ರಾಜಕೀಯ ವಿಶ್ಲೇಷಣೆ: ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ದೂರ ಸರಿಯುತ್ತಿದೆ ಬ್ರಾಹ್ಮಣ ಸಮುದಾಯ, ಸೆಳೆಯುವ ಮೇಲಾಟದಲ್ಲಿ ಎಸ್​ಪಿ, ಬಿಎಸ್​ಪಿ

ರಾಜಕೀಯ ವಿಶ್ಲೇಷಣೆ: ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ದೂರ ಸರಿಯುತ್ತಿದೆ ಬ್ರಾಹ್ಮಣ ಸಮುದಾಯ, ಸೆಳೆಯುವ ಮೇಲಾಟದಲ್ಲಿ ಎಸ್​ಪಿ, ಬಿಎಸ್​ಪಿ
ಉತ್ತರ ಪ್ರದೇಶ ರಾಜಕಾರಣದ ಮುಂದಾಳುಗಳು. ಮಾಯಾವತಿ, ಯೋಗಿ ಆದಿತ್ಯನಾಥ ಮತ್ತು ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಅಸಮಾಧಾನದೊಂಡಿರುವ ಬ್ರಾಹ್ಮಣ ಸಮುದಾಯವನ್ನು ತಮ್ಮತ್ತ ಸೆಳೆಯಲು ಬಿಎಸ್​ಪಿ ಹಾಗೂ ಎಸ್​ಪಿ ದಾಳ ಉರುಳಿಸಿವೆ. ಬ್ರಾಹ್ಮಣರ ಅಸಮಾಧಾನಕ್ಕೆ ಕಾರಣವೇನು? ಬ್ರಾಹ್ಮಣ ಸಮುದಾಯ ಸೆಳೆಯಲು ಬಿಎಸ್​ಪಿ ಹಾಗೂ ಎಸ್​ಪಿ ಮಾಡುತ್ತಿರುವುದೇನು? ಇಲ್ಲಿದೆ ವಿವರ.

S Chandramohan

| Edited By: Ghanashyam D M | ಡಿ.ಎಂ.ಘನಶ್ಯಾಮ

Aug 02, 2021 | 7:23 PM

ಉತ್ತರ ಪ್ರದೇಶದಲ್ಲಿ ಈಗ ಬ್ರಾಹ್ಮಣ ಸಮುದಾಯ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದೆ. ಬಿಜೆಪಿಯ ಕಟ್ಟಾ ಬೆಂಬಲಿಗರು ಎನಿಸಿದ್ದ ಬ್ರಾಹ್ಮಣರ ಈ ಅಸಮಾಧಾನಕ್ಕೆ ಯೋಗಿ ಆದಿತ್ಯನಾಥ ಸರ್ಕಾರದ ನಿರ್ಧಾರಗಳೇ ಕಾರಣ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಅಸಮಾಧಾನದೊಂಡ ಬ್ರಾಹ್ಮಣ ಸಮುದಾಯವನ್ನು ತಮ್ಮತ್ತ ಸೆಳೆಯಲು ಬಹುಜನ ಸಮಾಜಪಕ್ಷ (ಬಿಎಸ್​ಪಿ) ಹಾಗೂ ಸಮಾಜವಾದಿ ಪಕ್ಷಗಳು (ಎಸ್​ಪಿ) ದಾಳ ಉರುಳಿಸಿವೆ. ಬಿಜೆಪಿ ವಿರುದ್ಧ ಉತ್ತರ ಪ್ರದೇಶದ ಬ್ರಾಹ್ಮಣರ ಅಸಮಾಧಾನಕ್ಕೆ ಕಾರಣವೇನು? ಬ್ರಾಹ್ಮಣ ಸಮುದಾಯ ಸೆಳೆಯಲು ಬಿಎಸ್​ಪಿ ಹಾಗೂ ಎಸ್​ಪಿ ಮಾಡುತ್ತಿರುವುದೇನು? ಇಲ್ಲಿದೆ ವಿವರ.

