ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನೇತೃತ್ವದ ಪೀಠವು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮಂಡಿಸಿದ ವಾದವನ್ನು ಮಂಗಳವಾರದಂದು ಆಲಿಸಿತು. ಪ್ರಶಾಂತ್ ಭೂಷಣ್ ಪರವಾಗಿ ಕೋರ್ಟ್ನಲ್ಲಿ ವಾದಿಸಿದ ವಕೀಲ ರಾಜೀವ ಧವನ್, ‘‘ನಾಯಮೂರ್ತಿ ಮಿಶ್ರಾ ಅವರು ಕೊಲ್ಕತಾ ಹೈಕೋರ್ಟ್ನಲ್ಲಿದ್ದಾಗ ಮಮತಾ ಬ್ಯಾನರ್ಜಿ ಕೋರ್ಟಿನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ನ್ಯಾಯಮೂರ್ತಿ ಬಗ್ಚಿ ತೀರ್ಪನ್ನು ಬರೆದರಾದರೂ ನ್ಯಾಯಮೂರ್ತಿ ಮಿಶ್ರಾ, ‘ಮಮತಾ ಒಬ್ಬ ರಾಜಕಾರಣಿಯಾಗಿರುವುದರಿಂದ ಕೋರ್ಟ್ ಅವರಿಗೆ ಶಿಕ್ಷೆಗೊಳಪಡಿಸುವುದಿಲ್ಲ’ ಎಂದಿದ್ದರು. ಮಮತಾರವರು ಸಾರ್ವಜನಿಕ ವ್ಯಕ್ತಿಯಾಗಿರುವ ಹಿನ್ನಲೆಯಲ್ಲಿ ಅವರನ್ನು ಕ್ಷಮಿಸುವುದಾದರೆ, ಪ್ರಶಾಂತ್ ಭೂಷಣ್ ಅವರನ್ನು ಹುತಾತ್ಮರನ್ನಾಗಿಸಬೇಡಿ,’’ ಎಂದರು.
ಶಿಕ್ಷೆಯ ತೀರ್ಪು ಘೋಷಣೆಗೆ ಮೊದಲು, ಕೋರ್ಟ್ ಪ್ರಶಾಂತ್ ಭೂಷಣ್ ಅವರಿಗೆ 30 ನಿಮಿಷಗಳ ಕಾಲಾವಕಾಶ ನೀಡಿ, ನ್ಯಾಯಾಂಗದ ವಿರುದ್ಧ ಮಾಡಿರುವ ಆಪಾದನೆಗಳನ್ನು ಮತ್ತು ಭಾರತದ ಮುಖ್ಯ ನ್ಯಾಯಾಧೀಶ ಎಸ್ ಎ ಬೊಬ್ಡೆ ಅವರ ವಿರುದ್ಧ ಬರೆದಿರುವ ಟ್ವೀಟ್ಗಳ ಬಗ್ಗೆ ಕ್ಷಮೆಯಾಚಿಸದಿರುವ ತಮ್ಮ ನಿಲುವನ್ನು ಪುನರ್ಪರಿಶೀಲಿಸುವಂತೆ ಹೇಳಿತು.
ಅಂತಿಮವಾಗಿ ಪೀಠವು ಶಿಕ್ಷೆ ಪ್ರಮಾಣ ಪ್ರಕಟಿಸುವ ತೀರ್ಪನ್ನು ಕಾಯ್ದಿರಿಸಿತು.