ದೆಹಲಿ: ಇಲ್ಲಿನ ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಡಿ.9ರಂದು ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾಗಿದ್ದ ಹಿರಿಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (DRDO) ಸಂಸ್ಥೆಯ ವಿಜ್ಞಾನಿ ಭರತ್ ಭೂಷಣ್ ಕಠಾರಿಯಾ (47) , ಜೈಲಿನಲ್ಲಿಯೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಜೈಲಿನ ಸ್ನಾನದಕೋಣೆಯಲ್ಲಿದ್ದ ಹ್ಯಾಂಡ್ವಾಶ್ (ಕೈ ತೊಳೆಯುವ ದ್ರವ)ನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಹಾಗೇ, ಸದ್ಯ ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ರೋಹಿಣಿ ಕೋರ್ಟ್ನೊಳಗೆ ಟಿಫಿನ್ ಬಾಕ್ಸ್ನಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇಟ್ಟು ಸ್ಫೋಟಿಸಿದ್ದರು. ವಿಜ್ಞಾನಿ ಕಠಾರಿಯಾ ಮತ್ತು ಅವರ ನೆರೆಮನೆಯವರಾದ ವಕೀಲ ಅಮಿತ್ ವಸಿಷ್ಠ ಅವರ ನಡುವೆ ಹಳೆಯ ಭಿನ್ನಾಭಿಪ್ರಾಯವಿತ್ತು. ಅದೇ ಕಾರಣಕ್ಕೆ ವಕೀಲನ ಸೋಗಿನಲ್ಲಿ ಕಠಾರಿಯಾ ನ್ಯಾಯಾಲಯಕ್ಕೆ ಪ್ರವೇಶಿಸಿ, ಬಾಂಬ್ ಇಟ್ಟು, ಸ್ಫೋಟದ ನಂತರ ಪರಾರಿಯಾಗಿದ್ದರು. ನೀರು ಸರಬರಾಜು ಸೇರಿದಂತೆ ಹಲವು ವಿಷಯಗಳಲ್ಲಿ ಪರಸ್ಪರರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದ್ದಾಗಿ ಪೊಲೀಸರು ಹೇಳಿದ್ದರು. ಅಷ್ಟೇ ಅಲ್ಲ, ಕಠಾರಿಯಾ ಕೂಡ ಬಂಧಿಸಲ್ಪಡುತ್ತಿದ್ದಂತೆ ತಾವೇ ಸ್ಫೋಟಿಸಿದ್ದಾಗಿ ಒಪ್ಪಿಕೊಂಡಿದ್ದರು.
ಡಿ. 9ರಂದು ರಾಷ್ಟ್ರ ರಾಜಧಾನಿ ನವದೆಹಲಿಯ ರೋಹಿಣಿ ಕೋರ್ಟ್ನಲ್ಲಿ ಸಣ್ಣ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯವಾಗಿತ್ತು. ಕೋರ್ಟ್ ಆವರಣದಲ್ಲಿ ಉಂಟಾದ ಸ್ಫೋಟದಿಂದಾಗಿ ಅಲ್ಲಿದ್ದ ಜನರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಲ್ಯಾಪ್ಟಾಪ್ನ ಬ್ಯಾಟರಿ ಸ್ಫೋಟಗೊಂಡು ಈ ಬ್ಲಾಸ್ಟ್ ಉಂಟಾಗಿರುವ ಸಾಧ್ಯತೆಯಿದೆ ಎನ್ನಲಾಗಿತ್ತು. ನಂತರ ಅದು ಟಿಫನ್ ಬಾಕ್ಸ್ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟ ಎಂಬುದು ಗೊತ್ತಾಗಿತ್ತು. ಮಾಹಿತಿ ಪಡೆದ ನಂತರ ಆರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.
ಇದನ್ನೂ ಓದಿ: ‘ಭಾಷೆಗಾಗಿ ನನ್ನ ಪ್ರಾಣ ಹೋಗ್ಬೇಕು ಅಂದ್ರೆ ಹೋಗಲಿ ಬಿಡಿ’; ಕನ್ನಡ ಪರ ಹೋರಾಟದ ಬಗ್ಗೆ ಶಿವಣ್ಣ ಮಾತು