ಬ್ರಾಹ್ಮಣ ಸಮುದಾಯದ ಅಸಮಾಧಾನಕ್ಕೆ ಯೋಗಿ ಆದಿತ್ಯನಾಥ ಸರ್ಕಾರದ ತೀರ್ಮಾನಗಳೇ ಕಾರಣ. ಉತ್ತರ ಪ್ರದೇಶದಲ್ಲಿ ಶೇ 12ರಷ್ಟು ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮುದಾಯ ಬಿಜೆಪಿಯ ಸಂಪ್ರದಾಯಿಕ ವೋಟ್ ಬ್ಯಾಂಕ್. ಆದರೆ, ಇವರು ಬಿಜೆಪಿಯ ವಿರುದ್ಧ ಆಕ್ರೋಶಗೊಳ್ಳಲು ಉತ್ತರ ಪ್ರದೇಶದಲ್ಲಿ ಈಚೆಗೆ ನಡೆದ ಘಟನೆಗಳು, ಸರ್ಕಾರ ಕೈಗೊಂಡ ಕ್ರಮಗಳು ಕಾರಣ ಎಂದು ವಿಶ್ಲೇಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಪರಶುರಾಮ ಜಯಂತಿಗೆ ಸಾರ್ವತ್ರಿಕ ರಜೆಯನ್ನು ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ, ಈ ಸಾರ್ವತ್ರಿಕ ರಜೆಯನ್ನು ಯೋಗಿ ಆದಿತ್ಯನಾಥ ಸರ್ಕಾರ ರದ್ದುಪಡಿಸಿದ್ದು, ಬ್ರಾಹ್ಮಣ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ವಿಷ್ಣುವಿನ ಆರನೇ ಅವತಾರವಾದ ಪರಶುರಾಮನನ್ನು ಉತ್ತರ ಪ್ರದೇಶದ ಬ್ರಾಹ್ಮಣರು ಪೂಜಿಸುತ್ತಾರೆ. ತಾವು ಪರಶುರಾಮ ಜಯಂತಿಯ ಸಾರ್ವತ್ರಿಕ ರಜೆ ರದ್ದುಪಡಿಸಿದ್ದು, ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ತಂದಿದೆ. ಇದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಬಿಎಸ್​ಪಿ, ಎಸ್​ಪಿ ಪಕ್ಷಗಳು ಯತ್ನಿಸುತ್ತಿವೆ.

ಬಿಜೆಪಿ ವಿರುದ್ಧ ಬ್ರಾಹ್ಮಣರ ಅಸಮಾಧಾನಕ್ಕೆ ಇದೊಂದೇ ಕಾರಣವಲ್ಲ. ಇನ್ನೂ ಕೆಲ ಘಟನೆಗಳು ಬ್ರಾಹ್ಮಣರ ಅಸಮಾಧಾನಕ್ಕೆ ಕಾರಣವಾಗಿವೆ. ಖುಷಿ ದುಬೆಯಿಂದ ಹಿಡಿದು, ಹರಿಶಂಕರ್ ತಿವಾರಿ, ಮಾತಾ ಪ್ರಸಾದ್ ಪಾಂಡೆಗಾದ ದೌರ್ಜನ್ಯ, ಅಪಮಾನ, ಅನ್ಯಾಯಗಳು ಬ್ರಾಹ್ಮಣ ಸಮುದಾಯ ಬಿಜೆಪಿ ವಿರುದ್ಧ ಅಸಮಾಧಾನಗೊಳ್ಳಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಖುಷಿ ದುಬೆ, ಹರಿಶಂಕರ್ ತಿವಾರಿ, ಮಾತಾ ಪ್ರಸಾದ್ ಪಾಂಡೆ ಈ ಮೂವರಲ್ಲೂ ಇರುವ ಸಾಮಾನ್ಯ ಅಂಶವೇಂದರೇ, ಈ ಮೂವರು ಬ್ರಾಹ್ಮಣರು.

