ಕರ್ನಾಟಕದಲ್ಲಿ ಬಿಜೆಪಿಗೆ ಸೋಲು; ಲೋಕಸಭಾ ಚುನಾವಣೆ, ಮೋದಿ ಅಲೆ ಬಗ್ಗೆ ಸಂಜಯ್ ರಾವುತ್ ಹೇಳಿದ್ದೇನು?

|

Updated on: May 14, 2023 | 6:55 PM

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲು ಪ್ರಧಾನಿ ನರೇಂದ್ರ ಮೋದಿ ಅಲೆ ಕೊನೆಗೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ. ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಗೆ ಸೋಲು; ಲೋಕಸಭಾ ಚುನಾವಣೆ, ಮೋದಿ ಅಲೆ ಬಗ್ಗೆ ಸಂಜಯ್ ರಾವುತ್ ಹೇಳಿದ್ದೇನು?
ಸಂಜಯ್ ರಾವುತ್
Image Credit source: ANI
Follow us on

ಮುಂಬೈ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election Results 2023) ಬಿಜೆಪಿಯ ಸೋಲು ಪ್ರಧಾನಿ ನರೇಂದ್ರ ಮೋದಿ ಅಲೆ ಕೊನೆಗೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ. ಆದರೆ ದೇಶಾದ್ಯಂತ ‘ವಿರೋಧದ ಅಲೆ’ ಸೃಷ್ಟಿಯಾಗುತ್ತಿದೆ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ. ದಕ್ಷಿಣದ ರಾಜ್ಯದಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಸೋಲಿಸಿದ ಮರುದಿನವೇ ಅವರು ಈ ಹೇಳಿಕೆ ನೀಡಿದ್ದಾರೆ. ಮೋದಿ ಅಲೆ ಮುಗಿದು ಈಗ ನಮ್ಮ (ಪ್ರತಿಪಕ್ಷಗಳ) ಅಲೆ ದೇಶಾದ್ಯಂತ ಬರುತ್ತಿದೆ. 2024 ರ ಲೋಕಸಭಾ ಚುನಾವಣೆಗೆ ನಮ್ಮ ತಯಾರಿ ಪ್ರಾರಂಭವಾಗಿದೆ. ಇಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತಿದೆ. ನಾವು ಈ ಸಭೆಯಲ್ಲಿ 2024 ರ ಚುನಾವಣೆಯ ಬಗ್ಗೆ ಚರ್ಚಿಸುತ್ತೇವೆ ಮತ್ತು ಅದಕ್ಕೆ ತಯಾರಿ ಪ್ರಾರಂಭಿಸುತ್ತೇವೆ ಎಂದು ರಾವುತ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರವನ್ನು ಕಳೆದುಕೊಂಡಿರುವುದು ‘ಸರ್ವಾಧಿಕಾರವನ್ನು’ ಸೋಲಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಎಂದ ಅವರು ಹೇಳಿದ್ದಾರೆ.

ಕಾಂಗ್ರೆಸ್ ಗೆದ್ದಿದೆ ಎಂದರೆ, ಬಜರಂಗ ಬಲಿ ಕಾಂಗ್ರೆಸ್ ಜೊತೆಗಿದೆಯೇ ಹೊರತು ಬಿಜೆಪಿ ಜತೆಗಲ್ಲ ಎಂಬುದನ್ನು ತಿಳಿಯಬೇಕಾಗುತ್ತದೆ. ಬಿಜೆಪಿ ಸೋತರೆ ಗಲಭೆಯಾಗುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದರು. ಕರ್ನಾಟಕ ಶಾಂತ ಮತ್ತು ಸಂತೋಷವಾಗಿದೆ. ಎಲ್ಲಿ ಗಲಭೆಗಳಾಗಿವೆ ಎಂದು ಅವರು ಪ್ರಶ್ನಿಸಿದ್ದಾರೆ.

2024ರ ಎಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಮುಂದಿನ ಲೋಕಸಭಾ ಚುನಾವಣೆಗಳಿಗೆ ಮುನ್ನ ನಡೆದ ಚುನಾವಣೆಯಲ್ಲಿ ದಕ್ಷಿಣದ ಏಕೈಕ ರಾಜ್ಯದಲ್ಲಿ ಬಿಜೆಪಿ ಹೊಂದಿರುವ ಅಧಿಕಾರವೂ ಇಲ್ಲವಾಗಿದೆ. ಇದು ವಿರೋಧ ಪಕ್ಷಗಳಲ್ಲಿ ಮತ್ತಷ್ಟು ಒಗ್ಗಟ್ಟು ಮೂಡಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಖುದ್ದು ಪ್ರಧಾನಮಂತ್ರಿಯವರೇ ತೀವ್ರ ಪ್ರಚಾರದ ಹೊರತಾಗಿಯೂ ಬಿಜೆಪಿ ಸೋತಿರುವುದು ಪ್ರತಿಪಕ್ಷಗಳ ವಿಶ್ವಾಸವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ; ಗುರುವಾರ ಪ್ರಮಾಣ ವಚನ?


ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳ ಮೈತ್ರಿಗಾಗಿ ವಿವಿಧ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಕುಮಾರ್ ಅವರ ಜೆಡಿಯು ಬಿಹಾರದಲ್ಲಿ ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿದೆ, ಹಾಗೆಯೇ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬಣ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಕೂಡ ಮಿತ್ರ ಪಕ್ಷವಾಗಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಎರಡು ರಾಜ್ಯಗಳು ಒಟ್ಟಾಗಿ 88 ಸ್ಥಾನಗಳನ್ನು (ಮಹಾರಾಷ್ಟ್ರ-48, ಬಿಹಾರ-40) ಹೊಂದಿವೆ. 80 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಭದ್ರಕೋಟೆಯಾದ ಉತ್ತರಪ್ರದೇಶದ ನಂತರ ಈ ರಾಜ್ಯಗಳು ಕೂಡ ಲೋಕಸಭೆಗೆ ಅತಿ ಹೆಚ್ಚು ಸದಸ್ಯರನ್ನು ಕಳುಹಿಸುತ್ತವೆ. ಮತ್ತೊಂದೆಡೆ ಕರ್ನಾಟಕ 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