ಮಹಾರಾಷ್ಟ್ರ ಸರ್ಕಾರಿ ಆಸ್ಪತ್ರೆ ವೈದ್ಯೆ ಆತ್ಮಹತ್ಯೆ ಕೇಸ್ಗೆ ಟ್ವಿಸ್ಟ್: ನಾಲ್ಕು ಪುಟಗಳ ಡೆತ್ನೋಟ್ನಲ್ಲಿ ಸಂಸದನ ಹೆಸರು!
ಸತಾರಾದಲ್ಲಿ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪೋಲಿಸ್ ಅಧಿಕಾರಿಯೊಬ್ಬರು ಅತ್ಯಾಚಾರ ಮತ್ತು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ನಕಲಿ ಪ್ರಮಾಣಪತ್ರ ನೀಡುವಂತೆ ಒತ್ತಡ, ಸಂಸದರ ಹಸ್ತಕ್ಷೇಪವೂ ಬಯಲಾಗಿದೆ. ದೂರು ನೀಡಿದರೂ ಕ್ರಮ ಕೈಗೊಳ್ಳದ ಕಾರಣ ಮನನೊಂದು ವೈದ್ಯೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಪೋಲಿಸ್ ಅಧಿಕಾರಿ ಅಮಾನತುಗೊಂಡಿದ್ದು, ತನಿಖೆ ಮುಂದುವರಿದಿದೆ.

ಮಹಾರಾಷ್ಟ್ರ, ಅ.25: ಮಹಾರಾಷ್ಟ್ರದ (Maharashtra) ಸತಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ವೈದ್ಯೆಯೊಬ್ಬರು ಗುರುವಾರ ರಾತ್ರಿ ಹೋಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು, ಕಳೆದ 5 ತಿಂಗಳುಗಳಿಂದ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅವರು ತಮ್ಮ ಅಂಗೈಯಲ್ಲಿ ಬರೆದಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಸಂಸದರೊಬ್ಬರ ಹೆಸರು ಕೂಡ ಕೇಳಿ ಬರುತ್ತಿದೆ. ಪೊಲೀಸ್ ಪ್ರಕರಣಗಳಲ್ಲಿ ಆರೋಪಿಗಳ ನಕಲಿ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನೀಡುವಂತೆ ತನ್ನ ಮೇಲೆ ಒತ್ತಡ ಹೇರಲಾಗಿದೆ. ಇದಕ್ಕೆ ಒಪ್ಪದಾಗ ನನಗೆ ಕಿರುಕುಳ ನೀಡುತ್ತಿದ್ದರು. ಪೊಲೀಸ್ ಅಧಿಕಾರಿಗಳು ಮಾತ್ರವಲ್ಲದೆ. ಒಂದು ಪ್ರಕರಣದಲ್ಲಿ ಸಂಸತ್ ಸದಸ್ಯ ಮತ್ತು ಅವರ ಇಬ್ಬರು ಆಪ್ತ ಸಹಾಯಕರು ಕೂಡ ಒತ್ತಡ ಹೇರಿದ್ದಾರೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿಯನ್ನು ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದ್ನೆ ಮೇಲೆ ನಾಲ್ಕು ಬಾರಿ ಅತ್ಯಾಚಾರ ಮಾಡಿದ್ದಾರೆ. ಇದರ ಜತೆಗೆ ಬೇರೆ ಬೇರೆ ಪ್ರಕರಣದಲ್ಲಿ ಸಂಸದರು ಹಾಗೂ ಮನೆ ಮಾಲೀಕರು ನೀಡಿದ್ದ ಕಿರುಕುಳದ ಬಗ್ಗೆ ವಿವರವಾಗಿ ಪ್ರತ್ಯೇಕ ಪತ್ರಯೊಂದನ್ನು ಬರೆದಿದ್ದರು. ಐದು ತಿಂಗಳಿಗೂ ಹೆಚ್ಚು ಕಾಲ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಬರೆದಿದ್ದಾರೆ. ಇನ್ನು ಈ ಯುವ ವೈದ್ಯೆ ಮಹಿಳೆ ಆಸ್ಪತ್ರೆಯಲ್ಲಿ 23 ತಿಂಗಳು ಸೇವೆ ಸಲ್ಲಿಸುತ್ತಿದ್ದರು ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕಾದ ಬಾಂಡ್ ಅವಧಿಯನ್ನು ಪೂರ್ಣಗೊಳಿಸಲು ಕೇವಲ ಒಂದು ತಿಂಗಳು ಬಾಕಿ ಇತ್ತು, ನಂತರ ಸ್ನಾತಕೋತ್ತರ ಪದವಿ ಪಡೆಯಬೇಕು ಎಂದು ಕನಸು ಕಂಡಿದ್ದರು.