ಖುಷಿ ದುಬೆಯ ವಯಸ್ಸು ಇನ್ನೂ 26 ವರ್ಷ. ಉತ್ತರ ಪೊಲೀಸರಿಂದ ಎನ್‌ಕೌಂಟರ್​ನಲ್ಲಿ ಹತನಾದ ವಿಕಾಸ್ ದುಬೆ ಸಹಚರ ಅಮರ್ ದುಬೆಯ ಪತ್ನಿಯೇ ಈ ಖುಷಿ ದುಬೆ. ಅಮರ್ ದುಬೆಯನ್ನು ಪೊಲೀಸರು ಎನ್​ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ಆದರೆ, ಅಮರ್ ದುಬೆ ತನ್ನ ಹತ್ಯೆಗೂ ಒಂದು ವಾರ ಮೊದಲು ಖುಷಿ ದುಬೆಯನ್ನು ವಿವಾಹವಾಗಿದ್ದ. ಆದರೆ, ಈ ಖುಷಿ ದುಬೆ ಬಿಕ್ರೂ ಗ್ರಾಮದಲ್ಲಿ ನಡೆದ ಪೊಲೀಸರ ಹತ್ಯಾಕಾಂಡದ ಪ್ರಕರಣದ ಷಡ್ಯಂತ್ರ ರೂಪಿಸಿದವಳು ಎಂದು ಆರೋಪ ಹೊರಿಸಿ ಬಂಧಿಸಿ, ಜೈಲಿಗಟ್ಟಿದ್ದಾರೆ. ಪೊಲೀಸರ ಹತ್ಯಾಕಾಂಡದಲ್ಲಿ ಖುಷಿ ದುಬೆ ಭಾಗಿಯಾಗಿಲ್ಲ, ಕೇವಲ ಅಮರ್ ದುಬೆ ಜೊತೆಗೆ ಒಂದು ವಾರ ಮೊದಲಷ್ಟೇ ವಿವಾಹವಾಗಿದ್ದ ಕಾರಣಕ್ಕಾಗಿ ಬಂಧಿಸಿ ಜೈಲಿಗಟ್ಟಲಾಗಿದೆ. ಆಕೆ ಅಮಾಯಕಿ, ಆಕೆಯನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ಬಿಜೆಪಿ ವಿಧಾನಪರಿಷತ್ ಸದಸ್ಯ ಉಮೇಶ್ ದ್ವಿವೇದಿ ಸಿಎಂ ಯೋಗಿ ಆದಿತ್ಯನಾಥ್​ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪೊಲೀಸ್ ಹತ್ಯಾಕಾಂಡದಲ್ಲಿ ಭಾಗಿಯಾಗದಿದ್ದರೂ, ಷಡ್ಯಂತ್ರ ರೂಪಿಸದೇ ಇದ್ದರೂ, ಅಮಾಯಕಿ ಖುಷಿ ದುಬೆಯನ್ನ ಬಂಧಿಸಿ ಜೈಲಿಗಟ್ಟಲಾಗಿದೆ ಎಂಬ ಭಾವನೆ ಬ್ರಾಹ್ಮಣ ಸಮುದಾಯದ ಮಹಿಳೆಯರಲ್ಲಿದೆ. ಕಾನ್ಪುರ ಪೊಲೀಸ್ ಅಧಿಕಾರಿಯೊಬ್ಬರು ಖುಷಿ ದುಬೆಯನ್ನು ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸಲಾಗಿದೆ. ಆಕೆ ಭಾಗಿಯಾಗಿಲ್ಲ ಎಂದು ಹೇಳಿದ್ದರು. ಆದರೆ, ಆ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಎಸ್​ಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಮಿಶ್ರಾ ಹೇಳಿದ್ದಾರೆ. ಅಭಿಷೇಕ್ ಮಿಶ್ರಾಗೆ ಈಗ ಉತ್ತರ ಪ್ರದೇಶ ಬ್ರಾಹ್ಮಣರನ್ನು ಎಸ್​ಪಿ ಪರ ಸೆಳೆಯುವ ಜವಾಬ್ದಾರಿ ನೀಡಲಾಗಿದೆ.

