ಭಾರತಕ್ಕೆ ಬಂದ ಪುಟಿನ್ ಹೋಟೆಲ್ ಊಟ ಮಾಡೋದಿಲ್ಲ; ರಷ್ಯಾ ಅಧ್ಯಕ್ಷರ ಡಯೆಟ್ ಹೇಗಿರಲಿದೆ ಗೊತ್ತಾ?

18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS) ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನವದೆಹಲಿಗೆ ಆಗಮಿಸಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಬೇರೆ ದೇಶಗಳ ನಾಯಕರಿಗಿಂತಲೂ ಹೆಚ್ಚಿನ ಭದ್ರತೆ ಇರುತ್ತದೆ. ಬೇರೆ ದೇಶಕ್ಕೆ ಹೋದಾಗಲೂ ಅವರಿಗೆ ಅವರೇ ಕಾರು, ಡಜನ್​ಗಟ್ಟಲೆ ಬೆಂಗಾವಲು ವಾಹನಗಳು, ಪ್ರತ್ಯೇಕ ಡಯಟ್ ವ್ಯವಸ್ಥೆ ಮಾಡಲಾಗುತ್ತದೆ. ಪುಟಿನ್ ಅವರ ಮೂತ್ರ, ಮಲವನ್ನು ಕೂಡ ವಾಪಾಸ್​ ರಷ್ಯಾಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂಬ ಸುದ್ದಿಗಳೂ ಇವೆ. ಹಾಗಾದರೆ, ಭಾರತಕ್ಕೆ ಬಂದಿರುವ ಪುಟಿನ್ ಅವರ ಊಟದ ವ್ಯವಸ್ಥೆಯೇನು? ಇಲ್ಲಿ ಅವರೇನು ತಿನ್ನುತ್ತಾರೆ? ಎಂಬುದರ ಮಾಹಿತಿ ಇಲ್ಲಿದೆ.

ಭಾರತಕ್ಕೆ ಬಂದ ಪುಟಿನ್ ಹೋಟೆಲ್ ಊಟ ಮಾಡೋದಿಲ್ಲ; ರಷ್ಯಾ ಅಧ್ಯಕ್ಷರ ಡಯೆಟ್ ಹೇಗಿರಲಿದೆ ಗೊತ್ತಾ?
Putin In Brics Summit
Image Credit source: PTI

Updated on: Sep 11, 2026 | 10:38 PM

ನವದೆಹಲಿ, ಸೆಪ್ಟೆಂಬರ್ 11: ಸೆಪ್ಟೆಂಬರ್ 12 ಮತ್ತು 13ರಂದು ದೆಹಲಿಯ ‘ಭಾರತ ಮಂಟಪ’ದಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೆಹಲಿಗೆ ಆಗಮಿಸಿದ್ದಾರೆ. ನವದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಜಾಗತಿಕ ನಾಯಕರ ಆತಿಥ್ಯಕ್ಕಾಗಿ ಪ್ರಸಿದ್ಧ ಪಂಚತಾರಾ ಹೋಟೆಲ್‌ಗಳು ವಿಶಿಷ್ಟ ಖಾದ್ಯಗಳನ್ನು ಸಿದ್ಧಪಡಿಸುತ್ತಿದ್ದರೂ ಪುಟಿನ್ ಆಹಾರದ ನಿಯಮಗಳು ಮಾತ್ರ ಬೇರೆಯೇ ಇದೆ.

ಜಗತ್ತಿನ ಬೇರೆ ದೇಶಗಳ ನಾಯಕರಿಗೆ ಹೋಲಿಸಿದರೆ ಅತ್ಯಂತ ಕಟ್ಟುನಿಟ್ಟಿನ ಹಾಗೂ ಭದ್ರತಾ ವ್ಯವಸ್ಥೆಯುಳ್ಳ ಆಹಾರ ಕ್ರಮವನ್ನು ಹೊಂದಿರುವ ಪುಟಿನ್, ವಿದೇಶಿ ಪ್ರವಾಸಗಳ ವೇಳೆ ಆ ದೇಶದ ಅಥವಾ ಹೋಟೆಲ್​ನ ಊಟವನ್ನು ನೆಚ್ಚಿಕೊಳ್ಳುವುದಿಲ್ಲ. ಅವರು ರಷ್ಯಾದಿಂದಲೇ ತಮ್ಮ ಸ್ವಂತ ಬಾಣಸಿಗರು ಹಾಗೂ ಭದ್ರತಾ ಸಿಬ್ಬಂದಿಯ ತಂಡದೊಂದಿಗೆ ಪ್ರಯಾಣಿಸುತ್ತಾರೆ. ಅವರು ಪುಟಿನ್​ಗೆ ಬೇಕಾದ ಹಾಗೂ ಅವರ ಆರೋಗ್ಯಕ್ಕೆ ಹೊಂದುವ ಆಹಾರವನ್ನು ತಯಾರಿಸಿ ಕೊಡುತ್ತಾರೆ.

