Sardar Patel Birth Anniversary: ಇಂದು ಸರ್ದಾರ್ ಪಟೇಲ್ ಜನ್ಮದಿನ; ಭಾರತದ ಉಕ್ಕಿನ ಮನುಷ್ಯನ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ

| Updated By: ಸುಷ್ಮಾ ಚಕ್ರೆ

Updated on: Oct 31, 2022 | 8:54 AM

ಸರ್ದಾರ್ ಪಟೇಲರಿಗೆ ಆರಂಭದಲ್ಲಿ ರಾಜಕೀಯದಲ್ಲಿ ಸ್ವಲ್ಪ ಆಸಕ್ತಿ ಇರಲಿಲ್ಲ. 1917ರಲ್ಲಿ ಗಾಂಧೀಜಿಯನ್ನು ನೋಡಿದ ನಂತರ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಾತಂತ್ರ್ಯ ಚಳವಳಿಗೆ ಸೇರಲು ಸ್ಫೂರ್ತಿ ಪಡೆದರು.

Sardar Patel Birth Anniversary: ಇಂದು ಸರ್ದಾರ್ ಪಟೇಲ್ ಜನ್ಮದಿನ; ಭಾರತದ ಉಕ್ಕಿನ ಮನುಷ್ಯನ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ
ಸರ್ದಾರ್ ವಲ್ಲಭಭಾಯಿ ಪಟೇಲ್
Follow us on

ನವದೆಹಲಿ: ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧಿ ಪಡೆದಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Patel) ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ರಾಷ್ಟ್ರವನ್ನು ಒಂದು ಘಟಕವಾಗಿ ಒಟ್ಟುಗೂಡಿಸುವಲ್ಲಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಇಂದು (ಅಕ್ಟೋಬರ್ 31) ಭಾರತದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 147ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಭಾರತವನ್ನು ಒಗ್ಗೂಡಿಸುವಲ್ಲಿ ಸರ್ದಾರ್ ಪಟೇಲ್ ಅವರ ಪಾತ್ರವನ್ನು ಗೌರವಿಸಲು ಸರ್ಕಾರವು 2014ರಲ್ಲಿ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನ (Rashtriya Ekta Diwas) ಎಂದು ಆಚರಿಸಲು ನಿರ್ಧರಿಸಿತು.

ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ.
1. 1928ರಲ್ಲಿ ಗುಜರಾತ್‌ನಲ್ಲಿ ಬಾರ್ಡೋಲಿ ಸತ್ಯಾಗ್ರಹ ನಡೆಯಿತು. ಇದನ್ನು ಬ್ರಿಟಿಷ್ ಆಡಳಿತದ ವಿರುದ್ಧದ ಹೋರಾಟದ ನಿರ್ಣಾಯಕ ಅಂಶವೆಂದು ಪರಿಗಣಿಸಲಾಗಿದೆ. ಈ ಚಳುವಳಿಯ ನೇತೃತ್ವವನ್ನು ವಲ್ಲಭಭಾಯಿ ಪಟೇಲ್ ವಹಿಸಿದ್ದರು. ಅವರು ಅದರ ಯಶಸ್ಸಿನ ಪರಿಣಾಮವಾಗಿ “ಸರ್ದಾರ್” ಎಂಬ ಬಿರುದನ್ನು ಪಡೆದರು.

2. ಸರ್ದಾರ್ ಪಟೇಲ್ ಅವರನ್ನು ‘ಭಾರತದ ಉಕ್ಕಿನ ಮನುಷ್ಯ’ ಎಂದು ಕರೆಯಲಾಗುತ್ತದೆ. ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ಭಾರತದ ಏಕತೆಗಾಗಿ ಶ್ರಮಿಸಿದ ಹಾಗೂ ಏಕತೆಯನ್ನು ಸಾಧಿಸಿದ ಮಹಾನ್‌ ವ್ಯಕ್ತಿ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕವೂ ಕೆಲವೊಂದು ಭೂ ಪ್ರದೇಶಗಳು ಭಾರತದ ಒಕ್ಕೂಟವನ್ನು ಸೇರಲು ನಿರಾಕರಿಸಿದ್ದವು. ಆದರೆ ಈ ಪ್ರದೇಶಗಳನ್ನು ಶಾಂತಿಯುತ ಮಾತುಕತೆ ಅಥವಾ ಸೈನ್ಯ ಕಾರ್ಯಾಚರಣೆ ಮೂಲಕ, ಭಾರತದ ಒಕ್ಕೂಟಕ್ಕೆ ಸೇರಿಸಿದ ಕೀರ್ತಿ ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ಅವರಿಗೆ ಸಲ್ಲುತ್ತದೆ. ವಿವಿಧ ರಾಜಮನೆತನಗಳ ಆಡಳಿತದಲ್ಲಿದ್ದ ಒಟ್ಟು 562 ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ್ದ ಪಟೇಲ್‌, ಆಧುನಿಕ ಭಾರತವನ್ನು ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಇದನ್ನೂ ಓದಿ: PM Modi ಕೆನಡಾದ ಮಾರ್ಕಾಮ್ ಸನಾತನ ಮಂದಿರದಲ್ಲಿರುವ ಸರ್ದಾರ್ ಪಟೇಲ್ ಪ್ರತಿಮೆ ಎರಡು ದೇಶಗಳ ನಡುವಿನ ಬಾಂಧವ್ಯದ ಸಂಕೇತ: ಮೋದಿ

