ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷದ (Russia-Ukraine Crisis) ನಡುವೆ ಉಕ್ರೇನ್‌ನಲ್ಲಿರುವ ಕೆಲವು ಭಾರತೀಯ ವಿದ್ಯಾರ್ಥಿಗಳ ಪೋಷಕರು ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಉಕ್ರೇನ್ ನಡುವೆ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಭಾರತ ಚಿಂತಿಸುತ್ತಿದೆ. ಭಾರತ ಮತ್ತು ಉಕ್ರೇನ್ ನಡುವಿನ ವಿಮಾನಗಳ ಸಂಖ್ಯೆಯನ್ನು ಹೇಗೆ ಹೆಚ್ಚಿಸುವುದು ಎಂಬುದರ ಕುರಿತು ನಾಗರಿಕ ವಿಮಾನಯಾನ ಅಧಿಕಾರಿಗಳು ಮತ್ತು ವಿವಿಧ ವಿಮಾನಯಾನ ಸಂಸ್ಥೆಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಕೈವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಸಲಹೆಯನ್ನು ನೀಡಿದ ಬೆನ್ನಲ್ಲೇ ಈ ಹೇಳಿಕೆ ನೀಡಲಾಗಿದೆ. ರಷ್ಯಾ ಮತ್ತು ನ್ಯಾಟೋ ದೇಶಗಳ ನಡುವಿನ ಉದ್ವಿಗ್ನತೆಯ ಮಧ್ಯೆ ಉಕ್ರೇನ್‌ನಲ್ಲಿರುವ ತನ್ನ ಪ್ರಜೆಗಳಿಗೆ ಆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ ಎಂದು ಇಂಡಿಯಾ ಟುಡೇ ಮಾಹಿತಿ ನೀಡಿದೆ.
ಸದ್ಯ, ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ಆದಷ್ಟು ಬೇಗ ಅವರನ್ನು ವಿಮಾನದಲ್ಲಿ ಮನೆಗೆ ಕರೆತರಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳು ಮತ್ತು ಭಾರತದಲ್ಲಿನ ಅವರ ಕುಟುಂಬಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ರಾಯಭಾರ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿನ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
Embassy of India in Kyiv continues to monitor the situation on a regular basis. Some FAQs for Indian citizens are placed below, and all citizens are advised to go through the same. @MEAIndia @DrSJaishankar @PIB_India @DDNewslive @DDNewsHindi @IndiainUkraine @IndianDiplomacy pic.twitter.com/mAJXu3f2Ux
— India in Ukraine (@IndiainUkraine) February 16, 2022
ಉಕ್ರೇನ್ ಗಡಿಯಿಂದ ಸಂಪೂರ್ಣವಾಗಿ ತನ್ನ ದೇಶದ ಸೇನಾ ತುಕಡಿಗಳನ್ನು ವಾಪಾಸ್ ಪಡೆಯುವುದಾಗಿ ರಷ್ಯಾ ಘೋಷಿಸಿದೆ. ಹಾಗೇ, ಉಕ್ರೇನ್‌ನ ಗಡಿಯಿಂದ ಮೊದಲ ಸೇನಾ ತಂಡವನ್ನು ವಾಪಾಸ್ ಕರೆಸಿಕೊಳ್ಳುತ್ತಿರುವ ವಿಡಿಯೋ ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾಗಿದೆ. ರಷ್ಯನ್ ಸೈನಿಕರ ತಂಡ ರಷ್ಯಾದ ನಿಯಂತ್ರಿತ ದ್ವೀಪವನ್ನು ಸಂಪರ್ಕಿಸುವ ಸೇತುವೆಯನ್ನು ದಾಟುತ್ತಿರುವ ಫೋಟೋಗಳನ್ನು ವಾಹಿನಿಗಳು ಪ್ರಸಾರ ಮಾಡಿವೆ. ಈ ಕುರಿತು ಮಾಹಿತಿ ನೀಡಿರುವ ರಷ್ಯಾ ವಿದೇಶಾಂಗ ಇಲಾಖೆಯ ವಕ್ತಾರ, ಕ್ರೈಮಿಯಾದಲ್ಲಿ ಹಮ್ಮಿಕೊಂಡಿದ್ದ ಮಿಲಿಟರಿ ಕಾರ್ಯಾಚರಣೆ ಮುಕ್ತಾಯವಾಗಿದೆ.
