ಇತರ ಧರ್ಮಗಳ ಬಗ್ಗೆ ಅವಹೇಳನಕಾರಿ ಪದ ಬಳಸಲು ರಾಹುಲ್ ಗಾಂಧಿಗೆ ಧೈರ್ಯವಿದೆಯೇ?: ಬಿಜೆಪಿ

|

Updated on: Mar 19, 2024 | 8:45 PM

ರಾಹುಲ್ ಗಾಂಧಿ ನಿನ್ನೆ ಹಿಂದೂ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ. ಅವರಿಗೆ ತಪ್ಪಿನ ಅರಿವಾಗುತ್ತದೆ ಎಂದುಕೊಂಡೆವು. ಆದರೆ ಒಂದು ದಿನ ಕಳೆದರೂ ಹೇಳಿಕೆಯನ್ನು ಸರಿಪಡಿಸುವ ಪ್ರಯತ್ನಗಳು ನಡೆದಿಲ್ಲ. ಅವರ ಕೂಟದ ವಕ್ತಾರರು ಅವರ ಹೇಳಿಕೆಯಲ್ಲಿ ಅರ್ಥವನ್ನು ಹುಡುಕುತ್ತಿದ್ದಾರೆ ಮತ್ತು ಅದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ . ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿಯವರ ಸಿದ್ಧಾಂತ ಮತ್ತು ಆದರ್ಶಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷವಾಗಿ ಉಳಿದಿಲ್ಲ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಇತರ ಧರ್ಮಗಳ ಬಗ್ಗೆ ಅವಹೇಳನಕಾರಿ ಪದ ಬಳಸಲು ರಾಹುಲ್ ಗಾಂಧಿಗೆ ಧೈರ್ಯವಿದೆಯೇ?: ಬಿಜೆಪಿ
ರಾಹುಲ್ ಗಾಂಧಿ-ರವಿಶಂಕರ್ ಪ್ರಸಾದ್
Follow us on

ದೆಹಲಿ ಮಾರ್ಚ್ 19: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಹಿಂದೂ ಸಂಸ್ಕೃತಿಯನ್ನು ಅವಮಾನಿಸುತ್ತಾರೆ ಆದರೆ ಇತರ ಧರ್ಮಗಳ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುವ ಧೈರ್ಯ ಅವರಿಗೆ ಇದೆಯೇ ಎಂದು ಬಿಜೆಪಿ (BJP) ಮಂಗಳವಾರ ಹೇಳಿದೆ. ರಾಹುಲ್ ಗಾಂಧಿಯವರ ‘ಶಕ್ತಿ’ ಹೇಳಿಕೆಯಿಂದ (Shakti row) ಉಂಟಾದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ನಾಯಕ ಮಾವೋವಾದಿ ಮತ್ತು ಹಿಂದೂ ವಿರೋಧಿ ಚಿಂತನೆಗಳನ್ನು ಹೊಂದಿರುವ ಅಂಶಗಳ ಹಿಡಿತದಲ್ಲಿದ್ದಾರೆ ಎಂದು ಹೇಳಿದರು.

ರಾಹುಲ್ ಗಾಂಧಿ ನಿನ್ನೆ ಹಿಂದೂ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ. ಅವರಿಗೆ ತಪ್ಪಿನ ಅರಿವಾಗುತ್ತದೆ ಎಂದುಕೊಂಡೆವು. ಆದರೆ ಒಂದು ದಿನ ಕಳೆದರೂ ಹೇಳಿಕೆಯನ್ನು ಸರಿಪಡಿಸುವ ಪ್ರಯತ್ನಗಳು ನಡೆದಿಲ್ಲ. ಅವರ ಕೂಟದ ವಕ್ತಾರರು ಅವರ ಹೇಳಿಕೆಯಲ್ಲಿ ಅರ್ಥವನ್ನು ಹುಡುಕುತ್ತಿದ್ದಾರೆ ಮತ್ತು ಅದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ . ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿಯವರ ಸಿದ್ಧಾಂತ ಮತ್ತು ಆದರ್ಶಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷವಾಗಿ ಉಳಿದಿಲ್ಲ. ಇದು ಒಡೆದು ಆಳುವ ಮನಸ್ಸು, ಮಾವೋವಾದಿ ಚಿಂತನೆ ಮತ್ತು ಹಿಂದೂ ವಿರೋಧಿ ಚಿಂತನೆಯ ನೇತೃತ್ವದ ಕಾಂಗ್ರೆಸ್ ಪಕ್ಷವಾಗಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

“ರಾಹುಲ್ ಗಾಂಧಿ ಸಂಪೂರ್ಣವಾಗಿ ಈ ಅಂಶಗಳ ಹಿಡಿತದಲ್ಲಿದ್ದಾರೆ. ರಾಹುಲ್ ಗಾಂಧಿಯವರೇ, ಇತರ ಧಾರ್ಮಿಕ ಚಿಂತನೆಗಳಿಗೆ ಅಥವಾ ದೇವರುಗಳ ನಂಬಿಕೆಯ ಮೂಲಭೂತ ತತ್ವಗಳ ಬಗ್ಗೆ ಅದೇ ಅವಹೇಳನಕಾರಿ ಪದಗಳಲ್ಲಿ ಮಾತನಾಡಲು ನಿಮಗೆ ಧೈರ್ಯವಿದೆಯೇ?”ಎಂದು ಪ್ರಸಾದ್ ಕೇಳಿದ್ದಾರೆ.

