ನಿಮ್ಮ ಮಗಳಾಗಿದ್ದರೆ ರಾಜಕೀಯಕ್ಕೆ ಬರಲು ಸಲಹೆ ನೀಡುತ್ತಿದ್ದಿರೇ? ಸೋನಿಯಾ ಪ್ರಶ್ನೆಗೆ ನರಸಿಂಹ ರಾವ್ ಉತ್ತರ ಹೇಗಿತ್ತು ನೋಡಿ!

|

Updated on: Dec 09, 2023 | 2:44 PM

Sonia Gandhi Birthday: ಸೋನಿಯಾ ಅವರ ನಂಬಿಕೆಯನ್ನು ಉಳಿಸಿಕೊಳ್ಳಲು ಪಿವಿ ನರಸಿಂಹ ರಾವ್ ಎಲ್ಲ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಸೋನಿಯಾ ಜತೆಗಿದ್ದ ರಾವ್ ಅವರ ವಿರೋಧಿ ಗುಂಪು ಅವರ ಮನಸ್ಸಿನಲ್ಲಿ ರಾವ್ ವಿರುದ್ಧದ ಅನುಮಾನವನ್ನು ಬಲಪಡಿಸುವಲ್ಲಿ ಯಶಸ್ವಿಯಾಯಿತು.

ನಿಮ್ಮ ಮಗಳಾಗಿದ್ದರೆ ರಾಜಕೀಯಕ್ಕೆ ಬರಲು ಸಲಹೆ ನೀಡುತ್ತಿದ್ದಿರೇ? ಸೋನಿಯಾ ಪ್ರಶ್ನೆಗೆ ನರಸಿಂಹ ರಾವ್ ಉತ್ತರ ಹೇಗಿತ್ತು ನೋಡಿ!
ಪಿವಿ ನರಸಿಂಹ ರಾವ್ ಮತ್ತು ಸೋನಿಯಾ ಗಾಂಧಿ (ಚಿತ್ರ ಕೃಪೆ HT)
Image Credit source: HT
Follow us on

ನವದೆಹಲಿ, ಡಿಸೆಂಬರ್ 9: ಕಾಂಗ್ರೆಸ್​ನ ಹಿರಿಯ ನಾಯಕಿ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರ 77ನೇ ಜನ್ಮದಿನ ಇಂದು (ಡಿಸೆಂಬರ್ 9). ಎರಡೆರಡು ಬಾರಿ ಕಾಂಗ್ರೆಸ್​ನಿಂದ (Congress) ಪ್ರಧಾನಿ ಹುದ್ದೆ ಆಕಾಂಕ್ಷಿ ಎಂದು ಗುರುತಿಸಿಕೊಂಡರೂ ಆ ಹುದ್ದೆಗೇರುವುದು ಅವರಿಗೆ ಸಾಧ್ಯವಾಗಲಿಲ್ಲ. 90ರ ದಶಕದಲ್ಲಿ ಪಿವಿ ನರಸಿಂಹ ರಾವ್ (PV Narasimha Rao) ಅವರು ಪ್ರಧಾನಿಯಾಗಿದ್ದಾಗ ಸೋನಿಯಾ ಗಾಂಧಿ ಮತ್ತು ಅವರ ನಡುವಣ ಬಾಂಧವ್ಯ ಹೇಗಿತ್ತು? ಆಮೇಲೆ ಅದು ಹೇಗೆ ಹಳಸುತ್ತಾ ಹೋಯಿತು ಎಂಬುದು ಗಮನಾರ್ಹ.