ಮಂಗಳವಾರ ತನ್ನ ಕೆಲವು ಸೇನಾ ತುಕಡಿಗಳನ್ನು ಉಕ್ರೇನ್ ಗಡಿಯಿಂದ ಹಿಂಪಡೆದಿದ್ದ ರಷ್ಯಾ ಇಂದು ಸಂಪೂರ್ಣವಾಗಿ ಸೇನಾ ತುಕಡಿಗಳನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಮತ್ತೊಂದು ಮಹಾಯುದ್ಧದ ಭೀತಿ ದೂರವಾದಂತಾಗಿದೆ. ದಕ್ಷಿಣ ಮಿಲಿಟರಿ ಘಟಕಗಳು ಯುದ್ಧತಂತ್ರದ ಚಟುವಟಿಕೆಗಳಲ್ಲಿ ಭಾಗವಹಿಸಿದ ನಂತರ ತಮ್ಮ ಮೂಲ ನೆಲೆಗೆ ವಾಪಾಸ್ ಹೋಗುತ್ತಿವೆ ಎಂದು ಮಾಸ್ಕೋದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಷ್ಯಾದ ಟ್ಯಾಂಕ್‌ಗಳು, ಪದಾತಿ ದಳದ ವಾಹನಗಳು ಮತ್ತು ಫಿರಂಗಿಗಳು ಕ್ರೈಮಿಯಾದಿಂದ ರೈಲಿನ ಮೂಲಕ ಹೊರಡುತ್ತಿವೆ.
ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಗಡಿಯಲ್ಲಿ ಯುದ್ಧ ಘೋಷಿಸುವ ಸಾಧ್ಯತೆ ಇದ್ದುದರಿಂದ ಭಾರತ ಕೂಡ ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವುದನ್ನು ಪರಿಗಣಿಸುವಂತೆ ಸಲಹೆ ನೀಡಿತ್ತು. ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಅನಿಶ್ಚಿತತೆಯ ದೃಷ್ಟಿಯಿಂದ, ಭಾರತೀಯ ಪ್ರಜೆಗಳು, ಅಲ್ಲೇ ಉಳಿಯಲು ಅನಿವಾರ್ಯವಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ದೇಶವನ್ನು ತೊರೆಯುವುದನ್ನು ಪರಿಗಣಿಸಬಹುದು ಎಂದು ಕೈವ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಸೂಚಿಸಿತ್ತು. ಹಾಗೇ, ಭಾರತೀಯ ಪ್ರಜೆಗಳು ಉಕ್ರೇನ್‌ನ ಯಾವ ಪ್ರದೇಶದಲ್ಲಿ ಇರುತ್ತೀರಿ ಎನ್ನುವ ಬಗ್ಗೆ ರಾಯಭಾರ ಕಚೇರಿಗೆ ತಿಳಿಸಲು ವಿನಂತಿಸಲಾಗಿದೆ, ರಾಯಭಾರ ಕಚೇರಿಯು ಅಗತ್ಯವಿದ್ದಾಗ ಅವರನ್ನು ತಲುಪಲು ಸಹಾಯ ಮಾಡಲಿದೆ ಎಂದು ಸಂದೇಶ ರವಾನಿಸಲಾಗಿತ್ತು. ಆದರೆ, ಇದೀಗ ಉಕ್ರೇನ್ ಗಡಿಯ ಕ್ರೈಮಿಯಾದಿಂದ ತನ್ನ ಸೇನಾಪಡೆಯನ್ನು ಹಿಂಪಡೆಯುವುದಾಗಿ ರಷ್ಯಾ ಘೋಷಿಸಿದೆ.
ಇದನ್ನೂ ಓದಿ: Russia-Ukraine Crisis: ಉಕ್ರೇನ್ ಗಡಿಯಲ್ಲಿ ರಷ್ಯನ್ ಮಿಲಿಟರಿ ಕಾರ್ಯಾಚರಣೆ ಅಂತ್ಯ; ಸೇನಾ ಪಡೆಯನ್ನು ಹಿಂಪಡೆದ ರಷ್ಯಾ