ಭಾರತ್ ಬಯೋಟೆಕ್​ನಿಂದ 5.45 ಕೋಟಿ ಡೋಸ್ ಲಸಿಕೆ ಉತ್ಪಾದನೆ: ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ

ಜನವರಿಯಿಂದ ಜುಲೈ ಅಂತ್ಯದೊಳಗೆ ಭಾರತ್ ಬಯೋಟೆಕ್ ಕಂಪನಿಯು ಕೇಂದ್ರ ಸರ್ಕಾರಕ್ಕೆ 8 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಪೂರೈಸಬೇಕಿತ್ತು.

ಭಾರತ್ ಬಯೋಟೆಕ್​ನಿಂದ 5.45 ಕೋಟಿ ಡೋಸ್ ಲಸಿಕೆ ಉತ್ಪಾದನೆ: ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ
ಕೊವ್ಯಾಕ್ಸಿನ್
S Chandramohan

| Edited By: Ghanashyam D M | ಡಿ.ಎಂ.ಘನಶ್ಯಾಮ

Jul 20, 2021 | 10:55 PM

ಭಾರತ್ ಬಯೋಟೆಕ್ ಕಂಪನಿಯು ಉತ್ಪಾದಿಸುವ ಕೊವ್ಯಾಕ್ಸಿನ್ ಕೊರೊನಾ ಲಸಿಕೆಯು ಭಾರತದ ಸ್ವದೇಶಿ ಲಸಿಕೆ. ಜನವರಿಯಿಂದ ಜುಲೈ ಅಂತ್ಯದೊಳಗೆ ಭಾರತ್ ಬಯೋಟೆಕ್ ಕಂಪನಿಯು ಕೇಂದ್ರ ಸರ್ಕಾರಕ್ಕೆ 8 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಪೂರೈಸಬೇಕಿತ್ತು. ಆದರೆ, ಜುಲೈ 16ರವರೆಗೆ ಭಾರತ್ ಬಯೋಟೆಕ್ ಕಂಪನಿಯು 5.45 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಪೂರೈಸಿದೆ ಎಂದು ಕೇಂದ್ರ ಸರ್ಕಾರವು ಸಂಸತ್​ಗೆ ತಿಳಿಸಿದೆ.

ಭಾರತದ ಸ್ವದೇಶಿ ಲಸಿಕೆಯಾದ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆಯು ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಜನವರಿ 16ರಿಂದ ಜುಲೈ 16ರವರೆಗೆ ಭಾರತ್ ಬಯೋಟೆಕ್ ಕಂಪನಿಯು ದೇಶಕ್ಕೆ 5.45 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಪೂರೈಸಿದೆ. ಆದರೆ, ಕೇಂದ್ರ ಸರ್ಕಾರ ಹಾಗೂ ಭಾರತ್ ಬಯೋಟೆಕ್ ಕಂಪನಿ ನಡುವೆ ಆಗಿರುವ ಒಪ್ಪಂದದ ಪ್ರಕಾರ, 8 ಕೋಟಿ ಡೋಸ್ ಲಸಿಕೆಯನ್ನು ಜುಲೈ ತಿಂಗಳ ಅಂತ್ಯದೊಳಗೆ ಪೂರೈಸಬೇಕು. ಒಂದು ವೇಳೆ ಒಪ್ಪಂದದ ಪ್ರಕಾರ, ಕಾಲಮಿತಿಯಲ್ಲಿ ಲಸಿಕೆ ಪೂರೈಸದೇ ಇದ್ದರೇ, ಆರ್ಥಿಕ ದಂಡ ವಿಧಿಸಲು ಅವಕಾಶ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತ್ ಬಯೋಟೆಕ್ ಕಂಪನಿಯು ತಿಂಗಳಿಗೆ ಸದ್ಯದಲ್ಲೇ 5.8 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಲಿದೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಕೇಂದ್ರ ಸರ್ಕಾರವು ಈ ಬಗ್ಗೆ ಪಾರ್ಲಿಮೆಂಟ್ ಗೆ ಲಿಖಿತ ಉತ್ತರ ನೀಡಿದೆ. ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಈಗ ತಿಂಗಳಿಗೆ ಸರಾಸರಿ 11 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯು ತಿಂಗಳಿಗೆ ಸರಾಸರಿ 2.5 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಉತ್ಪಾದಿಸುತ್ತಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆಯು ಪಾರ್ಲಿಮೆಂಟ್ ಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಭಾರತವು ಒಟ್ಟಾರೆ ಭಾರತ್ ಬಯೋಟೆಕ್ ಕಂಪನಿಯಿಂದ 48 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆ ಪೂರೈಕೆಯ ನಿರೀಕ್ಷೆ ಇಟ್ಟುಕೊಂಡಿದೆ.