ನಾಲ್ಕು ಪುಟಗಳ ಪತ್ರದ ಪ್ರತಿಯು ಎನ್ಡಿಟಿವಿಗೆ ಲಭ್ಯವಾಗಿದ್ದು, ಅದರಲ್ಲಿ ಪೊಲೀಸ್ ಅಧಿಕಾರಿಗಳು ಆರೋಪಿಗಳಿಗೆ ನಕಲಿ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನೀಡುವಂತೆ ತನ್ನ ಮೇಲೆ ಒತ್ತಡ ಹೇರಿದ್ದಾರೆ, ಅವರಲ್ಲಿ ಹಲವರನ್ನು ವೈದ್ಯಕೀಯ ಪರೀಕ್ಷೆಗೆ ಕರೆತರಲಾಗುತ್ತಿರಲಿಲ್ಲ, ಯಾರು ವೈದ್ಯಕೀಯ ಪರೀಕ್ಷೆಗೆ ಬಂದಿಲ್ಲ ಅವರ ಫಿಟ್‌ನೆಸ್ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದಾಗ ನನ್ನ ಮೇಲೆ ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಈ ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರದಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರ ಒತ್ತಡ ಬಗ್ಗೆಯೂ ತಿಳಿಸಿದ್ದಾರೆ. ಪ್ರಕರಣಕ್ಕೊಂದಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸಿದಾಗ ಅವರ ಇಬ್ಬರು ಆಪ್ತ ಸಹಾಯಕರು ಆಸ್ಪತ್ರೆಗೆ ಬಂದು ಕಿರುಕುಳ ನೀಡಿದ್ದರೆ, ಇದನ್ನು ಒಪ್ಪದಕ್ಕೆ ಸಂಸದರಿಂದ ಫೋನ್ ಮಾಡಿಸಿ, ನನಗೆ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಎರಡು ಮೂರು ಬಾರಿ ದೂರು ನೀಡಿದ್ದರು. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ವೈದ್ಯೆಯ ಸಂಬಂಧಿಯೊಬ್ಬರು ಹೇಳಿದ್ದಾರೆ. ಈ ಪತ್ರದಲ್ಲಿ, ತನಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ? ಆಸ್ಪತ್ರೆಯಲ್ಲಿ ಸರಿಯಾದ ಸಿಬ್ಬಂದಿ ವ್ಯವಸ್ಥೆ ಇಲ್ಲ. ಈ ಬಗ್ಗೆ ಡಿಎಸ್ಪಿಗೆ ಕೂಡ ಹೇಳಿದೆ. ಎಲ್ಲವನ್ನು ಸರಿ ಮಾಡುತ್ತೇವೆ ಎಂದು ಹೇಳಿದ್ರು, ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಜತೆಗೆ ಈ ಪತ್ರದಲ್ಲಿ ತಮ್ಮ ಮನೆ ಮಾಲೀಕ ಪ್ರಶಾಂತ್ ಬಂಕರ್ ಕಿರುಕುಳ ನೀಡಿರುವ ಬಗ್ಗೆಯೂ ತಿಳಿಸಿದ್ದಾರೆ.
ಇದನ್ನು ಓದಿ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯ ವೈದ್ಯೆ ಆತ್ಮಹತ್ಯೆ; ಅಂಗೈ ಮೇಲಿತ್ತು ಸಾವಿನ ರಹಸ್ಯ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬದ್ನೆ ಮತ್ತು ಬಂಕರ್ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಇಲ್ಲಿಯವರೆಗೆ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ನಾವು ಈ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಸತಾರಾ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ” ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಕೊಲ್ಹಾಪುರ ವಿಭಾಗ) ಸುನಿಲ್ ಫುಲಾರಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮಹಾಯುತಿ ಸರ್ಕಾರವು ಪೊಲೀಸರನ್ನು ಪದೇ ಪದೇ ರಕ್ಷಿಸುತ್ತಿದೆ: ಕಾಂಗ್ರೆಸ್
ಈ ಪ್ರಕರಣವು ರಾಜಕೀಯ ಜಗಳಕ್ಕೂ ಕಾರಣವಾಗಿದ್ದು, ಕಾಂಗ್ರೆಸ್ ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪೊಲೀಸರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದೆ. ರಕ್ಷಕನು ಪರಭಕ್ಷಕನಾದಾಗ! ಪೊಲೀಸರ ಕರ್ತವ್ಯ ರಕ್ಷಣೆ ನೀಡುವುದು, ಆದರೆ ಅವರೇ ಮಹಿಳಾ ವೈದ್ಯರನ್ನು ಶೋಷಿಸುತ್ತಿದ್ದರೆ, ನ್ಯಾಯ ಹೇಗೆ ಸಿಗುತ್ತದೆ? ಈ ಹುಡುಗಿ ಈ ಹಿಂದೆ ದೂರು ನೀಡಿದಾಗ ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ? ಮಹಾಯುತಿ ಸರ್ಕಾರವು ಪೊಲೀಸರನ್ನು ಪದೇ ಪದೇ ರಕ್ಷಿಸುತ್ತಿದೆ, ಇದು ಪೊಲೀಸ್ ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗಿದೆ” ಎಂದು ಕಾಂಗ್ರೆಸ್ ನಾಯಕ ವಿಜಯ್ ನಾಮದೇವರಾವ್ ವಡೆಟ್ಟಿವಾರ್ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:12 am, Sat, 25 October 25