ಅದು 1992ರ ಆರಂಭದ ದಿನಗಳು. ನರಸಿಂಹರಾವ್ ಅವರು ಪ್ರಧಾನಿ ಕುರ್ಚಿಯ ಮೇಲೆ ಕುಳಿತು ಒಂದು ವರ್ಷ ಕಳೆದಿತ್ತು. ಆಗ ರಾವ್ ಅವರು ಸೋನಿಯಾ ಗಾಂಧಿಯವರ ಜತೆ ಸಾಕಷ್ಟು ವಿಶ್ವಾಸ ಗಳಿಸಿದ್ದರು. 1992 ರ ಆರಂಭದಲ್ಲಿ ರಾವ್ ಅವರನ್ನು ಸೋನಿಯಾ ಹೀಗೆ ಕೇಳಿದರು; ಜನರು ನನ್ನನ್ನು ರಾಜಕೀಯಕ್ಕೆ ಪ್ರವೇಶಿಸಲು ಕೇಳುತ್ತಿದ್ದಾರೆ. ನಾನು ನಿಮ್ಮ ಮಗಳಾಗಿದ್ದರೆ, ನೀವು ಏನು ಸಲಹೆ ನೀಡುತ್ತೀರಿ? ಅದಕ್ಕೆ ರಾವ್ ನೀಡಿದ ಪ್ರತಿಕ್ರಿಯೆ ಹೀಗಿತ್ತು; ‘ನೀವು ನನ್ನ ಮಗಳಾಗಿ ಕೇಳಿದ್ದೀರಿ, ಆದ್ದರಿಂದ ನಾನು ಬರಬೇಡ ಎಂದು ಹೇಳುತ್ತೇನೆ’.

ಅದಾದ ಕೆಲವು ಸಮಯದ ನಂತರ ಉಭಯ ನಾಯಕರ ನಡುವಣ ಬಾಂಧವ್ಯ ಹಳಸತೊಡಗಿತು. ಈ ಸಂಭಾಷಣೆ ನಡೆದ ಸುಮಾರು ಮೂರು ವರ್ಷಗಳ ನಂತರ, ಅಂದರೆ 1995 ರ ಆಗಸ್ಟ್ 20ರಂದು ಅಮೇಥಿಯಲ್ಲಿ ನಡೆದ ಮೊದಲ ರಾಜಕೀಯ ರ‍್ಯಾಲಿಯಲ್ಲಿ ರಾವ್ ಅವರನ್ನು ಗುರಿಯಾಗಿಸಿಕೊಂಡು ಸೋನಿಯಾ, ನನ್ನ ಕೋಪವನ್ನು ನೀವು ಅರ್ಥಮಾಡಿಕೊಳ್ಳಬಹುದು. ನನ್ನ ಪತಿ ತೀರಿಹೋಗಿ ನಾಲ್ಕು ವರ್ಷ ಮೂರು ತಿಂಗಳು ಕಳೆದರೂ ಅವರ ಹತ್ಯೆಯ ತನಿಖೆ ಬಹಳ ನಿಧಾನವಾಗಿ ನಡೆಯುತ್ತಿದೆ. ರಾಜೀವ್ ಸಾವಿನ ನಂತರ ನಾಯಕತ್ವದಲ್ಲಿ ನಿರ್ವಾತ ಸೃಷ್ಟಿಯಾಗಿದೆ ಎಂದು ಹೇಳಿದ್ದರು. ತಕ್ಷಣ ಅಲ್ಲಿ ನೆರೆದಿದ್ದ ಅಪಾರ ಜನಸ್ತೋಮ, ‘ಸೋನಿಯಾ ಅವರನ್ನು ಕರೆತನ್ನಿ, ರಾವ್ ಅವರನ್ನು ತೆಗೆದುಹಾಕಿ’ ಎಂದು ಜೋರಾಗಿ ಘೋಷಣೆಗಳನ್ನು ಕೂಗಿದ್ದರು.

1991ರಲ್ಲಿ ಸೋನಿಯಾ ಗಾಂಧಿ ರಾಜಕೀಯದಲ್ಲಿ ಸಕ್ರಿಯವಾಗಿ ಇರಲಿಲ್ಲ. ಆದರೆ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ಅವರ ವಿವೇಚನೆಗೆ ಬಿಡಲಾಗಿತ್ತು. ಅವರು ನರಸಿಂಹರಾವ್ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿದ್ದರು. 2004ರಲ್ಲಿ ಡಾ. ಮನಮೋಹನ್ ಸಿಂಗ್ ಅವರನ್ನೂ ಸೋನಿಯಾ ಅವರೇ ಆಯ್ಕೆ ಮಾಡಿದ್ದರು. ಈ ಎರಡೂ ಆಯ್ಕೆಗಳಲ್ಲಿ ಅವರಿಬ್ಬರಿಂದ ಭವಿಷ್ಯದಲ್ಲಿ ಯಾವುದೇ ಸವಾಲು ಎದುರಾಗದು ಎಂಬ ಊಹೆಯೇ ಮುಖ್ಯವಾಗಿತ್ತು.