ಭಾನುವಾರ, ಮಹಾರಾಷ್ಟ್ರದ ರ‍್ಯಾಲಿಯಲ್ಲಿ ರಾಹುಲ್ ಗಾಂಧಿಯವರು ಇವಿಎಂಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹಿಂದೂ ಧರ್ಮದಲ್ಲಿ ‘ಶಕ್ತಿ’  ಎಂಬ ಪದವಿದೆ. ನಾವು ಒಂದು ಶಕ್ತಿ ವಿರುದ್ಧ ಹೋರಾಡುತ್ತಿದ್ದೇವೆ. ಪ್ರಶ್ನೆಯೆಂದರೆ, ಅದು ಏನು, ಶಕ್ತಿ ಮತ್ತು ಅದು ನಮಗೆ ಏನು ನೀಡುತ್ತದೆ? ಇವಿಎಂಗಳ ಆತ್ಮ ಮತ್ತು ಸಮಗ್ರತೆಯನ್ನು ರಾಜನಿಗೆ (ಮೋದಿ) ವ್ಯಾಪಾರ ಮಾಡಲಾಗಿದೆ. ಇದು ಸತ್ಯ. ಇವಿಎಂಗಳು ಮಾತ್ರವಲ್ಲದೆ ದೇಶದ ಪ್ರತಿಯೊಂದು ಸ್ವಾಯತ್ತ ಸಂಸ್ಥೆಗಳು, ಅದು ಇಡಿ, ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆಯಾಗಿರಲಿ, ಕೇಂದ್ರದ ಮುಂದೆ ಬಾಗಿವೆ”ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಆಡಿಟರ್’ ರಮೇಶ್ ಅವರನ್ನು ನೆನೆದು ಭಾವುಕರಾದ ಮೋದಿ; ಯಾರು ಆ ನಾಯಕ?

ಈ ಹೇಳಿಕೆಯು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ. ಇದು ರಾಹುಲ್ ಗಾಂಧಿಯವರ ಸ್ತ್ರೀದ್ವೇಷ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ರಾಹುಲ್ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದಾಗ್ಯೂ, ಪ್ರಧಾನಿ ಮೋದಿ ಅವರು ತಮ್ಮ ಮಾತಿನ ಅರ್ಥವನ್ನು ತಿರುಚಿದ್ದಾರೆ ಎಂದು ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.

“ಮೋದಿ ಜಿ ನನ್ನ ಮಾತುಗಳನ್ನು ಇಷ್ಟಪಡುವುದಿಲ್ಲ, ಅವರು ಯಾವಾಗಲೂ ಯಾವುದಾದರೂ ರೀತಿಯಲ್ಲಿ ತಿರುಚುವ ಮೂಲಕ ಅವುಗಳ ಅರ್ಥವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ನಾನು ಕಟು ಸತ್ಯವನ್ನು ಮಾತನಾಡಿದ್ದೇನೆ ಎಂದು ಅವರಿಗೆ ತಿಳಿದಿದೆ. ನಾನು ಹೇಳಿದ ಶಕ್ತಿ, ನಾವು ಹೋರಾಡುವ ಶಕ್ತಿ, ಆ ಶಕ್ತಿಯ ಮುಖವಾಡ, ಮೋದಿ ಜಿ. ಅಂತಹ ಶಕ್ತಿಯೇ ಇಂದು ಭಾರತದ ಧ್ವನಿ, ಭಾರತದ ಸಂಸ್ಥೆಗಳು, ಸಿಬಿಐ, ಐಟಿ, ಇಡಿ, ಚುನಾವಣಾ ಆಯೋಗ, ಮಾಧ್ಯಮಗಳು, ಭಾರತೀಯ ಉದ್ಯಮ ಮತ್ತು ಭಾರತದ ಸಂಪೂರ್ಣ ಸಾಂವಿಧಾನಿಕ ರಚನೆಯನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದೆ. ನಾನು ಹೇಳಿದ ಶಕ್ತಿಯು “ಯಾವುದೇ ರೀತಿಯ ಧಾರ್ಮಿಕ ಶಕ್ತಿ” ಅಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