ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿ ಸ್ಥಳೀಯ ನ್ಯಾಯಾಲಯವು ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ವಿವಾದದ (Gyanvapi Mosque – Srinagar Gouri Case) ಬಗ್ಗೆ ಇಂದು ತೀರ್ಪು ನೀಡುವ ಸಾಧ್ಯತೆಯಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಭಾನುವಾರದಿಂದಲೇ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅರ್ಜಿದಾರರ ವಾದವು ಸ್ವೀಕೃತವೇ (maintainability of the plea) ಅಲ್ಲವೇ ಎಂಬ ಬಗ್ಗೆ ವಾರಾಣಸಿ ನ್ಯಾಯಾಲಯ ಇಂದು ತೀರ್ಮಾನ ನೀಡುವ ಸಾಧ್ಯತೆಯಿದೆ.
ತೀರ್ಪು ಹೊರಬೀಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಸತೀಶ್ ಗಣೇಶ್ ಉಸ್ತುವಾರಿಯಲ್ಲಿ ಬಂದೋಬಸ್ತ್ ಮಾಡಲಾಗಿದೆ. ಹಿಂದೂ-ಮುಸ್ಲಿಮರು ಒಟ್ಟೊಟ್ಟಿಗೆ ವಾಸಿಸುವ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎರಡೂ ಧರ್ಮಗಳ ಧಾರ್ಮಿಕ ಮುಖಂಡರೊಂದಿಗೆ ಪೊಲೀಸ್ ಅಧಿಕಾರಿಗಳು ಮಾತನಾಡಿದ್ದು, ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.
ಕಳೆದ ತಿಂಗಳು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಎ.ಕೆ.ವಿಶ್ವೇಶ್, ಸೆಪ್ಟೆಂಬರ್ 12ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದ್ದರು. ಜ್ಞಾನವಾಪಿ ಮಸೀದಿ ಪ್ರಾಂಗಣದಲ್ಲಿ ಹಿಂದೂ ದೇವತೆಗಳ ಶಿಲ್ಪಗಳಿವೆ. ಅವುಗಳಿಗೆ ಪೂಜೆ ಸಲ್ಲಿಸಲು ಅವಕಾಶ ಸಿಗಬೇಕು ಎಂದು ಕೋರಿದ್ದರು.
ಆದರೆ ಈ ಮನವಿಗೆ ಜ್ಞಾನವಾಪಿ ಮಸೀದಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ‘ಜ್ಞಾನವಾಪಿ ಮಸೀದಿಯು ವಕ್ಫ್ ಸುಪರ್ದಿಯಲ್ಲಿರುವ ಆಸ್ತಿಯಾಗಿದೆ. ಹೀಗಾಗಿ ಈ ಅರ್ಜಿಯು ವಿಚಾರಣೆಗೆ ಅರ್ಹವೇ ಎಂಬುದನ್ನು ಪರಿಶೀಲಿಸಬೇಕು’ ಎಂದು ಕೋರಿತ್ತು.
ಹಿಂದೂಗಳ ಪರ ವಕೀಲ ಮದನ್ ಮೋಹನ್ ಯಾದವ್, ‘ದೇಗುಲವನ್ನು ಕೆಡವಿ, ಅದೇ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ’ ಎಂದು ವಾದಿಸಿದ್ದರು. ಸುಪ್ರೀಂಕೋರ್ಟ್ ಸೂಚನೆಯ ನಂತರ ಜಿಲ್ಲಾ ನ್ಯಾಯಾಲಯವು ಪ್ರಕರಣದ ವಿಚಾರಣೆ ಆರಂಭಿಸಿತ್ತು. ಇದಕ್ಕೂ ಮೊದಲು ಸಿವಿಲ್ ನ್ಯಾಯಾಲಯವು ಮಸೀದಿ ಸಮುಚ್ಚಯದ ವಿಡಿಯೊ ಸಮೀಕ್ಷೆಗೆ ಸೂಚನೆ ನೀಡಿತ್ತು. ಮೇ 16ರಂದು ಸಮೀಕ್ಷೆ ಮುಕ್ತಾಯವಾಗಿತ್ತು. ಮೇ 19ರಂದು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.
ವಿಡಿಯೊ ಸಮೀಕ್ಷೆ ವೇಳೆ ಮಸೀದಿ ಸಮುಚ್ಚಯದ ಒಳಗೆ ಶಿವಲಿಂಗ ಕಂಡು ಬಂದಿತ್ತು ಎಂದು ಹಿಂದೂ ಪರ ವಕೀಲರು ಹೇಳಿದ್ದು. ಅದು ಶಿವಲಿಂಗ ಅಲ್ಲ, ಕಾರಂಜಿ ವ್ಯವಸ್ಥೆ ಎಂದು ಮಸೀದಿ ಪರ ವಕೀಲರು ಆಕ್ಷೇಪಿಸಿದ್ದರು.
Published On - 8:37 am, Mon, 12 September 22