ಪಂಜಾಬ್: ಇಲ್ಲಿನ ಅಮೃತಸರ್ನ ದಲೆಕೆ ಎಂಬ ಗ್ರಾಮದಲ್ಲಿ ತಿಂಡಿಯ ಬಾಕ್ಸ್ನಲ್ಲಿ (ಟಿಫಿನ್ ಬಾಕ್ಸ್) ಐಇಡಿ (IED) ಪತ್ತೆಯಾಗಿದೆ. ಸ್ವಾತಂತ್ರ್ಯ ದಿನ ಕೆಲವೇ ದಿನ ಇರುವಾಗ ಹೀಗೆ ಮಗುವೊಂದರ ಟಿಫಿನ್ ಬಾಕ್ಸ್ನಲ್ಲಿ ಐಇಡಿ ಕಾಣಿಸಿಕೊಂಡಿದ್ದು ತೀವ್ರ ಆತಂಕವನ್ನೂ ಸೃಷ್ಟಿಸಿತ್ತು. ಇದು ಉಗ್ರಕೃತ್ಯ ಎಂದು ಹೇಳಲಾಗಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾದಂತಾಗಿದೆ. ಭಾನುವಾರ ಈ ಘಟನೆ ನಡೆದಿದ್ದು, ಸಂಪೂರ್ಣ ವಿವರಣೆಯನ್ನು ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ನೀಡಿದ್ದಾರೆ.
ಪಾಕಿಸ್ತಾನದಿಂದ ಡ್ರೋನ್ ಮೂಲಕ ಈ ಐಇಡಿಯನ್ನು ಅಮೃತಸರ್ನ ಈ ಹಳ್ಳಿಗೆ ಪೂರೈಸಲಾಗಿದೆ ಎಂದು ಭದ್ರತಾ ಪಡೆಗಳು ಶಂಕೆ ವ್ಯಕ್ತಪಡಿಸಿವೆ. ಮಗುವೊಂದರ ಬ್ಯಾಗ್ನಲ್ಲಿದ್ದ ಟಿಫಿನ್ ಬಾಕ್ಸ್ನಲ್ಲಿ ಐಇಡಿ ಪತ್ತೆಯಾಗಿದೆ. ಅದೇ ಬ್ಯಾಗ್ನಲ್ಲಿ 5 ಹ್ಯಾಂಡ್ ಗ್ರೆನೇಡ್ಗಳೂ ಇದ್ದವು ಎಂದು ಹೇಳಲಾಗಿದೆ. ಅದನ್ನು ಸದ್ಯ ನಿಷ್ಕ್ರಿಯಗೊಳಿಸಲಾಗಿದೆ.
ಪಾಕಿಸ್ತಾನದಿಂದ ಡ್ರೋನ್ ಮೂಲಕ ಗಡಿಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳ ಸ್ಮಗ್ಲಿಂಗ್ ನಡೆಯುತ್ತಿದೆ. ಭಾನುವಾರ ಸಂಜೆ ಹೊತ್ತಿಗೆ ಸಹ ಡ್ರೋನ್ ಶಬ್ದ ಕೇಳಿದ್ದಾಗಿ, ಇಲ್ಲಿನ ಜನ ನಮಗೆ ತಿಳಿಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅದರಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ದೇಶದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಲಿದ್ದು, ಇಂಥ ಬೆದರಿಕೆಗಳು ಪದೇಪದೆ ಬರುತ್ತಲೇ ಇರುತ್ತವೆ. ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಸಾಸಿವೆ ಕಾಳುಗಳಂತೆ ಉದುರಿ ಬಿದ್ದ ಸಾವಿರಾರು ಜನ! ಮೈನವಿರೇಳಿಸುವ ಈ ವಿಡಿಯೋ ಮಿಸ್ ಮಾಡ್ಕೋಬೇಡಿ
Published On - 2:04 pm, Mon, 9 August 21