ಸದ್ಯ ಬಿಎಸ್​ಪಿ ಪಕ್ಷದಲ್ಲಿರುವ ಹರಿಶಂಕರ್ ತಿವಾರಿ ಉತ್ತರಪ್ರದೇಶದ ಹಿರಿಯ ರಾಜಕಾರಣಿ. ಮಾಜಿ ಕಾಂಗ್ರೆಸ್ಸಿಗ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಧಾರ್ಮಿಕ ಗುರು ಮಹಂತ ಅವೈದ್ಯನಾಥ್ ವಿರುದ್ಧ ಈ ಹಿಂದೆ ಮಾತನಾಡಿದ್ದರು ಎಂಬ ಕಾರಣಕ್ಕೆ ಮನೆಯ ಮೇಲೆ ರೇಡ್ ಮಾಡಲಾಗಿತ್ತು. ಹರಿಶಂಕರ್ ತಿವಾರಿ, ಗೋರಖ್​ಪುರ ಪ್ರಾಂತ್ಯದಲ್ಲಿ ಬ್ರಾಹ್ಮಣ ಸಮುದಾಯದ ನಾಯಕರಾಗಿ ಗುರುತಿಸಿಕೊಂಡವರು.

ಮಾತಾ ಪ್ರಸಾದ್ ಪಾಂಡೆ, ಉತ್ತರಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್. ಸಮಾಜವಾದಿ ಪಕ್ಷದ ನಾಯಕರು. 79 ವರ್ಷದ ಮಾತಾ ಪ್ರಸಾದ್ ಪಾಂಡೆ ಮೇಲೆ ಇತ್ತೀಚೆಗೆ ನಡೆದ ಪಂಚಾಯತಿ ಚುನಾವಣೆ ವೇಳೆ ಹಲ್ಲೆ ನಡೆಸಲಾಗಿದೆ. ಇವೆಲ್ಲವೂ ಜಾತಿ ಕಾರಣಕ್ಕೆ ಆದ ದಾಳಿ, ಹಲ್ಲೆಗಳು ಎಂದು ಎಸ್​ಪಿ ಪಕ್ಷದ ಅಭಿಷೇಕ್ ಮಿಶ್ರಾ ಹೇಳುತ್ತಾರೆ. ಬ್ರಾಹ್ಮಣ ಸಮುದಾಯದ ಕಾಯಸ್ಥರು, ಹಿಂದುಳಿದ ವರ್ಗ, ದಲಿತರ ಜೊತೆಗೆ ಹೊಂದಿಕೊಂಡು ಜೀವನ ನಡೆಸುತ್ತಾರೆ. ಆದರೆ ರಜಪೂತರಿಂದ ಆಗುವ ದೌರ್ಜನ್ಯ, ಅನ್ಯಾಯವನ್ನು ಸಹಿಸಲ್ಲ. ಆದರೆ ಈಗ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಮೇಲೆ ರಜಪೂತ್ ಠಾಕೂರ್​ರಿಂದ ದೌರ್ಜನ್ಯ, ಅನ್ಯಾಯ ಆಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ರಜಪೂತ್ ಠಾಕೂರರು ಬ್ರಾಹ್ಮಣರ ಶ್ರೇಷ್ಠತೆಯನ್ನು ಪ್ರಶ್ನಿಸಿದ್ದಾರೆ. ಮಾಯಾವತಿ, ಅಖಿಲೇಶ್ ಯಾದವ್ ತಮ್ಮ ಜಾತಿಗಳ ಏಳಿಗೆಗಾಗಿ ಕೆಲಸ ಮಾಡುತ್ತಾರೆ. ಆದರೆ, ಅವರಿಬ್ಬರೂ ಎಂದೂ ಬ್ರಾಹ್ಮಣರಿಗೆ ತೊಂದರೆ ಕೊಡಲ್ಲ ಎಂದು ಲಖನೌ ನಗರದ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಜಪೂತರ ಬಗ್ಗೆ ಒಲವು ಹೊಂದಿದ್ದಾರೆ. ಅವರು ಸ್ವತಃ ರಜಪೂತ್ ಠಾಕೂರ್ ಸಮುದಾಯಕ್ಕೆ ಸೇರಿದವರು. ಯೋಗಿ ಆದಿತ್ಯನಾಥ್ ಹಾಗೂ ಅವರ ಸರ್ಕಾರವೇ ನಮ್ಮ ಮೇಲೆ ದೌರ್ಜನ್ಯ ನಡೆಸಿ, ಅನ್ಯಾಯ ಮಾಡುತ್ತಿದೆ ಎಂಬ ಭಾವನೆ ಯುಪಿ ಬ್ರಾಹ್ಮಣ ಸಮುದಾಯದಲ್ಲಿ ಬಂದಿದೆ.