3. ಸರ್ದಾರ್ ಪಟೇಲ್ ಸುಮಾರು 22 ವರ್ಷದವರಾಗಿದ್ದಾಗ ಮೆಟ್ರಿಕ್ಯುಲೇಷನ್ ಮುಗಿಸಿದರು. ವಕೀಲರಾಗಲು ಬಯಸಿದ್ದ ಅವರು ಇತರ ವಕೀಲರಿಂದ ಎರವಲು ಪಡೆದ ಪುಸ್ತಕಗಳೊಂದಿಗೆ ವರ್ಷಗಳ ಕಾಲ ಸ್ವಂತವಾಗಿ ಅಧ್ಯಯನ ಮಾಡಿದರು. ಅವರು 2 ವರ್ಷಗಳೊಳಗೆ ಕಾನೂನು ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ದೇಶದ ಉನ್ನತ ಬ್ಯಾರಿಸ್ಟರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.

4. ಸರ್ದಾರ್ ಪಟೇಲರಿಗೆ ಆರಂಭದಲ್ಲಿ ರಾಜಕೀಯದಲ್ಲಿ ಸ್ವಲ್ಪ ಆಸಕ್ತಿ ಇರಲಿಲ್ಲ. 1917ರಲ್ಲಿ ಗಾಂಧೀಜಿಯನ್ನು ನೋಡಿದ ನಂತರ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಾತಂತ್ರ್ಯ ಚಳವಳಿಗೆ ಸೇರಲು ಸ್ಫೂರ್ತಿ ಪಡೆದರು. ಕೆಲವೇ ವರ್ಷಗಳಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)ನ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದರು.

5. ಭಾರತದ ಸ್ವಾತಂತ್ರ್ಯದ ನಂತರ ಸರ್ದಾರ್ ಪಟೇಲ್ ಭಾರತದ ಮೊದಲ ಉಪ ಪ್ರಧಾನ ಮಂತ್ರಿಯಾದರು. ದೇಶದ ಸ್ವಾತಂತ್ರ್ಯದ ಮೊದಲ ವಾರ್ಷಿಕೋತ್ಸವದಂದು ಭಾರತದ ಗೃಹ ಸಚಿವರಾಗಿ ಸೇವೆ ಸಲ್ಲಿಸಲು ಅವರನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: Rashtriya Ekta Diwas 2022: ರಾಷ್ಟ್ರೀಯ ಏಕತಾ ದಿವಸ್​; ಸರ್ದಾರ್ ಪಟೇಲ್​ ಏಕತಾ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ ಮೋದಿ

6. ಸರ್ದಾರ್‌ ಪಟೇಲ್‌ 1875ರ ಅಕ್ಟೋಬರ್ 31ರಂದು ಗುಜರಾತ್​ನ ನಾಡಿಯಾಡ್‌ನಲ್ಲಿ ಜನಿಸಿದರು. ಸ್ವಾತಂತ್ರ್ಯದ ಬಳಿಕ ಮೊದಲ 3 ವರ್ಷಗಳ ಕಾಲ ಸರ್ದಾರ್ ಪಟೇಲ್‌ ಅವರು ಉಪ ಪ್ರಧಾನಮಂತ್ರಿ, ಗೃಹ ಸಚಿವ ಹಾಗೂ ಮಾಹಿತಿ ಮತ್ತು ರಾಜ್ಯಗಳ ಸಚಿವಾಲಯದ ಸಚಿವರಾಗಿ ಕಾರ್ಯನಿರ್ವಹಿಸಿದರು. 1950ರ ಡಿಸೆಂಬರ್ 15ರಂದು ಮುಂಬೈನಲ್ಲಿ ಅವರು ನಿಧನರಾದರು.

7. 2018ರ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ನರ್ಮದಾ ನದಿಯ ದಡದಲ್ಲಿ ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆಯನ್ನು ಉದ್ಘಾಟಿಸಿದರು. ಸುಮಾರು 2,989 ಕೋಟಿ ರೂ. ವೆಚ್ಚದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. 182 ಮೀಟರ್ ಎತ್ತರವಿರುವ ಇದು ಪ್ರಸ್ತುತ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ.

8. ದೇಶದ ಏಕತೆಗಾಗಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ನೀಡಿದ ಕೊಡುಗೆಯನ್ನು ಸ್ಮರಿಸಲು ಅವರ ಜನ್ಮದಿನವಾದ ಅಕ್ಟೋಬರ್‌ 31‌ರಂದು ‘ರಾಷ್ಟ್ರೀಯ ಏಕತಾ ದಿನ’ವನ್ನು ಆಚರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರಲ್ಲಿ ತೀರ್ಮಾನ ಕೈಗೊಂಡಿತ್ತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್‌ 31‌ರಂದು ದೇಶಾದ್ಯಂತ ‘ರಾಷ್ಟ್ರೀಯ ಏಕತಾ ದಿನ’ವನ್ನು ಆಚರಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