ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ವಿದೇಶಾಂಗ ಸಚಿವರ ಸಭೆ ಇಂದು ಗೋವಾದಲ್ಲಿ ನಡೆಯಲಿದೆ. ಎರಡು ದಿನಗಳ ಕಾಲ ಸಭೆ ನಡೆಯಲಿದ್ದು, ಪಾಕಿಸ್ತಾನಿ ಪತ್ರಕರ್ತರ ನಿಯೋಗವು ಪಂಜಾಬ್‌ನ ವಾಘಾ ಗಡಿಯನ್ನು ದಾಟಿ ಭಾರತವನ್ನು ಪ್ರವೇಶಿಸಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರಾದಾರಿ ಕೂಡ ಆಗಮಿಸುತ್ತಿದ್ದಾರೆ.
ಪತ್ರಕರ್ತರಲ್ಲಿ ನಯಾದೌರ್ ಮೀಡಿಯಾದ ಕಾರ್ಯನಿರ್ವಾಹಕ ಸಂಪಾದಕ ಮುರ್ತಾಜಾ ಸೊಲಂಗಿ, ಇಂಡಿಪೆಂಡೆಂಟ್ ಉರ್ದುವಿನ ಮೋನಾ ಖಾನ್, ಖುರತ್ ಉಲ್ ಐನ್ ಶಿರಾಜಿ, ಜಿಯೋ ನ್ಯೂಸ್‌ನ ಅಜಾಜ್ ಸೈಯದ್, ಕಮ್ರಾನ್ ಯೂಸುಫ್ ಮತ್ತು ಮುನಿಜೆ ಜಹಾಂಗೀರ್ ಸೇರಿದ್ದಾರೆ.
ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ಉದ್ವಿಗ್ನತೆ ಮತ್ತು ಚೀನಾದ ವಿಸ್ತರಣಾ ಮನೋಭಾವದ ಬಗ್ಗೆ ಆತಂಕಗಳು ವ್ಯಕ್ತವಾಗುತ್ತಿರುವ ಸಮಯದಲ್ಲಿ ಈ ಸಭೆ ನಡೆಸಲಾಗುತ್ತಿದೆ.
ಎಸ್.ಜೈಶಂಕರ್ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಚೀನಾದ ವಿದೇಶಾಂಗ ಸಚಿವ ಚಿನ್ ಕಾಂಗ್, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮೊದಲಾದವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅಫ್ಘಾನಿಸ್ತಾನದ ಸಂಪೂರ್ಣ ಪರಿಸ್ಥಿತಿಯನ್ನು ಸಭೆಯಲ್ಲಿ ಚರ್ಚಿಸಬಹುದು ಎಂದು ನಂಬಲಾಗಿದೆ. ಶಾಂಘೈ ಸಹಕಾರ ಸಂಘಟನೆಯ (SCO) ಕೌನ್ಸಿಲ್ ಆಫ್ ಫಾರಿನ್ ಮಿನಿಸ್ಟರ್ಸ್ (CFM) ಸಭೆಯು ಮೇ 4-5, 2023 ರಂದು ಭಾರತದ ಗೋವಾದಲ್ಲಿ ನಡೆಯಲಿದೆ. SCO ಅನ್ನು 2001 ರಲ್ಲಿ ಶಾಂಘೈನಲ್ಲಿ ಸ್ಥಾಪಿಸಲಾಯಿತು. SCO ಚೀನಾ, ಭಾರತ, ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅನ್ನು ಒಳಗೊಂಡಿದೆ.
ಭಾರತ ಮತ್ತು ಪಾಕಿಸ್ತಾನ 2017 ರಲ್ಲಿ ಚೀನಾ ಮೂಲದ SCO ಯ ಖಾಯಂ ಸದಸ್ಯರಾದರು. ಎಸ್ ಸಿಒ ಸಂಘಟನೆಯ ದೇಶಗಳಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಸಂಸ್ಥೆಯಲ್ಲಿ ಚೀನಾ ಮತ್ತು ರಷ್ಯಾ ಪ್ರಮುಖ ದೇಶಗಳು. ಈ ಸಂಘಟನೆಯನ್ನು NATO ಗೆ ಪರ್ಯಾಯವಾಗಿಯೂ ನೋಡಲಾಗುತ್ತದೆ.
ಮತ್ತಷ್ಟು ಓದಿ: ಸಂಘರ್ಷ ಪೀಡಿತ ಸುಡಾನ್ನಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಯೋಜನೆಗೆ ಸಿದ್ಧತೆ ನಡೆಸಿ: ಮೋದಿ
ಭಾರತವು ಕಳೆದ ವಾರ SCO ರಕ್ಷಣಾ ಸಚಿವರ ಮಟ್ಟದ ಸಭೆಯನ್ನು ಆಯೋಜಿಸಿತ್ತು. ಭಾರತ, ರಷ್ಯಾ, ಚೀನಾ ಮತ್ತು ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಇತರ ಸದಸ್ಯ ರಾಷ್ಟ್ರಗಳು ಶುಕ್ರವಾರ ನವದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ಪ್ರಾದೇಶಿಕ ಭದ್ರತಾ ಸವಾಲುಗಳು ಮತ್ತು ಸಂಬಂಧಿತ ವಿಷಯಗಳ ಕುರಿತು ಚರ್ಚಿಸಿದವು.
ಪಾಕಿಸ್ತಾನದ ರಕ್ಷಣಾ ಸಚಿವರು ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲಿಲ್ಲ ಮತ್ತು ರಕ್ಷಣಾ ವ್ಯವಹಾರಗಳ ಕುರಿತು ಪಾಕಿಸ್ತಾನದ ಪ್ರಧಾನಿಯ ವಿಶೇಷ ಸಹಾಯಕ ಮಲಿಕ್ ಅಹ್ಮದ್ ಖಾನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.
ಗೋವಾದಲ್ಲಿ ನಡೆಯಲಿರುವ ಸಭೆಯಲ್ಲಿ ಬಿಲಾವಲ್ ಭುಟ್ಟೋ ಅವರ ವೈಯಕ್ತಿಕ ಉಪಸ್ಥಿತಿ ಮತ್ತು ಅವರ ಆಗಮನವು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಬದಲಾವಣೆಯಾಗಬಹುದೇ ಎಂಬುದರ ಬಗ್ಗೆ ಎಲ್ಲರ ಕಣ್ಣುಗಳು ನೆಟ್ಟಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