ನಾಲ್ಕು ಹಂತದ ಭದ್ರತೆ:

ರಷ್ಯಾ ಅಧ್ಯಕ್ಷ ಪುಟಿನ್ ಅವರ ರಕ್ಷಣೆಗೆ ವೈಯಕ್ತಿಕ ಅಂಗರಕ್ಷಕರು, ರಹಸ್ಯ ಭದ್ರತಾ ಸಿಬ್ಬಂದಿ, ಸುತ್ತುವರಿದ ಪರಿಧಿ ಕಾವಲುಪಡೆ ಹಾಗೂ ಸದಾ ಸಜ್ಜಾಗಿರುವ ‘ಸ್ನೈಪರ್’ ಪಡೆಯನ್ನು ಒಳಗೊಂಡಂತೆ 4 ಹಂತದ ವ್ಯವಸ್ಥೆ ಇರುತ್ತದೆ. ಪ್ರತಿಯೊಂದು ಖಾದ್ಯ ಮತ್ತು ಪಾನೀಯಗಳನ್ನು ಪುಟಿನ್ ಅವರಿಗೆ ಬಡಿಸುವ ಮೊದಲು, ಅಧಿಕೃತ ಆಹಾರ ಪರೀಕ್ಷಕರು ಅದನ್ನು ಸೇವಿಸಿ ಪರೀಕ್ಷಿಸುತ್ತಾರೆ. ರಷ್ಯಾದಿಂದಲೇ ತಂದ ಅಥವಾ ತೀವ್ರ ತಪಾಸಣೆಗೆ ಒಳಪಡಿಸಿದ ಪದಾರ್ಥಗಳನ್ನು ಬಳಸಿ, ಪ್ರತ್ಯೇಕ ಸುರಕ್ಷಿತ ಅಡುಗೆಮನೆಯಲ್ಲಿ ‘ಮೊಬೈಲ್ ಫುಡ್ ಟೆಸ್ಟಿಂಗ್’ ಉಪಕರಣಗಳ ನೆರವಿನಿಂದ ಆಹಾರ ಸಿದ್ಧಪಡಿಸಲಾಗುತ್ತದೆ.

ಇದನ್ನೂ ಓದಿ: ಸಿರಿಧಾನ್ಯಗಳಿಂದ ಸಿಹಿ ತಿಂಡಿಗಳವರೆಗೆ; ಬ್ರಿಕ್ಸ್ ಶೃಂಗಸಭೆಯ ಅತಿಥಿಗಳ ಮೆನುವಿನಲ್ಲಿ ಏನಿರಲಿದೆ?

ಅಧಿಕೃತ ಭೋಜನಕೂಟಗಳಲ್ಲೂ ಪ್ರತ್ಯೇಕತೆ:

ಭಾರತಕ್ಕೆ ಆಗಮಿಸಿದ ಪುಟಿನ್​ಗೆ ಬೇರೆ ನಾಯಕರ ಜೊತೆ ಪ್ರಧಾನಿ ಮೋದಿ ಔತಣಕೂಟವನ್ನು ಆಯೋಜಿಸಿದ್ದರೂ ಅವರಿಗೆ ನಮ್ಮ ದೇಶದ ಆಹಾರದ ಬದಲಿಗೆ ರಷ್ಯಾದ ಅವರ ತಂಡವೇ ತಯಾರಿಸಿದ ಖಾದ್ಯಗಳನ್ನು ನೀಡಲಾಗುತ್ತದೆ.

