ಮುಂಬೈ: ಬರಹಗಾರ-ಸಾಹಿತಿ ಜಾವೇದ್ ಅಖ್ತರ್ (Javed Akhtar) ಆರ್ಎಸ್ಎಸ್ನ್ನು ತಾಲಿಬಾನ್ ಜತೆ ಹೋಲಿಸಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಮಹಾರಾಷ್ಟ್ರ ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ.ಅದೇ ವೇಳೆ ಮುಂಬೈನಲ್ಲಿ ಅಖ್ತರ್ ಅವರ ಮನೆಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜುಹು ಪ್ರದೇಶದ ಇಸ್ಕಾನ್ ದೇವಾಲಯದ ಬಳಿ ಅಖ್ತರ್ ನಿವಾಸದ ಹೊರಗೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಇದೆ ಎಂದು ಅಧಿಕಾರಿ ಹೇಳಿದರು. ಮಹಿಳಾ ಕಾನ್ಸ್‌ಟೇಬಲ್‌ಗಳು ಸೇರಿದಂತೆ ಭದ್ರತಾ ಸಿಬ್ಬಂದಿಯನ್ನು ಮನೆಯ ಹೊರಗೆ ನಿಯೋಜಿಸಲಾಗಿದೆ.
ಪ್ರಪಂಚದಾದ್ಯಂತ ಬಲಪಂಥೀಯರು ಅಸಾಧಾರಣವಾದ ಸಾಮ್ಯತೆಯನ್ನು ಹೊಂದಿದ್ದಾರೆ ಎಂದು ಅಖ್ತರ್ ಇತ್ತೀಚೆಗೆ ಸುದ್ದಿವಾಹಿನಿಯಲ್ಲಿ ಹೇಳಿದ್ದರು. “ತಾಲಿಬಾನ್ ಇಸ್ಲಾಮಿಕ್ ದೇಶವನ್ನು ಬಯಸುತ್ತದೆ. ಈ ಜನರು ಹಿಂದೂ ರಾಷ್ಟ್ರವನ್ನು ಮಾಡಲು ಬಯಸುತ್ತಾರೆ, ”ಎಂದು ಅಖ್ತರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ಎಸ್‌ಎಸ್) ಹೆಸರಿಸದೆ ಹೇಳಿದ್ದರು.
ಬಿಜೆಪಿ ಶಾಸಕ ಮತ್ತು ರಾಜ್ಯ ಪಕ್ಷದ ವಕ್ತಾರ ರಾಮ್ ಕದಮ್ ಅಖ್ತರ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಅವರು ತಮ್ಮ ಹೇಳಿಕೆಗೆ ಸಂಘದ ಪದಾಧಿಕಾರಿಗಳ ಕ್ಷಮೆ ಕೇಳುವವರೆಗೆ ಅಖ್ತರ್ ಅವರು ಭಾಗಿಯಾಗಿರುವ ಯಾವುದೇ ಚಿತ್ರವನ್ನು ದೇಶದಲ್ಲಿ ಪ್ರದರ್ಶಿಸಲು ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಂಚಿಕೊಳ್ಳುವ ಶಿವಸೇನಾ, ಸೋಮವಾರ ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ನೊಂದಿಗೆ ಹೋಲಿಸಿದ ಅಖ್ತರ್ ಹೇಳಿಕೆ ಸಂಪೂರ್ಣ ತಪ್ಪು ಎಂದು ಹೇಳಿದೆ.
“ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಮೆಚ್ಚುವವರು ತಾಲಿಬಾನಿ ಮನಸ್ಥಿತಿಯವರು ಎಂದು ನೀವು ಹೇಗೆ ಹೇಳಬಹುದು? ಇದನ್ನು ನಾವು ಒಪ್ಪುವುದಿಲ್ಲ ಎಂದು ಸೇನಾ ಮುಖವಾಣಿ ‘ಸಾಮ್ನಾದ ಸಂಪಾದಕೀಯ ಹೇಳಿದೆ.
ಇದನ್ನೂ ಓದಿ: ಪಂಜಶಿರ್ ಹೋರಾಟ ಪಡೆಯ ವಕ್ತಾರ ಫಾಹಿಮ್ ದಷ್ಟಿ ಸಾವು; ಮೂವರು ಪ್ರಮುಖ ನಾಯಕರನ್ನು ಕೊಂದ ತಾಲಿಬಾನ್
ಇದನ್ನೂ ಓದಿ: ನಮ್ಮ ತಾಳ್ಮೆ ಪರೀಕ್ಷಿಸುತ್ತಿದ್ದೀರಿ: ನ್ಯಾಯಾಧಿಕರಣ ಸುಧಾರಣಾ ಕಾಯ್ದೆ ವಿಚಾರದಲ್ಲಿ ಕೇಂದ್ರಕ್ಕೆ ಸುಪ್ರೀಂಕೋರ್ಟ್ ತರಾಟೆ
(Security beefed up outside the residence of writer-lyricist Javed Akhtar in Mumbai )