ಸೋನಿಯಾ ಓಲೈಕೆಗೆ ಏನೆಲ್ಲ ಪ್ರಯತ್ನ ಮಾಡಿದ್ದರು ರಾವ್?

ಸೋನಿಯಾ ಗಾಂಧಿ ಅವರ ವಿಶ್ವಾಸ ಉಳಿಸಿಕೊಳ್ಳಲು ರಾವ್ ಎಲ್ಲ ರೀತಿಯ ಪ್ರಯತ್ನ ಮಾಡಿದ್ದರು. ಆದರೆ ಸೋನಿಯಾ ಜತೆ ವಿಶ್ವಾಸ ಗಳಿಸಿದ್ದ ರಾವ್ ಅವರ ವಿರೋಧಿ ಬಣ ಸೋನಿಯಾ ಮನಸ್ಸಿನಲ್ಲಿ ರಾವ್ ವಿರುದ್ಧದ ಅನುಮಾನವನ್ನು ಬಲಪಡಿಸುವಲ್ಲಿ ಯಶಸ್ವಿಯಾಯಿತು. ವಿನಯ್ ಸೀತಾಪತಿಯವರ ಪುಸ್ತಕ ‘ಹಾಫ್ ಲಯನ್’ ಪ್ರಕಾರ, ರಾವ್ ಅವರು ಸೋನಿಯಾರನ್ನು ಮೆಚ್ಚಿಸಲು ರಾಜೀವ್ ಗಾಂಧಿಯವರ ಪರಂಪರೆಯ ಮುಂದುವರಿಕೆಯಾಗಿ ತಮ್ಮ ಸರ್ಕಾರದ ಆರ್ಥಿಕ ಸುಧಾರಣೆಗಳನ್ನು ಕೈಗೊಂಡಿದ್ದರು.

ರಾಜೀವ್ ಗಾಂಧಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ ನೀಡಲಾಯಿತು. ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ 100 ಕೋಟಿ ರೂ. ಘೋಷಿಸಿದ್ದಲ್ಲದೆ, ವಾರಕ್ಕೊಮ್ಮೆ ಸೋನಿಯಾ ಮನೆಗೆ ಹೋಗಿ ಭೇಟಿಯಾಗುತ್ತಿದ್ದರು. ಸಾಮಾನ್ಯವಾಗಿ ವಾರಕ್ಕೆರಡು ಬಾರಿ ಸೋನಿಯಾ ಜೊತೆ ಫೋನ್​ನಲ್ಲಿ ಮಾತನಾಡುತ್ತಿದ್ದರು. ಸೋನಿಯಾ ಅವರ ಆಪ್ತರು ಪ್ರಧಾನಿಯವರ ಫೋನ್ ಸಂಭಾಷಣೆಗಾಗಿ ಕಾಯುತ್ತಿದ್ದರು. ರಾವ್ ಅವರ ಪುತ್ರ ರಾಜೇಶ್ವರ್ ರಾವ್ ಅವರ ಪ್ರಕಾರ, ಅವರು ತಮ್ಮ ಕುಟುಂಬದೊಂದಿಗೆ ಮಾತನಾಡಿದ್ದಾರೋ ಇಲ್ಲವೋ ನಮಗೆ ತಿಳಿದಿಲ್ಲ. ಆದರೆ ಅವರು ಮತ್ತೆ ಮತ್ತೆ ರಾಜೀವ್ ಗಾಂಧಿಯವರ ಕುಟುಂಬದೊಂದಿಗೆ ಮಾತನಾಡುತ್ತಿದ್ದರು!