ಪುಟಿನ್ ಏನು ತಿನ್ನುತ್ತಾರೆ?:

ಅವರ ಆಹಾರ ಭದ್ರತೆಯು ತೀವ್ರವಾಗಿದ್ದರೂ, ಅವರ ದೈನಂದಿನ ಆಹಾರ ಪದ್ಧತಿ ಪ್ರೋಟೀನ್‌ನಿಂದ ಕೂಡಿದ್ದು ಅತ್ಯಂತ ಸರಳವಾಗಿದೆ. ಪುಟಿನ್ ಬೆಳಗಿನ ಉಪಹಾರಕ್ಕೆ ‘ತ್ವೊರೊಗ್’ ಎಂಬ ರಷ್ಯನ್ ಶೈಲಿಯ ಕಾಟೇಜ್ ಚೀಸ್ ಜೊತೆಗೆ ಜೇನುತುಪ್ಪ ಅಥವಾ ರವೆ ಗಂಜಿ ತಿನ್ನುತ್ತಾರೆ. ಜೊತೆಗೆ ತಾಜಾ ಹಣ್ಣಿನ ರಸ, ಆಮ್ಲೆಟ್ ಅಥವಾ ಹಸಿ ಮೊಟ್ಟೆಗಳನ್ನು ಸೇವಿಸುತ್ತಾರೆ.

ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಗೆ ದೆಹಲಿ ಸಜ್ಜು; ಕ್ಸಿ ಜಿನ್‌ಪಿಂಗ್, ಪುಟಿನ್‌ಗೆ ಹೇಗಿರಲಿದೆ ಹೋಟೆಲ್ ವ್ಯವಸ್ಥೆ?

ಮಧ್ಯಾಹ್ನದ ಊಟಕ್ಕೆ ಪುಟಿನ್ ಅವರಿಗೆ ತಾಜಾ ಹಾಗೂ ಹಬೆಯಲ್ಲಿ ಬೇಯಿಸಿದ ಮೀನಿನ ಖಾದ್ಯಗಳು, ಕುರಿ ಮಾಂಸ, ಹಾಗೂ ಟೊಮ್ಯಾಟೊ-ಸೌತೆಕಾಯಿಯಿಂದ ಮಾಡಿದ ಸರಳ ಸಲಾಡ್‌ಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಪುಟಿನ್ ಆಗಾಗ ತಾಜಾ ಜ್ಯೂಸ್‌ಗಳು, ಕೆಫಿರ್, ಹರ್ಬಲ್ ಟೀ ಹಾಗೂ ಬೀಟ್‌ರೂಟ್ ಮತ್ತು ‘ಹಾರ್ಸ್‌ರಾಡಿಶ್’ ಹೊಂದಿದ ಸಾಂಪ್ರದಾಯಿಕ ರಷ್ಯನ್ ಪಾನೀಯಗಳನ್ನು ಸೇವಿಸುತ್ತಾರೆ.

ಪುಟಿನ್ ಇಷ್ಟದ ಸ್ವೀಟ್ ಯಾವುದು?:

ಪುಟಿನ್ ಅವರು ಸಾಮಾನ್ಯವಾಗಿ ಹೆಚ್ಚು ಮಸಾಲೆಯುಕ್ತ ಖಾದ್ಯಗಳು, ಸಿಹಿ ತಿಂಡಿಗಳು ಮತ್ತು ಕೇಕ್-ಪೇಸ್ಟ್ರಿಗಳನ್ನು ಸೇವಿಸುವುದಿಲ್ಲ. ಆದರೆ, ತೀರಾ ಅಪರೂಪಕ್ಕೆ ಅವರು ತಮ್ಮ ಫೇವರಿಟ್ ತಿಂಡಿಯಾದ ‘ಪಿಸ್ತಾ ಐಸ್‌ಕ್ರೀಮ್’ ಸೇವಿಸುತ್ತಾರೆ.

ಸೆಪ್ಟೆಂಬರ್ 12 ಮತ್ತು 13ರಂದು ದೆಹಲಿಯ ‘ಭಾರತ ಮಂಟಪ’ದಲ್ಲಿ ನಡೆಯಲಿರುವ ಈ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಂಡೋನೇಷ್ಯಾ, ಇರಾನ್ ಮತ್ತು ಯುಎಇ ಸೇರಿದಂತೆ ಹಲವು ದೇಶಗಳ ನಾಯಕರು ಭಾಗವಹಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us