ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Chhatrapati Shivaji Maharaj International Airport) ದ ನಿಯಂತ್ರಣಾ ಹಕ್ಕನ್ನು ಜುಲೈನಲ್ಲಿ ಅದಾನಿ ಗ್ರೂಪ್ ಪಡೆದಿದ್ದು ಗೊತ್ತೇ ಇದೆ. ಹಾಗೆ ನಿಯಂತ್ರಣಕ್ಕೆ ಪಡೆದ ಬಳಿಕ ಏರ್ಪೋರ್ಟ್ ಬಳಿಯೇ ಇರುವ ಶಿವಾಜಿ ಪ್ರತಿಮೆಯ ಸಮೀಪ ಅದಾನಿ ಏರ್ಪೋರ್ಟ್(Adani Airport) ಎಂಬ ನಿಯಾನ್ ಸೂಚನಾ ಫಲಕವನ್ನು ಹಾಕಲಾಗಿತ್ತು. ಅದನ್ನೀಗ ಶಿವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಇಂದು ಮಧ್ಯಾಹ್ನ ಘಟನೆ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ.
ಅದಾನಿ ಏರ್ಪೋರ್ಟ್ ಸೂಚನಾ ಫಲಕವನ್ನು ನಾಶ ಮಾಡಿದ ಶಿವಸೇನೆ ಕಾರ್ಯಕರ್ತರು ನಂತರ ದಕ್ಷಿಣ ಎಕ್ಸ್ಪ್ರೆಸ್ ಹೆದ್ದಾರಿಗೆ ಬಂದಿದ್ದರಿಂದ ಅಲ್ಲಿ, ಕೆಲಹೊತ್ತು ಟ್ರಾಫಿಕ್ ಉಂಟಾಗಿತ್ತು. ನಗರದ ಉತ್ತರ-ದಕ್ಷಿಣ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಹಾಗೇ ಈ ಕೆಲಸದಲ್ಲಿ ಭಾಗಿಯಾದವರಲ್ಲಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿವಿಕೆ ಗ್ರೂಪ್ ನಿಯಂತ್ರಣದಲ್ಲಿದ್ದ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜುಲೈನಲ್ಲಿ ಅದಾನಿ ಗ್ರೂಪ್ನ ಪಾಲಾಗಿದೆ. ಅದಕ್ಕೂ ಮೊದಲು 2020ರಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯೂ ಅದಾನಿ ಗ್ರೂಪ್ ಕೈಸೇರಿತ್ತು. ಮುಂಬೈ ವಿಮಾನ ನಿಲ್ದಾಣಕ್ಕೆ ಅದಾನಿ ಏರ್ಪೋರ್ಟ್ ಎಂದು ಹೆಸರಿಡುವುದನ್ನು ಶಿವಸೇನೆ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ.
ಇದನ್ನೂ ಓದಿ: Bidar: ನಕಲಿ ನೋಟು ತಯಾರಿಕೆ ಅಡ್ಡೆ ಮೇಲೆ ದಾಳಿ; 1 ಲಕ್ಷದ 37 ಸಾವಿರ ರೂ., ಲ್ಯಾಪ್ಟಾಪ್, ಪ್ರಿಂಟರ್ ವಶಕ್ಕೆ