ಗಾಂಧಿ ಕುಟುಂಬದ ಸುರಕ್ಷತೆಗಾಗಿ ಬದಲಾಯಿತು ಕಾನೂನು

ರಾವ್ ಅವರೊಂದಿಗಿನ ಸಭೆಗಳಲ್ಲಿ ಸೋನಿಯಾ ಸಾಮಾನ್ಯವಾಗಿ ಮೌನವಾಗಿರುತ್ತಿದ್ದರು. ಅವರೊಂದಿಗೆ ರಾಜಕೀಯ ಚರ್ಚೆ ಮಾಡುವುದನ್ನು ನಿಲ್ಲಿಸಲಾಗಿತ್ತು. ರಾವ್ ಅವರೊಂದಿಗಿನ ಭೇಟಿಗಳಲ್ಲಿ, ಸೋನಿಯಾ ಅವರ ಮಕ್ಕಳಾದ ರಾಹುಲ್-ಪ್ರಿಯಾಂಕಾ ಸುರಕ್ಷತೆಯ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಲಾಯಿತು. ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ರಾವ್ ಅವರು, ಪ್ರಸ್ತುತ ಪ್ರಧಾನಿ, ಮಾಜಿ ಪ್ರಧಾನಿಗಳು ಮತ್ತು ಅವರ ಕುಟುಂಬಗಳನ್ನು ಎಸ್‌ಪಿಜಿ ರಕ್ಷಣೆಯ ವ್ಯಾಪ್ತಿಯಲ್ಲಿ ಸೇರಿಸಿದರು.

ರಾಹುಲ್ ಗಾಂಧಿಗೆ ವಿಶೇಷ ಭದ್ರತೆ ಒದಗಿಸಲು ಅಮೆರಿಕಕ್ಕೆ ಮನವಿ ಮಾಡಿದ್ದ ರಾವ್

ರಾವ್ 1991 ರ ಸೆಪ್ಟೆಂಬರ್ 19ರಂದು ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಪತ್ರ ಬರೆದರು, ತಮ್ಮ ಮತ್ತು ದಿವಂಗತ ರಾಜೀವ್ ಗಾಂಧಿ ಕುಟುಂಬದ ನಡುವಿನ ಸ್ನೇಹವನ್ನು ನೆನಪಿಸಿದ್ದರು. ಅಷ್ಟೇ ಅಲ್ಲದೆ, ಅಮೆರಿಕದಲ್ಲಿ ನೆಲೆಸಿರುವ ರಾಹುಲ್ ಗಾಂಧಿಗೆ ಸಿಖ್ ಉಗ್ರಗಾಮಿಗಳಿಂದ ಬೆದರಿಕೆ ಇದ್ದ ಕಾರಣ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಒದಗಿಸುವಂತೆ ಕೇಳಿಕೊಂಡಿದ್ದರು.

ಅಂತರ ಹೆಚ್ಚಿಸಿಕೊಂಡ ರಾವ್ ವಿರೋಧಿಗಳು

1992 ರ ಡಿಸೆಂಬರ್ 6 ರಂದು ಬಾಬರಿ ಮಸೀದಿ ಧ್ವಂಸವು ರಾವ್ ವಿರೋಧಿ ನಾಯಕರಿಗೆ ದೊಡ್ಡ ಅವಕಾಶವನ್ನು ನೀಡಿತು. ಮಸೀದಿ ಧ್ವಂಸವನ್ನು ಸೋನಿಯಾ ಖಂಡಿಸಿದರು. ಇದಾದ ಬಳಿಕ ಸೋನಿಯಾ ಅವರನ್ನು ಭೇಟಿಯಾಗಲು ಬಂದಿದ್ದ ಮುಖಂಡರು, ರಾವ್ ನಡೆದುಕೊಂಡ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

1993 ರ ಮಧ್ಯಭಾಗದಲ್ಲಿ, ರಾವ್ ಸೋನಿಯಾ ಮನೆಗೆ ಭೇಟಿ ನೀಡುವುದನ್ನು ನಿಲ್ಲಿಸಿದರು. ಮತ್ತೊಂದು ಅಧಿಕಾರ ಕೇಂದ್ರವನ್ನು ಒಪ್ಪಿಕೊಳ್ಳದ ಕಾರಣ ರಾವ್ ಈ ಹೆಜ್ಜೆ ಇಟ್ಟಿದ್ದರೇನೋ… ರಾವ್ ಏನೇ ಯೋಚಿಸುತ್ತಿದ್ದರೂ ಅದರ ಪರಿಣಾಮ ಸೋನಿಯಾ ವಿರುದ್ಧ ಅವರ ದೂರು ಹೆಚ್ಚಾಯಿತು. ಮತ್ತೊಂದೆಡೆ, ರಾವ್ ಅವರನ್ನು ಬೆಂಬಲಿಸಲು ಯಾರೂ ಇರಲಿಲ್ಲ.

