ಪುಣೆ: ಎಷ್ಟೇ ಆಧುನಿಕ ಮನಸ್ಥಿತಿ ಬೆಳೆದಿದ್ದರೂ ಗಂಡು ಮಕ್ಕಳಿಂದಲೇ ತಮಗೆ ಮುಕ್ತಿ ಸಿಗುವುದು ಎಂಬ ಭಾವನೆ ಇಂದಿಗೂ ಅನೇಕ ಜನರ ಮನಸಿನಲ್ಲಿದೆ. ಅದೇ ಕಾರಣಕ್ಕೆ ಗಂಡು ಮಗು ಹುಟ್ಟಲಿ ಎಂದು ಏನೇನೋ ಚಿಕಿತ್ಸೆ ಪಡೆಯುವವರು, ಹಳೆಯ ಪದ್ಧತಿಗಳನ್ನು ಅನುಸರಿಸುವವರೂ ಇದ್ದಾರೆ. ಮಹಾರಾಷ್ಟ್ರದ ಪುಣೆಯ (Pune) ಮಹಿಳೆಯೊಬ್ಬರು ಗಂಡು ಮಗುವನ್ನು ಹೆರಬೇಕೆಂಬ ಕಾರಣಕ್ಕೆ ಆ ಊರಿನ ಗ್ರಾಮಸ್ಥರು ಆಕೆಗೆ ಜನರ ಮುಂದೆ ಬೆತ್ತಲೆ ಸ್ನಾನ ಮಾಡಲು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಜನರ ಮುಂದೆಯೇ ಬೆತ್ತಲೆಯಾಗಿ ನಿಂತು ಸ್ನಾನ ಮಾಡಿದರೆ ಆ ಮಹಿಳೆಗೆ ಗಂಡು ಮಗು ಜನಿಸುತ್ತದೆ ಎಂಬ ನಂಬಿಕೆ ಆ ಊರಿನಲ್ಲಿದೆ. ಹೀಗಾಗಿ, ಆ ಊರಿನ ಪದ್ಧತಿಯಂತೆ ಸಾರ್ವಜನಿಕರ ಮುಂದೆ ಬೆತ್ತಲೆ ಸ್ನಾನ ಮಾಡಲು ಗರ್ಭಿಣಿಗೆ ಒತ್ತಾಯಿಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಇದನ್ನು ಖಂಡಿಸಿ ಆ ಮಹಿಳೆ ನೀಡಿದ ದೂರಿನ ಮೇರೆಗೆ, ಪುಣೆ ಪೊಲೀಸರು ಭಾನುವಾರ ಎಫ್‌ಐಆರ್ ದಾಖಲಿಸಿದ್ದಾರೆ. ಆ ಗರ್ಭಿಣಿ ತನ್ನ ಪತಿ, ಅತ್ತೆ ಮತ್ತು ಮೌಲಾನಾ ಬಾಬಾ ಜಮಾದಾರ್ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ: ಫಡ್ನವಿಸ್ಗೆ ಹಣಕಾಸು, ಗೃಹ ಇಲಾಖೆ
ಪುಣೆಯ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಜಗನ್ನಾಥ್ ಕಲಾಸ್ಕರ್ ಪ್ರಕಾರ, ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
2013ರಿಂದ ವರದಕ್ಷಿಣೆಗಾಗಿ ಮತ್ತು ಗಂಡು ಮಗುವಿಗೆ ಜನ್ಮ ನೀಡದಿದ್ದಕ್ಕಾಗಿ ತನ್ನ ಗಂಡನ ಮನೆಯವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಗಂಡು ಮಗು ಹುಟ್ಟಬೇಕೆಂಬ ಕಾರಣಕ್ಕೆ ಅನೇಕ ಸಂದರ್ಭಗಳಲ್ಲಿ ತನ್ನ ಮೇಲೆ ಬ್ಲಾಕ್ ಮ್ಯಾಜಿಕ್ ಕೂಡ ಮಾಡಿದ್ದರು ಎಂದು ಆ ಮಹಿಳೆ ತಿಳಿಸಿದ್ದಾರೆ.
“ಇತ್ತೀಚೆಗೆ ಸ್ಥಳೀಯ ಮಂತ್ರವಾದಿಯೊಬ್ಬರು ಮಹಿಳೆಯರು ಸಾರ್ವಜನಿಕವಾಗಿ ಎಲ್ಲರೆದುರು ನಿಂತು ಬೆತ್ತಲೆಯಾಗಿ ಸ್ನಾನ ಮಾಡಿದರೆ ಅವರಿಗೆ ಗಂಡು ಮಗು ಜನಿಸುತ್ತದೆ ಎಂದು ಹೇಳಿದ್ದರು. ಅಲ್ಲದೆ, ನನ್ನ ಮನೆಯವರಿಗೆ ನನ್ನನ್ನು ಕರೆದೊಯ್ದ ಈ ವಿಧಿ ವಿಧಾನಗಳ ನಂತರ ನನಗೆ ಗಂಡು ಮಗು ಹುಟ್ಟುವುದು ಖಚಿತ ಎಂದು ಹೇಳಿ ನಂಬಿಸಿದ್ದರು. ಹೀಗಾಗಿ, ನನ್ನ ಮನೆಯವರು ನನಗೆ ಜನರೆದುರು ಬೆತ್ತಲೆಯಾಗಿ ಸ್ನಾನ ಮಾಡಲು ಹೇಳಿದರು” ಎಂದು ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಒಂದೇ ಕುಟುಂಬದ 9 ಜನರ ಶವ ಪತ್ತೆ ಪ್ರಕರಣ: ಮೂಢನಂಬಿಕೆಗೆ ಮಾರುಹೋಗಿ ಕೊಲೆಯಾದ ಕುಟುಂಬಸ್ಥರು
ವ್ಯಾಪಾರದ ಉದ್ದೇಶಕ್ಕಾಗಿ ತನ್ನ ಆಸ್ತಿಯ ಮೇಲೆ 75 ಲಕ್ಷ ರೂ. ಸಾಲ ಪಡೆಯಲು ಪತಿ ತನ್ನ ಸಹಿಯನ್ನು ನಕಲಿ ಮಾಡಿದ್ದಾನೆ ಎಂದು ಸಹ ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರ ದೂರಿನ ಮೇರೆಗೆ ಪುಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.