1990ರಲ್ಲಿ ಕೇಂದ್ರದ ನ್ಯಾಷನಲ್ ಫ್ರಂಟ್ ಸರ್ಕಾರ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವವರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ 27 ರಷ್ಟು ಮೀಸಲಾತಿ ನೀಡುವ ತೀರ್ಮಾನ ಕೈಗೊಂಡಾಗ ಅದರ ವಿರುದ್ಧ ಬ್ರಾಹ್ಮಣರು ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ನಿಷ್ಠೆಯನ್ನು ಕಾಂಗ್ರೆಸ್​ನಿಂದ ಬಿಜೆಪಿಗೆ ಬದಲಾಯಿಸಿದ್ದರು. ಇದರಿಂದಾಗಿ 2017ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ 58 ಮಂದಿ ಬ್ರಾಹ್ಮಣರು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬ್ರಾಹ್ಮಣ ಸಮುದಾಯದ ಶೇ 82ರಷ್ಟು ಜನರು ಬಿಜೆಪಿಗೆ ಮತ ಚಲಾಯಿಸಿದ್ದರು ಎಂಬ ಅಂದಾಜು ಇದೆ.

ಬ್ರಾಹ್ಮಣ ಮತ ಸೆಳೆಯಲು ಎಸ್​ಪಿ ಪ್ರಯತ್ನ ವಿಧಾನಸಭಾ ಚುನಾವಣೆ ನಡೆದ 15 ತಿಂಗಳ ಬಳಿಕ ಬ್ರಾಹ್ಮಣರ ಮೇಲೆ ದೌರ್ಜನ್ಯಗಳು ಶುರುವಾದವು. ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗಳಲ್ಲಿ ಬ್ರಾಹ್ಮಣರ ಮಾತಿಗೆ ಕಿಮ್ಮತ್ತು ಇರಲಿಲ್ಲ. ಎಲ್ಲ ಕಡೆ ಲಂಚ ಜೋರಾಯಿತು. ಬ್ರಾಹ್ಮಣರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುವುದು ಸಾಮಾನ್ಯವಾಯಿತು ಎಂದು ಸಮಾಜವಾದಿ ಪಕ್ಷದ ಅಭಿಷೇಕ್ ಮಿಶ್ರಾ ಆರೋಪ ಮಾಡುತ್ತಾರೆ.

