ಕಳೆದ ತಿಂಗಳು ಮಹಾರಾಷ್ಟ್ರ ಸರ್ಕಾರ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shindhe) ಬಹುಮತ ಸಾಬೀತು ಮಾಡಲು ಕೆಲವೇ ಗಂಟೆ ಉಳಿದಿದ್ದಾಗ ಉದ್ಧವ್ ಠಾಕ್ರೆ (Uddhav Thackeray) ಕ್ಯಾಂಪ್ನಿಂದ ಶಿಂಧೆ ಕ್ಯಾಂಪ್ ಗೆ ಜಿಗಿದು ಸುದ್ದಿಯಾಗಿದ್ದ ಶಿವ ಸೇವಾ ಶಾಸಕ ಸಂತೋಷ್ ಬಣಗಾರ್ (Santosh Bangar) ಅವರು ಸೋಮವಾರದಂದು ಹಿಂಗೋಲಿಯ ಕೂಲಿ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಮಧ್ಯಾಹ್ನದ ಬಿಸಿಯೂಟ ಸರಬರಾಜು ಮಾಡಿದ್ದಕ್ಕೆ ಖಾಸಗಿ ಕೇಟರಿಂಗ್ ಸಂಸ್ಥೆಯೊಂದರ ಮ್ಯಾನೇಜರ್ ಗೆ ಮನಬಂದಂತೆ ನಿಂದಿಸುವುದರ ಜೊತೆಗೆ ಅವರ ಮೇಲೆ ಹಲ್ಲೆ ನಡೆಸಿದರೆಂದು ಅರೋಪಿಸಲಾಗಿದೆ. ಹಿಂಗೋಲಿ, ಬಣಗಾರ್ ಪ್ರತಿನಿಧಿಸುವ ವಿಧಾನ ಸಭಾ ಕ್ಷೇತ್ರವಾಗಿದೆ.
ಊಟ ಸರಬರಾಜು ಮ್ಯಾನೇಜರ್ ಗೆ ಊಟದ ಗುಣಮಟ್ಟದ ಬಗ್ಗೆ ಬಣಗಾರ್ ಪ್ರಶ್ನಿಸುವ ಮತ್ತು ಅವನ ತಲೆ ಮತ್ತು ಕೆನ್ನೆಗೊಮ್ಮೆ ಬಾರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
आमदार संतोष बांगर पुन्हा चर्चेत; थेट मॅनेजरच्या कानशिलात लगावली#SantoshBangar #Hingoli #HingoliNews #ViralVideo #Police pic.twitter.com/zSQMQAmeEU
— Satish Daud (@Satish_Daud) August 15, 2022
ಶಾಸಕರು ಪರಿಶೀಲಿಸಿದ್ದು ತಂಗಳಾಗಿದ್ದ ಆಹಾರ ಮತ್ತು ಅದನ್ನು ಬಿಸಾಡಲಿದ್ದೇವೆ ಅಂತ ಹೇಳಿದರೂ ಅವರು ತನ್ನ ಮಾತು ಕೇಳದೆ ಕೆನ್ನೆಗೆ ಬಾರಿಸಿದರೆಂದು ಮ್ಯಾನೇಜರ್ ನಂತರ ಹೇಳಿದ್ದಾನೆ.
ಮಹಾರಾಷ್ಟ್ರ ಸರ್ಕಾರದ ಮಿಡ್ಡೇ ಮೀಲ್ ಸ್ಕೀಮ್ ಯೋಜನೆಯಡಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಮಧ್ಯಾಹ್ನದ ಊಟ ಸರಬರಾಜು ಮಾಡಲಾಗುತ್ತದೆ. ಸದರಿ ಯೋಜನೆಯ ಗುತ್ತಿಗೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ಊಟವನ್ನು ಹಿಂಗೋಲಿ ನಗರದಾದ್ಯಾಂತ ಇರುವ ಕಾರ್ಮಿಕರಿಗೆ ಸರಬರಾಜು ಮಾಡುವ ಮೊದಲು ಅದನ್ನು ಗುತ್ತಿಗೆದಾರನಿಗೆ ಸೇರಿದ ಸ್ಥಳದಲ್ಲಿ ತಯಾರಿಸಲಾಗುತ್ತದೆ.
ಕಾರ್ಮಿಕರಿಗೆ ಸರಬರಾಜು ಮಾಡಲಾಗುತ್ತಿರುವ ಆಹಾರ ಕಳಪೆ ದರ್ಜೆಯದ್ದು ಅಂತ ದೂರು ಸ್ವೀಕರಿಸಿದ ನಂತರವೇ ತಾನು ಆಹಾರ ತಯಾರಾಗುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಎಂದು ಬಣಗಾರ್ ನಂತರ ಹೇಳಿದರು.