
ಮುಂಬೈ: ಲಸಿಕೆ ಪೂರೈಕೆ ಅಭಾವ ಮುಂಬೈಯಲ್ಲಿ ಮತ್ತೆ ತಲೆದೋರಿದೆ. ಗ್ರೇಟರ್ ಮುಂಬೈ ಪೌರಾಡಳಿತ ಸಂಸ್ಥೆಯು ಕೋವಿಡ್-19 ಲಸಿಕೆ ಲಭ್ಯವಿಲ್ಲದೆ ಕಾರಣ ಲಸಿಕೆ ನೀಡುವ ಕಾರ್ಯಕ್ರಮವನ್ನು ಬುಧವಾರದಂದು ಸ್ಥಗಿತಗೊಳಿಸಲಾಗದೆಯೆಂದು ಪ್ರಕಟನೆಯೊಂದರಲ್ಲಿ ತಿಳಿಸಿದೆ. ಈ ಕಾರಣಕ್ಕಾಗೇ, ಮಂಗಳವಾರದಂದು ಸರ್ಕಾರ ಮತ್ತು ಮಹಾನಗರ ಪಾಲಿಕೆಯಿಂದ ನಿರ್ವಹಿಸಲ್ಪಡುತ್ತಿರುವ ನಗರದ 309 ಲಸಿಕಾ ಕೇಂದ್ರಗಳಲ್ಲಿ ಕೇವಲ 58 ಮಾತ್ರ ಜನರಿಗೆ ಲಸಿಕೆ ನೀಡಿದವು. ಮಹಾರಾಷ್ಟ್ರದಲ್ಲಿ ಲಸಿಕೆ ಪಡೆದವರ ಸಂಖ್ಯೆ 4 ಕೋಟಿ ದಾಟಿದ ಮಾಹಿತಿ ಲಭ್ಯವಾದ ನಂತರ ಈ ಬೆಳವಣಿಗೆ ನಡೆದಿದೆ. ಲಸಿಕೆ ದಾಸ್ತಾನನ್ನು ಹೆಚ್ಚಿಸಿದ್ದರಿಂದ ಕೇವಲ ಒಂದು ತಿಂಗಳ ಅವಧಿಯಲ್ಲಿ ಈ ಸಾಧನೆ ಮಾಡಲಾಯಿತು ಎಂದು ರಾಜ್ಯ ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ. ಜೂನ್ 26ರಂದು ಮಹಾರಾಷ್ಟ್ರ ಮೂರು ಕೋಟಿ ಸಂಖ್ಯೆಯನ್ನು ದಾಟಿತ್ತು. ಹಾಗೆಯೇ, ಮೇ 13 ರಂದು 2 ಕೋಟಿ ಜನ ಲಸಿಕೆ ಪಡೆದಿದ್ದಾರೆಂದು ಸರ್ಕಾರ ಹೇಳಿತ್ತು.
ಹಾಗೆ ನೋಡಿದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಯಸ್ಕರಿಗೆಲ್ಲ ಲಸಿಕೆ ನೀಡುವ ಘೋಷಣೆಯನ್ನು ಮಾಡಿದ ನಂತರ ಮಹಾರಾಷ್ಟ್ರದಲ್ಲಿ ಲಸಿಕೆಯ ಅಭಾವ ಆಗಾಗ ತಲೆದೋರುತ್ತಲೇ ಇದೆ.
ಅತಿ ಹೆಚ್ಚು ಲಸಿಕೆ ಜನರನ್ನೊಳಗೊಂಡ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದರೂ ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು, ಅನೇಕ ಜಿಲ್ಲೆಗಳಲ್ಲಿ ಲಸಿಕೆಯ ದಾಸ್ತಾನು ಕಡಿಮೆಯಾಗುತ್ತಿರುವುರಿಂದ ಲಸಿಕಾ ಕಾರ್ಯಕ್ರಮವನ್ನು ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ ಎಂದು ವಿಧಾನ ಸಭೆಗೆ ತಿಳಿಸಿದ್ದರು.
ಕಳೆದ 24 ಗಂಟೆಗಳಲ್ಲಿ 351 ಹೊಸ ಕೋವಿಡ್ ಪ್ರಕರಣಗಳು ಮುಂಬೈಯಲ್ಲಿ ವರದಿಯಾಗಿವೆ ಮತ್ತು 525 ಸೋಂಕಿತರು ಗುಣಮುಖ ಹೊಂದಿದ್ದಾರೆ. ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಶೇಕಡಾ 97 ರಷ್ಟಿದೆ. ದೇಶದ ಆರ್ಥಿಕ ರಾಜಧಾನಿ ಎಂದು ಕರೆಸಿಕೊಳ್ಳುವ ಮುಂಬೈಯಲ್ಲಿ ಪ್ರಸಕ್ತವಾಗಿ 6,161 ಸಕ್ರಿಯ ಪ್ರಕರಣಗಳಿವೆ.