ಉತ್ತರ ಪ್ರದೇಶದ ಸಮಾಜವಾದಿ ಪಕ್ಷವೇ ಮೊದಲಿಗೆ ಬಿಜೆಪಿ ಪಕ್ಷದ ಬಗ್ಗೆ ಬ್ರಾಹ್ಮಣರ ಅಸಮಾಧಾನ, ಅಸಹನೆಯನ್ನು ಗುರುತಿಸಿ ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಯಿತು. ಪರಶುರಾಮ ಜಯಂತಿಯನ್ನು ಮತ್ತೆ ಆಚರಿಸುವ ಘೋಷಣೆ ಮಾಡುವ ಜೊತೆಗೆ ಬ್ರಾಹ್ಮಣ ನಾಯಕರ ಮೂಲಕ ಬ್ರಾಹ್ಮಣರನ್ನು ತಮ್ಮೆಡೆಗೆ ಸೆಳೆಯುವ ಕೆಲಸಕ್ಕೆ ಕೈ ಹಾಕಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಎಸ್​ಪಿ ಶಾಸಕ ಅಭಿಷೇಕ್ ಮಿಶ್ರಾ ಮೂಲಕ ಬ್ರಾಹ್ಮಣ ಸಂಘಟನೆಗಳ ನೆಟ್​ವರ್ಕ್​ ರಚಿಸಲಾಗುತ್ತಿದೆ. ಉನ್ನಾವೋ ಕ್ಷೇತ್ರದ ಮಾಜಿ ಸಂಸದೆಯೂ ಆಗಿರುವ ಬ್ರಾಹ್ಮಣ ಸಮುದಾಯದ ಅನು ಟಂಡನ್​ ಇದೀಗ ಕಾಂಗ್ರೆಸ್​ನಿಂದ ಎಸ್​ಪಿಗೆ ಸೇರಿಕೊಂಡಿದ್ದಾರೆ.

ಸಮಾಜವಾದಿ ಪಕ್ಷವು ಆಗಸ್ಟ್ 24ರಂದು ಬಲಿಯಾದಲ್ಲಿ ಪ್ರಬುದ್ಧ ಸಮ್ಮೇಳನ ನಡೆಸಲು ನಿರ್ಧರಿಸಿದೆ. ಇದಾದ ಬಳಿಕ ಬ್ರಾಹ್ಮಣರನ್ನು ಗಮನದಲ್ಲಿರಿಸಿಕೊಂಡು ಇನ್ನೂ ಕೆಲ ಸಮಾರಂಭಗಳನ್ನು ನಡೆಸಲು ಸಮಾಜವಾದಿ ಪಕ್ಷ ನಿರ್ಧರಿಸಿದೆ. ಉತ್ತರ ಪ್ರದೇಶದಲ್ಲಿ ಜನಾಭಿಪ್ರಾಯ ರೂಪಿಸುವವರೇ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅಂಥವರೊಡನೆ ಉತ್ತಮ ಭಾಂಧವ್ಯ ಬೆಳೆಸಿಕೊಂಡು ಪಕ್ಷದ ಕಡೆಗೆ ಸೆಳೆಯುವ ಕೆಲಸಕ್ಕೆ ಸಮಾಜವಾದಿ ಪಕ್ಷವು ಮುನ್ನುಡಿ ಬರೆದಿದೆ.

