗಳೂರಿನಲ್ಲಿ ಸಿಬಿಐನ ಬ್ಯಾಂಕಿಂಗ್ ವಂಚನೆ ಮತ್ತು ಸೆಕ್ಯುರಿಟೀಸ್ ಘಟಕವು ಈಗ ಟ್ರಾನ್ಸ್‌ಸ್ಟ್ರಾಯ್, ರಾಯಪತಿ ಸಾಂಬಶಿವ ರಾವ್, ಕಂಪನಿಯ ಸಿಎಂಡಿ ಚೆರುಕುರಿ ಶ್ರೀಧರ್ ಮತ್ತು ನಿರ್ದೇಶಕ ಅಕ್ಕಿನೇನಿ ಸತೀಶ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿದೆ.

ಆದರೆ, ಈ ಪ್ರಕರಣದ ಬಗ್ಗೆ ರಾಯಪತಿ ಹೇಳೋದೇ ಬೇರೆ. ಸಿಬಿಐ ತಪ್ಪಾಗಿ ಪ್ರಕರಣ ದಾಖಲು ಮಾಡಿದೆ. ನಾನು ಬ್ಯಾಂಕ್​ನಿಂದ ಕೇವಲ ₹ 700 ಕೋಟಿ ಸಾಲ ಪಡೆದಿದ್ದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

9 ಬೇನಾಮಿ ಕಂಪೆನಿ ಸೃಷ್ಟಿ
ರಾಯಪತಿ 9 ನಕಲಿ ಕಂಪೆನಿ ಸೃಷ್ಟಿ ಮಾಡಿದ್ದ. ಪದ್ಮಾವತಿ ಎಂಟರ್​​ಪ್ರೈಸಸ್​, ಬಾಲಾಜಿ ಎಂಟರ್​​ಪ್ರೈಸಸ್​, ಋತ್ವಿಕ್​ ಅಸೋಸಿಯೇಟ್ಸ್​​, ಉನಿಕ್​ ಇಂಜಿನಿಯರ್ಸ್​, ಶುಭಕಾರಿ ಎಂಟರ್​​ಪ್ರೈಸಸ್​, ಅಗಸ್ತ್ಯ ಟ್ರೇಡ್​ ಲಿಂಕ್ಸ್​, ಖನಲಾ ಟ್ರೇಡಿಂಗ್​, ಎಎಸ್​ ಅಸೋಸಿಯೇಟ್ಸ್​ ಮತ್ತು ವಿಜಯ ಇಂಜಿನಿಯರಿಂಗ್​ ಹೆಸರಿನ ಕಂಪೆನಿಗಳನ್ನು ರಾಯಪತಿ ಸ್ಥಾಪಿಸಿದ್ದ. ಇವರ ಮನೆಯ ಕೆಲಸದವರ ಹೆಸರನ್ನು ಇದಕ್ಕೆ ಬಳಕೆ ಮಾಡಿಕೊಂಡಿದ್ದ.

ಸಿಬಿಐ ಹೇಳುವ ಪ್ರಕಾರ ಟ್ರಾನ್ಸ್‌ಸ್ಟ್ರಾಯ್ ಖಾತೆಯಲ್ಲಿದ್ದ ₹ 7,153 ಕೋಟಿ ರೂಪಾಯಿ ಈ ಬೇನಾಮಿ ಕಂಪೆನಿಗಳ ಖಾತೆಗೆ ವರ್ಗಾವಣೆ ಆಗಿತ್ತು. ನಂತರ ₹ 6,202 ಕೋಟಿ ಟ್ರಾನ್ಸ್‌ಸ್ಟ್ರಾಯ್ ಖಾತೆಗೆ ಮರಳಿತ್ತು. ವಾಹನ ಖರೀದಿಗೆ ಒಂದಷ್ಟು ಹಣ ಬಳಕೆ ಮಾಡಿರುವುದಾಗಿ ಈ ಬೇನಾಮಿ ಕಂಪೆನಿಗಳು ಉಲ್ಲೇಖ ಮಾಡಿದ್ದವು. ಇನ್ನು ಕಂಪೆನಿಯ ಪ್ರಮೋಟರ್​ಗಳ ಖಾತೆಗೆ 350 ಕೋಟಿ ರೂಪಾಯಿ ವರ್ಗಾವಣೆ ಆಗಿತ್ತು. ಈ ಎಲ್ಲ ವಿಚಾರಗಳನ್ನು ದೋಷಾರೋಪಪಟ್ಟಿಯಲ್ಲಿ ಸಿಬಿಐ ಉಲ್ಲೇಖಿಸಿದೆ.

ಸಾಯುವುದಕ್ಕೂ ಮೊದಲು 3 ಲಕ್ಷಕ್ಕೆ ಜೀವವಿಮೆ ಖರೀದಿಸಿದ್ದ ತಾಲಿಬಾನ್​ ಮುಖ್ಯಸ್ಥ!