ಮುಂಬೈ: ಲಾಕ್ಡೌನ್ ಬಳಿಕ ಚೇತರಿಸಿಕೊಳ್ಳಲು ಪರದಾಡುತ್ತಿರುವ ಮಧ್ಯಮ ಮತ್ತು ಬಡ ವರ್ಗದ ಜನರು ಹಾಗೋ ಹೀಗೋ ಜೀವನ ನಡೆಸುವಂತಾಗಿದೆ. ಈ ಕಷ್ಟದ ಸಮಯದಲ್ಲಿ ಕರ್ತವ್ಯ ನಿರತ ಪೊಲೀಸರು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿದ್ದಾರೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಸರಿಯಾಗಿದ್ದರೂ ಬಡ ವರ್ಗದ ಜನರಿಗೆ ಇದರಿಂದ ಕೆಲವೊಮ್ಮೆ ತೊಂದರೆ ಉಂಟಾಗುತ್ತಿದೆಯಂತೆ. ಈ ಬಗ್ಗೆ ಮುಂಬೈ ಸೆಷನ್ಸ್ ಕೋರ್ಟ್ ವಿಶೇಷ ತೀರ್ಪು ನೀಡಿದೆ.
ಮಾಸ್ಕ್ ಧರಿಸಿಲ್ಲ ಹಾಗೂ ಪ್ರಶ್ನಿಸಿದ ಅಧಿಕಾರಿಗಳೊಂದಿಗೆ ಸರಿಯಾಗಿ ವರ್ತಿಸಲಿಲ್ಲ ಎಂಬ ಕಾರಣಕ್ಕೆ ಅಕ್ಟೋಬರ್ 31ರಂದು ಬೀದಿ ಬದಿ ವ್ಯಾಪಾರಿಯೊಬ್ಬನನ್ನು ಮುಂಬೈನ ಶಿವಾಜಿ ಪಾರ್ಕ್ ಬಳಿ ಪೊಲೀಸರು ಬಂಧಿಸಿದ್ದರು. ಬಂಧಿತ ವ್ಯಾಪಾರಿ ಜಗದೀಶ್ ಕೋರೆ(20) ಜೀವನೋಪಾಕ್ಕಾಗಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು. ತಮ್ಮ ಕುಟುಂಬಕ್ಕೆ ಜಗದೀಶನೇ ಆಧಾರ ಸ್ತಂಭವಾಗಿದ್ದ. ಹಾಗಾಗಿ, ಜಗದೀಶ್ ಬಂಧನ ಆತನ ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡಿತ್ತು.
ಬಂಧನದ ನಂತರ ಜಗದೀಶ್ ತನ್ನನ್ನು ಬಿಡುಗಡೆಗೊಳಿಸುವಂತೆ ಕೋರಿ ಮುಂಬೈ ಸೆಷನ್ಸ್ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಗದೀಶ್ ಜಾಮೀನು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯವು ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಜಗದೀಶ್ ಬಂಧನದಿಂದ ಆತನ ಮನೆಯವರು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಅವರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಯೂ ಇಲ್ಲ. ಲಾಕ್ಡೌನ್ ಕಾರಣದಿಂದ ಬಡವರ್ಗದ ಜನರು ಬಹಳಷ್ಟು ಕಷ್ಟಪಟ್ಟಿದ್ದಾರೆ ಎಂದು ಸೆಷನ್ಸ್ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.