ಬಿಎಸ್​ಪಿ ಉರುಳಿಸುತ್ತಿದೆ ಹಲವು ದಾಳ ಬಹುಜನ ಸಮಾಜಪಕ್ಷವೂ ಸಹ ಸಮಾಜವಾದಿ ಪಕ್ಷದ ರೀತಿಯಲ್ಲಿಯೇ ಬ್ರಾಹ್ಮಣ ಸಮುದಾಯವನ್ನು ಸೆಳೆಯಲು ಹಲವು ದಾಳಗಳನ್ನು ಉರುಳಿಸುತ್ತಿವೆ. ಅಯೋಧ್ಯೆಯಲ್ಲಿ ಬಿಎಸ್​ಪಿ ಈಚೆಗೆ ಬ್ರಾಹ್ಮಣ ಸಮುದಾಯದ ನಾಯಕ ಸತೀಶ್ ಮಿಶ್ರಾ ನೇತೃತ್ವದಲ್ಲಿ ಸಮಾವೇಶ ನಡೆಸಿದೆ. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಬಿಎಸ್​ಪಿ ಅಧಿಕಾರಕ್ಕೆ ಬಂದರೆ, ಅಯೋಧ್ಯೆಯ ರಾಮಮಂದಿರ ನಿರ್ಮಾಣ ಚುರುಕುಗೊಳಿಸುವುದಾಗಿ ಬಿಎಸ್​ಪಿ ಹೇಳಿದೆ. ಬ್ರಾಹ್ಮಣ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಬ್ರಾಹ್ಮಣ ಸಮುದಾಯಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಸಂದೇಶ ರವಾನಿಸಿದೆ. 2007ರಲ್ಲಿ ಬಿಎಸ್​ಪಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದು, ದಲಿತ-ಬ್ರಾಹ್ಮಣ ಸಮುದಾಯಗಳು ಒಗ್ಗೂಡಿ ಬಿಎಸ್​ಪಿಗೆ ಮತ ಚಲಾಯಿಸಿದ್ದು. ಈಗ ಮತ್ತೆ 2022ರಲ್ಲಿ ಅದೇ ಜಾತಿ ಸೂತ್ರವನ್ನು ಆಳವಡಿಸಿಕೊಂಡು ಚುನಾವಣೆ ಎದುರಿಸಲು ಬಿಎಸ್​ಪಿ ಸಜ್ಜಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ದಲಿತ ಸಮುದಾಯದ ಮತಗಳು ಶೇ 20ರಷ್ಟಿದೆ. ದಲಿತ ಮತ್ತು ಬ್ರಾಹ್ಮಣ ಜಾತಿಗಳು ಯಾವುದೇ ಪಕ್ಷದ ಪರ ಒಗ್ಗೂಡಿದರೆ ಶೇ 32ರಷ್ಟು ಮತಗಳು ಅವರದಾಗುತ್ತವೆ. ಈ ಎರಡು ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಮತ್ತೆ ಅಧಿಕಾರಕ್ಕೇರಬಹುದು ಎಂಬುದು ಬಿಎಸ್​ಪಿಯ ಲೆಕ್ಕಾಚಾರ.

ಬಿಜೆಪಿ ನಾಯಕರಿಗೆ ಈಗಲೂ ಬ್ರಾಹ್ಮಣ ಸಮುದಾಯ ನಮ್ಮ ಪಕ್ಷವನ್ನು ಬಿಟ್ಟು ಹೋಗಲಾರದು ಎಂಬ ಆತ್ಮವಿಶ್ವಾಸವಿದೆ ಎಂದು ಸುಲ್ತಾನ್​ಪುರ ಜಿಲ್ಲೆಯ ಬಿಜೆಪಿ ಶಾಸಕ ದೇವಮಣಿ ದ್ವಿವೇದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರದ ವಕ್ತಾರ, ಇಂಧನ ಸಚಿವ ಶ್ರೀಕಾಂತ್ ಶರ್ಮಾ ಹೇಳುವ ಪ್ರಕಾರ, ನಮ್ಮ ಕೆಲಸವೇ ನಮ್ಮನ್ನು ಕಾಪಾಡುತ್ತದೆ. ವಿರೋಧ ಪಕ್ಷಗಳ ಕಾರ್ಯತಂತ್ರದ ವಿರುದ್ಧ ಇದು ನಮ್ಮ ನಡೆ. ನಮ್ಮ ಕೆಲಸವೇ ನಮ್ಮ ಪರವಾಗಿ ಮಾತನಾಡುತ್ತದೆ. ಜಾತಿ ಎನ್ನುವುದು ವಾಸ್ತವ. ಆದರೆ, ನಮ್ಮದು ಅಭಿವೃದ್ಧಿಯ ರಾಜಕೀಯ ಎನ್ನುತ್ತಾರೆ ಅವರು.

(Political Analysis Brahmin Vote Bank is Moving Away from BJP in Uttar Pradesh SP BSP Tries to Woo Them)

ಇದನ್ನೂ ಓದಿ: ಅಮಿತ್​ ಶಾ ಉತ್ತರ ಪ್ರದೇಶ ಭೇಟಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ರನ್ನು ಹೊಗಳಿದ ಗೃಹ ಸಚಿವ

ಇದನ್ನೂ ಓದಿ: UP Assembly Election: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ; ಯೋಗಿ ಆದಿತ್ಯನಾಥ್​​ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರಂತೆ..

Follow us on

Most Read Stories

Click on your DTH Provider to Add TV9 Kannada