ಉಕ್ರೇನ್ ಮೇಲೆ ಯುದ್ಧದ ಕಾರ್ಮೋಡ; ತಾತ್ಕಾಲಿಕವಾಗಿ ದೇಶ ತೊರೆಯುವಂತೆ ಅಲ್ಲಿರುವ ಭಾರತೀಯರಿಗೆ ಸೂಚನೆ ನೀಡಿದ ರಾಯಭಾರಿ ಕಚೇರಿ
ಉಕ್ರೇನ್ ರಾಜಧಾನಿ ಕೀವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಇದೀಗ ಒಂದು ಪ್ರಕಟಣೆ ಹೊರಡಿಸಿದೆ. ಉಕ್ರೇನ್ನಲ್ಲಿ ಸದ್ಯ ಯುದ್ಧಭೀತಿ ಆವರಿಸಿದ್ದು, ಅನಿಶ್ಚಿತತೆ ಪರಿಸ್ಥಿತಿ ಇದೆ. ಉಕ್ರೇನ್ನಲ್ಲಿರುವ ಭಾರತೀಯರು ಅದರಲ್ಲೂ ವಿದ್ಯಾರ್ಥಿಗಳು ಇಲ್ಲಿರುವುದು ಸುರಕ್ಷಿತವಲ್ಲ ಎಂದು ಹೇಳಿದೆ.
ದೆಹಲಿ: ರಷ್ಯಾ-ಉಕ್ರೇನ್ ಗಡಿಯಲ್ಲಿ (Ukraine-Russia Development) ಯುದ್ಧದ ಕಾರ್ಮೋಡ ಕವಿದಿದೆ. ಉಕ್ರೇನ್ನ್ನು ರಷ್ಯಾ ಮೂರು ಭಾಗಗಳಲ್ಲಿ ಸುತ್ತುವರಿದಿದ್ದು, ಲಕ್ಷಗಳಷ್ಟು ಸೈನಿಕರನ್ನು ನಿಯೋಜಿಸಿದೆ. ಅಪಾರ ಪ್ರಮಾಣದ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಅಲ್ಲಿ ಸಂಗ್ರಹಿಸಿಟ್ಟಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಭಾರತ, ಉಕ್ರೇನ್ (Ukraine)ನಲ್ಲಿರುವ ತನ್ನ ಪ್ರಜೆಗಳಿಗೆ ತಾತ್ಕಾಲಿಕವಾಗಿ ದೇಶವನ್ನು ತೊರೆದು ಭಾರತಕ್ಕೆ (India) ಬರುವಂತೆ ಸೂಚಿಸಿದೆ. ಉಕ್ರೇನ್ನಲ್ಲಿ ಸುಮಾರು 20 ಸಾವಿರ ಮಂದಿ ಭಾರತೀಯರು ಇದ್ದಾರೆ. ಅದರಲ್ಲಿ ಬಹುತೇಕರು ಅಂದರೆ ಸುಮಾರು 18 ಸಾವಿರ ಮಂದಿ ವಿದ್ಯಾರ್ಥಿಗಳೇ ಆಗಿದ್ದಾರೆ. ಇತ್ತೀಚೆಗೆ ಉಕ್ರೇನ್-ರಷ್ಯಾ ಬೆಳವಣಿಗೆ ಬಗ್ಗೆ ಅಲ್ಲಿನ ಸುದ್ದಿ ಮಾಧ್ಯಮವೊಂದು ವಿದ್ಯಾರ್ಥಿಗಳನ್ನು ಒಳಗೊಂಡ ಪ್ಯಾನಲ್ ಡಿಸ್ಕಶನ್ ನಡೆಸಿತ್ತು. ಅದರಲ್ಲಿ ಭಾರತೀಯ ವಿದ್ಯಾರ್ಥಿಗಳೂ ಪಾಲ್ಗೊಂಡು, ಸದ್ಯದ ಅನಿಶ್ಚಿತತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಇದೀಗ ಒಂದು ಪ್ರಕಟಣೆ ಹೊರಡಿಸಿದೆ. ಉಕ್ರೇನ್ನಲ್ಲಿ ಸದ್ಯ ಯುದ್ಧಭೀತಿ ಆವರಿಸಿದ್ದು, ಅನಿಶ್ಚಿತತೆ ಪರಿಸ್ಥಿತಿ ಇದೆ. ಉಕ್ರೇನ್ನಲ್ಲಿರುವ ಭಾರತೀಯರು ಅದರಲ್ಲೂ ವಿದ್ಯಾರ್ಥಿಗಳು ಇಲ್ಲಿರುವುದು ಸುರಕ್ಷಿತವಲ್ಲ. ತಾತ್ಕಾಲಿಕವಾಗಿ ಭಾರತಕ್ಕೆ ಮರಳುವುದು ಉತ್ತಮ. ಅಲ್ಲದೆ, ಭಾರತಕ್ಕೆ ಮರಳಲು ಆಗದೆ ಇರುವವರು ಆದಷ್ಟು ಮನೆಯಲ್ಲೇ ಇರಿ. ಉಕ್ರೇನ್ನೊಳಗೂ ಅನಗತ್ಯವಾಗಿ ಪ್ರಯಾಣ ಮಾಡುವುದು ಬೇಡ ಎಂದು ಹೇಳಿದೆ. ಅಷ್ಟೇ ಅಲ್ಲ, ಉಕ್ರೇನ್ನಲ್ಲಿರುವ ಭಾರತೀಯರು ಸದ್ಯ ಏನೇ ಕಷ್ಟ ಬಂದರೂ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ. ನೀವು ಯಾವ ಪರಿಸ್ಥಿತಿಯಲ್ಲಿ ಇದ್ದೀರಿ ಎಂಬುದನ್ನು ನಮಗೆ ತಿಳಿಸಿ. ನಿಮಗೆ ಎಲ್ಲ ರೀತಿಯ ಸೇವೆಯನ್ನೂ ನಾವೂ ಒದಗಿಸುತ್ತೇವೆ ಎಂದೂ ಹೇಳಿದೆ.
ಭಾರತ ಮತ್ತು ರಷ್ಯಾ ನಡುವೆ ಕಾರ್ಯತಂತ್ರ ಸಂಬಂಧ ಅತ್ಯುತ್ತಮವಾಗಿದೆ. ಇದೇ ಕಾರಣಕ್ಕೆ ಭಾರತ ಇಷ್ಟು ದಿನ ರಷ್ಯಾ -ಉಕ್ರೇನ್ ಸಂಘರ್ಷದ ಬಗ್ಗೆ ಏನೂ ಹೇಳಿಕೆ ನೀಡಿರಲಿಲ್ಲ. ಉಕ್ರೇನ್ ಮೇಲೆ ದಂಡೆತ್ತಿ ಹೋಗುವ ಸನ್ನದ್ಧ ಸ್ಥಿತಿಯಲ್ಲಿರುವ ರಷ್ಯಾವನ್ನು ಯುಎಸ್ ತೀವ್ರವಾಗಿ ಟೀಕಿಸುತ್ತಿದೆ. ಜೋ ಬೈಡನ್ ಈಗಾಗಲೇ ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ ಇದುವರೆಗೆ ಭಾರತ ಮೌನವಾಗಿಯೇ ಇತ್ತು. ಈಗಲೂ ರಷ್ಯಾವನ್ನು ಟೀಕಿಸದೆ ಇದ್ದರೂ ಕೂಡ ಉಕ್ರೇನ್ನಲ್ಲಿರುವ ಭಾರತೀಯರಿಗೆ ತಾತ್ಕಾಲಿಕವಾಗಿ ದೇಶ ತೊರೆಯುವಂತೆ ಸೂಚಿಸಿದೆ. ಅಲ್ಲದೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟನ್ನು ರಾಜತಾಂತ್ರಿಕ ಪ್ರಯತ್ನಗಳ ಮೂಲಕ, ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿಯ ತಮ್ಮ ನೆಚ್ಚಿನ ಹೋಟೆಲ್ಗೆ ಪತ್ನಿ ಸಮೇತರಾಗಿ ಆಗಮಿಸಿ ಇಷ್ಟದ ತಿಂಡಿ ಸವಿದರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