1994 ರ ಹೊತ್ತಿಗೆ, ರಾಜೀವ್ ಗಾಂಧಿ ಹತ್ಯೆ ಪ್ರಕರಣದ ನಿಧಾನಗತಿಯ ತನಿಖೆಯ ನೆಪದಲ್ಲಿ ರಾವ್ ಅವರ ವಿರೋಧಿಗಳು ಅವರನ್ನು ಹಣಿಯಲು ಪ್ರಾರಂಭಿಸಿದರು. ಅಷ್ಟೊತ್ತಿಗಾಗಲೇ ಸೋನಿಯಾ ರಾಜಕೀಯಕ್ಕೆ ಬರಲು ಮನಸ್ಸು ಮಾಡಿದ್ದರು.

ಇದನ್ನೂ ಓದಿ: ಸೋನಿಯಾ ಗಾಂಧಿ ಜನ್ಮದಿನ: ಶುಭ ಹಾರೈಸಿದ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ

1995 ರ ಆಗಸ್ಟ್ 20 ರಂದು ಸೋನಿಯಾ ಅಮೇಠಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ‍್ಯಾಲಿ ನಡೆಸಿದರು. ಇದು ಅವರ ಮೊದಲ ರಾಜಕೀಯ ರ‍್ಯಾಲಿಯಾಗಿದೆ. ಇದರಲ್ಲಿ ಅವರೇ ನಾಮನಿರ್ದೇಶನ ಮಾಡಿದ್ದ ಪ್ರಧಾನಿ ರಾವ್ ಅವರ ಗುರಿಯಾಗಿದ್ದರು! ‘ನನ್ನ ಕೋಪವನ್ನು ನೀವು ಅರ್ಥಮಾಡಿಕೊಳ್ಳಬಹುದು. ನನ್ನ ಪತಿ ತೀರಿಹೋಗಿ ನಾಲ್ಕು ವರ್ಷ ಮೂರು ತಿಂಗಳು ಕಳೆದರೂ ಅವರ ಹತ್ಯೆಯ ತನಿಖೆ ಬಹಳ ನಿಧಾನವಾಗಿ ನಡೆಯುತ್ತಿದೆ. ರಾಜೀವ್ ಸಾವಿನ ನಂತರ ನಾಯಕತ್ವದಲ್ಲಿ ನಿರ್ವಾತ ಸೃಷ್ಟಿಯಾಗಿದೆ’ ಎಂದು ಸೋನಿಯಾ ಹೇಳಿದ್ದರು.

ಅಲ್ಲಿ ನೆರೆದಿದ್ದ ಜನಸ್ತೋಮ, ‘ಸೋನಿಯಾ ಕರೆತನ್ನಿ, ರಾವ್‌ರನ್ನು ಅಧಿಕಾರದಿಂದ ಇಳಿಸಿಬಿಡಿ’ ಎಂಬ ಘೋಷಣೆಗಳನ್ನು ಕೂಗಿದವು. ಅಮೇಠಿಯ ಈ ಸಂದೇಶವು ದೇಶಾದ್ಯಂತ ಕಾಂಗ್ರೆಸ್ಸಿಗರಿಗೆ ಆಗಿತ್ತು. ರಾವ್ ಅವರನ್ನು ನಂತರ 1996 ರಲ್ಲಿ ಮತದಾರರು ತಿರಸ್ಕರಿಸಿದರು. ಮೊದಲಿನಿಂದಲೂ ನೆಹರೂ – ಗಾಂಧಿ ಕುಟುಂಬದಿಂದ ಹೊರತಾದ ಯಾವುದೇ ನಾಯಕತ್ವವನ್ನು ಕಾಂಗ್ರೆಸ್ಸಿಗರು ಸ್ವೀಕರಿಸಲಿಲ್ಲ, ಈಗಲೂ ಇಲ್ಲ.

(ಮಾಹಿತಿ ಕೃಪೆ: ಟಿವಿ9 ಭಾರತ್​ವರ್ಷ್)

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:41 pm, Sat, 9 December 23