ಆಗಸ್ಟ್ ತಿಂಗಳಿನಿಂದ 19 ಕೋಟಿ ಡೋಸ್ ಲಸಿಕೆ ಪೂರೈಸಲು ಈಗಾಗಲೇ ಆರ್ಡರ್ ನೀಡಿದೆ. ಭಾರತ್ ಬಯೋಟೆಕ್ ಕಂಪನಿಯು ಜನವರಿಯಿಂದ ಜುಲೈ 16ರವರೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಖಾಸಗಿ ಆಸ್ಪತ್ರೆಗಳಿಗೆ ಪೂರೈಸಿರುವ ಒಟ್ಟಾರೆ ಲಸಿಕೆಯ ಪ್ರಮಾಣವೇ 5.45 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆ ಮಾತ್ರ.

ಮತ್ತೊಂದೆಡೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಜನವರಿಯಿಂದ ಜುಲೈ 16ರವರೆಗೆ 36.1 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಪೂರೈಸಿದೆ. ಸದ್ಯದಲ್ಲೇ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಸದ್ಯದಲ್ಲೇ ತಿಂಗಳಿಗೆ 12 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸಲಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆಯು ಸಂಸತ್‌ಗೆ ಲಿಖಿತ ಉತ್ತರ ನೀಡಿದೆ.

ರಷ್ಯಾದಿಂದ ಇದುವರೆಗೂ 33 ಲಕ್ಷ ಡೋಸ್ ಸ್ಪುಟ್ನಿಕ್ ಲಸಿಕೆಯನ್ನು ಭಾರತಕ್ಕೆ ಅಮದು ಮಾಡಿಕೊಳ್ಳಲಾಗಿದೆ. ಭಾರತ್ ಬಯೋಟೆಕ್ ಕಂಪನಿಯು ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಕೋರಿ ಜುಲೈ 9 ರಂದು ಅರ್ಜಿ ಸಲ್ಲಿಸಿದೆ. ಬೇರೆ ಕಂಪನಿಗಳ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮೋದನೆ ನೀಡಲು ವಿಶ್ವ ಆರೋಗ್ಯ ಸಂಸ್ಥೆಯು 2 ರಿಂದ 3 ತಿಂಗಳ ಕಾಲಾವಕಾಶ ತೆಗೆದುಕೊಂಡಿದೆ. ಹೀಗಾಗಿ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಗೂ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮೋದನೆ ಸಿಗಲು 2 ರಿಂದ 3 ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆಮೆರಿಕಾದ ಮಾಡೆರ್ನಾ ಕಂಪನಿಯ ಕೊರೊನಾ ಲಸಿಕೆಗೆ ಭಾರತದ ಡಿಸಿಜಿಐ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಆದರೆ, ಫೈಜರ್ ಕಂಪನಿಯು ಇನ್ನೂ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿಲ್ಲ. ಭಾರತವು ಆಮೆರಿಕಾದದಿಂದ ದಾನದ ರೂಪದಲ್ಲಿ ಫೈಜರ್, ಮಾಡೆರ್ನಾ ಲಸಿಕೆಗಳನ್ನು ಇನ್ನೂ ಸ್ವೀಕರಿಸಿಲ್ಲ. ಭಾರತದ ಕೊರೊನಾ ಲಸಿಕೆಯ ರಾಷ್ಟ್ರೀಯ ತಜ್ಞರ ತಂಡವು ಫೈಜರ್, ಮಾಡೆರ್ನಾ ಕಂಪನಿಗಳ ಲಸಿಕೆ ಸೇರಿದಂತೆ ವಿದೇಶಿ ಲಸಿಕೆಗಳನ್ನು ಭಾರತಕ್ಕೆ ಅಮದು ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆಗೆ ಸಂಸತ್‌ಗೆ ಲಿಖಿತ ಉತ್ತರ ನೀಡಿದೆ.

(Bharth Biotech not Producing Required Amount of Covid Vaccine Dose)

ಇದನ್ನೂ ಓದಿ: Corona Vaccine: 40 ಕೋಟಿ ಡೋಸ್ ಸಮೀಪಿಸಿದ ಭಾರತದ ಕೊವಿಡ್19 ಲಸಿಕೆ ನೀಡಿಕೆ ಪ್ರಮಾಣ

ಇದನ್ನೂ ಓದಿ: Delta Variant: ಕೊರೊನಾ ಲಸಿಕೆ ಪಡೆದ ನಂತರವೂ ಹಬ್ಬಿದ ಸೋಂಕಿನಲ್ಲಿ ಶೇ.86.09 ಪಾಲು ಡೆಲ್ಟಾ ತಳಿಯದ್ದು; ಐಸಿಎಂಆರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada