ನ್ಯಾಯಾಲಯ ಪ್ರಕರಣಗಳಿಂದ ರಕ್ಷಣೆ ನೀಡಿದರೆ ಕೊವ್ಯಾಕ್ಸ್ ಒಕ್ಕೂಟದ ಮೂಲಕ ಭಾರತಕ್ಕೆ 75 ಲಕ್ಷ ಡೋಸ್ ಲಸಿಕೆ

ವಿದೇಶಿ ಕಂಪನಿಗಳ ಕೊರೊನಾ ಲಸಿಕೆಗೆ ಭಾರತ ಸರ್ಕಾರವು ಸೈಡ್ ಎಫೆಕ್ಟ್ ವಿರುದ್ಧದ ಕೋರ್ಟ್ ಕೇಸ್​ಗಳಿಂದ ರಕ್ಷಣೆ ನೀಡಿದರೆ, ಭಾರತಕ್ಕೆ ಕೊವ್ಯಾಕ್ಸ್ ಒಕ್ಕೂಟದ ಮೂಲಕ 75 ಲಕ್ಷ ಡೋಸ್ ಕೊರೊನಾ ಲಸಿಕೆ ಪೂರೈಕೆಯಾಗಲಿದೆ.

  • Updated On - 10:53 pm, Tue, 20 July 21 Edited By: Ghanashyam D M | ಡಿ.ಎಂ.ಘನಶ್ಯಾಮ
ನ್ಯಾಯಾಲಯ ಪ್ರಕರಣಗಳಿಂದ ರಕ್ಷಣೆ ನೀಡಿದರೆ ಕೊವ್ಯಾಕ್ಸ್ ಒಕ್ಕೂಟದ ಮೂಲಕ ಭಾರತಕ್ಕೆ 75 ಲಕ್ಷ ಡೋಸ್ ಲಸಿಕೆ
ಕೊವಿಡ್ ಲಸಿಕೆ

ದೆಹಲಿ: ವಿದೇಶಿ ಕಂಪನಿಗಳ ಕೊರೊನಾ ಲಸಿಕೆಗೆ ಭಾರತ ಸರ್ಕಾರವು ಸೈಡ್ ಎಫೆಕ್ಟ್ ವಿರುದ್ಧದ ಕೋರ್ಟ್ ಕೇಸ್​ಗಳಿಂದ ರಕ್ಷಣೆ ನೀಡಿದರೆ, ಭಾರತಕ್ಕೆ ಕೊವ್ಯಾಕ್ಸ್ ಒಕ್ಕೂಟದ ಮೂಲಕ 75 ಲಕ್ಷ ಡೋಸ್ ಕೊರೊನಾ ಲಸಿಕೆ ಪೂರೈಕೆಯಾಗಲಿದೆ. ಕೇಂದ್ರ ಸರ್ಕಾರವು ವಿದೇಶಿ ಲಸಿಕಾ ಕಂಪನಿಗಳಿಗೆ ಕೋರ್ಟ್ ಕೇಸ್​ನಿಂದ ರಕ್ಷಣೆ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರವು ಮಾಡೆರ್ನಾ ಕಂಪನಿಯ ಲಸಿಕೆಗೆ ಕೋರ್ಟ್ ಕೇಸ್ ವಿನಾಯಿತಿ ನೀಡಿದ ನಿಯಮಗಳನ್ನು ಕಂಪನಿಗೆ ನೀಡಿದೆ.

ಭಾರತದಲ್ಲಿ ಈಗ ಕೊರೊನಾ ಲಸಿಕೆಯ ತೀವ್ರ ಕೊರತೆ ಇದೆ. ಜುಲೈ ತಿಂಗಳಲ್ಲಿ ದೇಶದ ಜನರಿಗೆ 12 ಕೋಟಿ ಡೋಸ್ ಲಸಿಕೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ನಿತ್ಯ 40 ಲಕ್ಷ ಡೋಸ್ ಸರಾಸರಿ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದೆ. ಕೇಂದ್ರಿಕೃತ ಕೊರೊನಾ ಲಸಿಕೆ ನೀಡಿಕೆ ಆರಂಭವಾದ ಜೂನ್ 21 ರಿಂದ ಜುಲೈ 20ರವರೆಗೆ 19.2 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಜನವರಿ 16ರಿಂದ ಇಲ್ಲಿಯವರೆಗೂ 41.18 ಕೋಟಿ ಡೋಸ್ ಲಸಿಕೆಗಳನ್ನು ಜನರಿಗೆ ನೀಡಲಾಗಿದೆ. ಆದರೂ ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೊರೊನಾ ಲಸಿಕೆಯ ಉತ್ಪಾದನೆಯಾಗುತ್ತಿಲ್ಲ. ಕೊರೊನಾ ಲಸಿಕೆಗೆ ಹೆಚ್ಚಿನ ಬೇಡಿಕೆ ಇದ್ದರೂ, ಪೂರೈಸಲಾಗುತ್ತಿಲ್ಲ. ಹೀಗಾಗಿ ಭಾರತವು ವಿದೇಶದಿಂದ ಕೊರೊನಾ ಲಸಿಕೆಯ ಅಮದಿಗೆ ಎದುರು ನೋಡುತ್ತಿದೆ. ಆದರೇ, ವಿದೇಶಿ ಲಸಿಕಾ ಕಂಪನಿಗಳು ಹಾಕಿರುವ ಷರತ್ತು ಭಾರತಕ್ಕೆ ಲಸಿಕೆ ಪೂರೈಕೆಗೆ ಅಡ್ಡಿಯಾಗಿದೆ. ಈಗಾಗಲೇ ಭಾರತ ಸರ್ಕಾರ ವಿದೇಶಿ ಲಸಿಕಾ ಕಂಪನಿಗಳ ಬೇಡಿಕೆಯನ್ನು ಈಡೇರಿಸಲು ತೀರ್ಮಾನ ಕೈಗೊಂಡಿದೆ.

ವಿದೇಶಿ ಲಸಿಕಾ ಕಂಪನಿಗಳು ತಮ್ಮ ಲಸಿಕೆಯ ಸೈಡ್ ಎಫೆಕ್ಟ್ ವಿರುದ್ಧ ಕೋರ್ಟ್ ಕೇಸ್ ದಾಖಲಿಸದಂತೆ, ಕಾನೂನಿನ ರಕ್ಷಣೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದವು. ಈ ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈಗಾಗಲೇ ಮಾಡೆರ್ನಾ ಕಂಪನಿಯ ಲಸಿಕೆಗೆ ಭಾರತದ ಡಿಸಿಜಿಐ ತುರ್ತು ಬಳಕೆಗೆ ಒಪ್ಪಿಗೆ ನೀಡಿದೆ. ಮಾಡೆರ್ನಾ ಕಂಪನಿಯ ಲಸಿಕೆಯನ್ನು ಅಮದು ಮಾಡಿಕೊಂಡು ಪೂರೈಸಲು ಸಿಪ್ಲಾ ಕಂಪನಿಯು ಒಪ್ಪಂದ ಮಾಡಿಕೊಂಡಿದೆ.

ಈಗ ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆ ಪೂರೈಕೆಗಾಗಿ ರಚಿಸಲಾಗಿರುವ ವ್ಯಾಕ್ಸಿನ್ ಗ್ಲೋಬಲ್ ಆಕ್ಸೆಸ್ ಪ್ರೋಗ್ರಾಂನಡಿ (ಕೊವ್ಯಾಕ್ಸ್) ಭಾರತಕ್ಕೆ 75 ಲಕ್ಷ ಡೋಸ್ ಲಸಿಕೆ ಪೂರೈಸುವುದಾಗಿ ವಿಶ್ವಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಡಾಕ್ಟರ್ ಪೂನಂ ಕ್ಷೇತ್ರಪಾಲ್ ಸಿಂಗ್ ಹೇಳಿದ್ದಾರೆ. ಮಾಡೆರ್ನಾ ಕಂಪನಿಯ ಲಸಿಕೆಯನ್ನು ಭಾರತಕ್ಕೆ ಪೂರೈಸಲಾಗುತ್ತೆ ಎಂದು ಪೂನಂ ಕ್ಷೇತ್ರಪಾಲ್ ಸಿಂಗ್ ಹೇಳಿದ್ದಾರೆ. ಆದರೆ, ಯಾವಾಗ ಮಾಡೆರ್ನಾ ಲಸಿಕೆಯನ್ನು ಕೊವ್ಯಾಕ್ಸ್ ನಡಿ ಭಾರತಕ್ಕೆ ಪೂರೈಸಲಾಗುತ್ತೆ ಎಂಬುದು ಸ್ಪಷ್ಟವಾಗಿಲ್ಲ.

ಭಾರತವು ಮಾಡೆರ್ನಾ ಕಂಪನಿಯ ಲಸಿಕೆಗೆ ಸೈಡ್ ಎಫೆಕ್ಟ್ ವಿರುದ್ಧ ಕಾನೂನು ರಕ್ಷಣೆ ನೀಡಿದ ಬಳಿಕ ಭಾರತಕ್ಕೆ ಮಾಡೆರ್ನಾ ಲಸಿಕೆ ಭಾರತಕ್ಕೆ ಪೂರೈಕೆಯಾಗುವ ನಿರೀಕ್ಷೆ ಇದೆ. ಭಾರತ ಸರ್ಕಾರವು ಈಗಾಗಲೇ ಮಾಡೆರ್ನಾ ಕಂಪನಿಯ ಲಸಿಕೆಗೆ ಕಾನೂನು ರಕ್ಷಣೆ ನೀಡುವ ನಿಯಮ ರೂಪಿಸಿದೆ. ಈ ನಿಯಮಗಳ ವಿವರವನ್ನು ಮಾಡೆರ್ನಾ ಕಂಪನಿಗೆ ನೀಡಿದೆ. ಇದನ್ನು ಈಗ ಮಾಡೆರ್ನಾ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬೇಕು. ಭಾರತವು ನೀಡಿರುವ ನಿಯಮಗಳಿಗೆ ಮಾಡೆರ್ನಾ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್​ಗಳು ಒಪ್ಪಿದರೇ, ಭಾರತಕ್ಕೆ ಮಾಡೆರ್ನಾ ಕಂಪನಿಯ ಲಸಿಕೆ ಪೂರೈಕೆಯಾಗಲಿದೆ.

ಕೇಂದ್ರ ಸರ್ಕಾರವು ಆಗಸ್ಟ್ ತಿಂಗಳ ವೇಳೆಗೆ ಕೊವ್ಯಾಕ್ಸ್ ಮೂಲಕ ಭಾರತಕ್ಕೆ ಮಾಡೆರ್ನಾ ಕಂಪನಿಯ ಲಸಿಕೆ ಪೂರೈಕೆಯಾಗುವ ನಿರೀಕ್ಷೆಯಲ್ಲಿದೆ. ಕೊವ್ಯಾಕ್ಸ್ ಒಕ್ಕೂಟದ ಮೂಲಕ 75 ಲಕ್ಷ ಡೋಸ್ ಲಸಿಕೆಯು ಭಾರತಕ್ಕೆ ಪೂರೈಕೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಪೂನಂ ಕ್ಷೇತ್ರಪಾಲ್ ಸಿಂಗ್ ಹೇಳಿದ್ದಾರೆ.

ಮಾಡೆರ್ನಾ ಲಸಿಕೆಯ ಸೈಡ್ ಎಫೆಕ್ಟ್ ವಿರುದ್ಧ ಕಾನೂನು ರಕ್ಷಣೆ ನೀಡಿಕೆಯು ಜಾರಿಯಾದ ಬಳಿಕ ಆಮೆರಿಕಾ ದೇಶವು ಕೂಡ ಭಾರತಕ್ಕೆ ಕೊರೊನಾ ಲಸಿಕೆಯನ್ನು ದಾನವಾಗಿ ನೀಡಲಿದೆ. ಈಗಾಗಲೇ ಆಮೆರಿಕಾದ ಜೋ ಬೈಡೆನ್-ಕಮಲಾ ಹ್ಯಾರಿಸ್ ಸರ್ಕಾರವು ಭಾರತಕ್ಕೆ ಎರಡು ಕೋಟಾದಡಿ ಕೊರೊನಾ ಲಸಿಕೆ ದಾನವಾಗಿ ನೀಡಲು ನಿರ್ಧರಿಸಿದೆ. ಆದರೆ, ಮಾಡೆರ್ನಾ ಲಸಿಕೆಗೆ ಅಧಿಕೃತವಾಗಿ ಕೋರ್ಟ್​ಕೇಸ್​ನಿಂದ ಕಾನೂನು ರಕ್ಷಣೆ ನೀಡದೇ ಇರುವುದರಿಂದ ಆಮೆರಿಕಾದ ದಾನದ ರೂಪದ ಲಸಿಕೆ ಭಾರತಕ್ಕೆ ಬಂದಿಲ್ಲ. ಆದರೆ, ಭಾರತದ ನೆರೆಹೊರೆಯ ಬಾಂಗ್ಲಾದೇಶ, ಶ್ರೀಲಂಕಾ ದೇಶಗಳಿಗೆ ಆಮೆರಿಕಾ ದಾನದ ರೂಪದಲ್ಲಿ ಕೊರೊನಾ ಲಸಿಕೆ ನೀಡಿದೆ.

‘ಮಾಡೆರ್ನಾ ಕಂಪನಿಯು ಸದ್ಯ ನಮ್ಮ ನಿಯಮಗಳಿಗೆ ಪ್ರತಿಕ್ರಿಯಿಸಬೇಕು. ಆದಾದ ಬಳಿಕ ನಾವು ಲಸಿಕೆ ಒಪ್ಪಂದವನ್ನು ಮುಂದುವರಿಸುತ್ತೇವೆ. ಮಾಡೆರ್ನಾ ಕಂಪನಿಯ ಜೊತೆಗೆ ಮಾತುಕತೆ ಮುಂದುವರಿದಿದೆ. ಮಾತುಕತೆಗಳನ್ನು ಬೇಗ ಮುಗಿಸಲು ನಾವು ಶ್ರಮಪಡುತ್ತಿದ್ದೇವೆ’ ಎಂದು ಕೊರೊನಾ ಟಾಸ್ಕ್ ಪೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್ ಹೇಳಿದ್ದಾರೆ.

‘ಭಾರತಕ್ಕೆ ಆಮೆರಿಕಾದಿಂದ ಫೈಜರ್ ಕಂಪನಿಯ ಲಸಿಕೆಯು ಸಿಗಲಿದೆ. ಭಾರತಕ್ಕೆ ಕೊವ್ಯಾಕ್ಸ್ ಒಕ್ಕೂಟದ ಮೂಲಕ ಹಾಗೂ ಆಮೆರಿಕಾ ದಾನವಾಗಿ ನೀಡುವ ಲಸಿಕೆಗಳೆರೆಡೂ ಸಿಗಲಿವೆ’ ಎಂದು ಆಮೆರಿಕಾದಲ್ಲಿ ಭಾರತದ ರಾಯಭಾರಿ ತರಣ್ ಜಿತ್ ಸಿಂಗ್ ಸಂಧು ಇತ್ತೀಚೆಗೆ ಹೇಳಿದ್ದರು.

(India to get 75 lakh dose of vaccine from covax if govt agrees for immunity from court case)

ಇದನ್ನೂ ಓದಿ: ಭಾರತ್ ಬಯೋಟೆಕ್​ನಿಂದ 5.45 ಕೋಟಿ ಡೋಸ್ ಲಸಿಕೆ ಉತ್ಪಾದನೆ: ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ

ಇದನ್ನೂ ಓದಿ: Corona Vaccine: 40 ಕೋಟಿ ಡೋಸ್ ಸಮೀಪಿಸಿದ ಭಾರತದ ಕೊವಿಡ್19 ಲಸಿಕೆ ನೀಡಿಕೆ ಪ್ರಮಾಣ