ಕೋವಿಡ್-19 ಪಿಡುಗಿನಿಂದ ಭಾರತದಲ್ಲಿ ಅಧಿಕೃತ ಮಾಹಿತಿಗಿಂತ ಸುಮಾರು 49 ಲಕ್ಷ ಹೆಚ್ಚುವರಿ ಜನ ಮರಣಿಸಿದ್ದಾರೆ: ಅಧ್ಯಯನ

ಭಾರತದ ಅಧಿಕೃತ ಮಾಹಿತಿ ಪ್ರಕಾರ ಕೋವಿಡ್ 4,14,000 ಜನ ಸೋಂಕಿಗೆ ಬಲಿಯಾಗಿದ್ದು ಜಾಗತಿಕವಾಗಿ ಇದು ಮೂರನೇ ಅತಿದೊಡ್ಡ ಸಂಖ್ಯೆಯಾಗಿದೆ. ಆದರೆ ಈ ಮಾಹಿತಿ ಬಹಳ ಕಡಿಮೆ ಸಂಖ್ಯೆಯನ್ನು ಸೂಚಿಸುತ್ತದೆ ಎಂದು ಅಧ್ಯಯನ ಹೇಳುತ್ತದೆ. ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಯೊಂದು ಭಾರತದಲ್ಲಿ 6 ಲಕ್ಷಕ್ಕಿಂತ ಹೆಚ್ಚು ಜನ ಸೋಂಕಿಗೆ ಬಲಿಯಾಗಿದ್ದಾರೆಂದು ಹೇಳಿದೆ.

ಕೋವಿಡ್-19 ಪಿಡುಗಿನಿಂದ ಭಾರತದಲ್ಲಿ ಅಧಿಕೃತ ಮಾಹಿತಿಗಿಂತ ಸುಮಾರು 49 ಲಕ್ಷ ಹೆಚ್ಚುವರಿ ಜನ ಮರಣಿಸಿದ್ದಾರೆ: ಅಧ್ಯಯನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 20, 2021 | 9:43 PM

ನವದೆಹಲಿ: ಒಂದು ಹೊಸ ಅಧ್ಯಯನ ಪ್ರಕಾರ ಭಾರತದಲ್ಲಿ ಕೋರೊನಾವೈರಸ್​ನಿಂದ ಸತ್ತವರ ಸಂಖ್ಯೆ ವರದಿಯಾಗಿರುವುಕ್ಕಿಂತ ಸುಮಾರು 49 ಲಕ್ಷದಷ್ಟು ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ. ವಾಷಿಂಗ್ಟನ್ ನೆಲೆಯ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್​ಮೆಂಟ್​ ಸಂಸ್ಥೆಯು ಭಾರತದಲ್ಲಿ ಸೋಂಕು ಹಬ್ಬಲು ಶುರುವಾದಾಗಿನಿಂದ ಹಿಡಿದು ಜೂನ್ 2021ರ ವರಗೆ ಮೂರು ಭಿನ್ನ ಬಗೆಯ ದತ್ತಾಂಶ ಮೂಲಗಳನ್ನು ಬಳಸಿ ಈ ಅವಧಿಯಲ್ಲಿ ಹೆಚ್ಚುವರಿ ಸಾವು ಸಂಭವಿಸಿರುವ ಬಗ್ಗೆ ಹೇಳಿದೆ. ಆದರೆ, ಎಲ್ಲ ಸಾವುಗಳು ಕೋವಿಡ್​ ಸೋಂಕಿನಿಂದಲೇ ಜರುಗಿವೆ ಎನ್ನುವುದನ್ನು ಸಂಸ್ಥೆಯು ಖಚಿತವಾಗಿ ಹೇಳಿಲ್ಲ.

ಅಧ್ಯಯನದ ಮೊದಲ ಅಂದಾಜು; ಆಂಧ್ರ ಪ್ರದೇಶ, ಬಿಹಾರ, ಛತ್ತೀಸಗಢ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ತಮಿಳುನಾಡು ಮತ್ತು ಉತ್ತರ ಪ್ರದೇಶ ಮೊದಲಾದ 7 ರಾಜ್ಯಗಳಲ್ಲಿ ನಡೆದ ನಾಗರಿಕ ನೋಂದಣಿ ಆಧಾರದ ಮೇಲೆ ನಡೆದಿದೆ. ಈ ರಾಜ್ಯಗಳಲ್ಲಿ 34 ಲಕ್ಷ ಹೆಚ್ಚು ಸಾವುಗಳು ಸಂಭಸಿರಬಹದು ಅಂತ ಸಂಸ್ಥೆಯು ಅಂದಾಜು ಮಾಡಿದೆ. ಈ ರಾಜ್ಯಗಳ ಹೊರತಾಗಿ ಭಾರತದ ಇತರ ಭಾಗಗಳಲ್ಲಿ ವರದಿಯಾಗಿರುವ ಸಾವುಗಳು ಭಿನ್ನವಾಗಿವೆ ಎಂದು ಅಧ್ಯಯನ ಹೇಳಿದೆ.

ಸಂಸ್ಥೆ ಮಾಡಿರುವ ಎರಡನೇ ಅಂದಾಜು ಕೋವಿಡ್-19 ಸಿರೊಪ್ರೆವೆಲೆನ್ಸ್ ದತ್ತಾಂಶ ಮತ್ತು ವಯಸ್ಸು-ನಿರ್ದಿಷ್ಟ ಮರಣ ಪ್ರಮಾಣದ ಅಂತರರಾಷ್ಟ್ರೀಯ ಅಂದಾಜುಗಳನ್ನು ಸಂಯೋಜಿಸುವುದರ ಮೇಲೆ ಆಧಾರಗೊಂಡಿದೆ. ಎರಡು ಕೋವಿಡ್ ಅಲೆಗಳ ಅವಧಿಯಲ್ಲಿ ಹೆಚ್ಚುವರಿ ಸಾವಿನ ಸಂಖ್ಯೆ ಕ್ರಮವಾಗಿ 40 ಲಕ್ಷ- ಮೊದಲ ಅಲೆಯಲ್ಲಿ 15 ಲಕ್ಷ, ಮತ್ತು ಎರಡನೇ ಅಲೆಯಲ್ಲಿ 24 ಲಕ್ಷ ಎಂದು ಅಧ್ಯಯನ ಸೂಚಿಸುತ್ತದೆ.

ಎರಡನೇ ಅಲೆ ಸೋಂಕಿನ ಮಾಹಿತಿಯು ಕೇವಲ ಮೂರು ತಿಂಗಳುಗಳಿಗೆ ಸೀಮಿತವಾಗಿದ್ದರೂ ಮೊದಲನೆಯದರ 11 ತಿಂಗಳು ಅವಧಿಗೆ ಹೋಲಿಸಿದರೆ ಸೋಂಕಿನ ಪ್ರಮಾಣ ಎರಡನೇ ಅಲೆಯಲ್ಲಿ ಜಾಸ್ತಿ ಇದ್ದುದ್ದರಿಂದ ಸಾವಿನ ಪ್ರಮಾಣಗಳೂ ಗಮನಾರ್ಹವಾಗಿ ಹೆಚ್ಚಿವೆ ಎಂದು ಅಧ್ಯಯನದಲ್ಲಿ ಪಾಲ್ಗೊಂಡ ತಜ್ಞರು ಹೇಳಿದ್ದಾರೆ.

ಮೂರನೆಯ ದತ್ತಾಂಶ ಮೂಲವು 49 ಲಕ್ಷ ಹೆಚ್ಚುವರಿ ಸಾವುಗಳ ಅತಿಕೆಟ್ಟ ಪರಿಸ್ಥಿತಿಯನ್ನು ನಮ್ಮ ಮುಂದೆ ಇಡುತ್ತದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ನಡೆಸಿದ ಗ್ರಾಹಕ ಪಿರಮಿಡ್ಸ್ ಹೌಸ್ಹೋಲ್ಡ್ ಸರ್ವೆ (ಸಿಪಿಹೆಚ್ಎಸ್) ನ ಸಮೀಕ್ಷೆಯ ದತ್ತಾಂಶವನ್ನು ಆಧರಿಸಿ ಈ ಅಂದಾಜನ್ನು ಮಾಡಲಾಗಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಸುಮಾರು 1,77,000 ಮನೆಗಳನ್ನು ಸಂದರ್ಶಿಸಿ ಸಂಗ್ರಹಿಸಿದ ಮಾಹಿತಿಯನ್ನು ಸಮೀಕ್ಷೆಯು ಒಳಗೊಂಡಿದೆ. ಸಿಪಿಎಚ್‌ಎಸ್ 2014 ರಿಂದ ದತ್ತಾಂಶವನ್ನು ದಾಖಲಿಸುತ್ತಾ ಬಂದಿದೆ ಮತ್ತು ಅಧ್ಯಯನದ ಪ್ರಕಾರ, ಪಿಡುಗಿನ ಅವಧಿಯಲ್ಲಿ ಭಾರತದೆಲ್ಲೆಡೆಯಿಂದ ಸಾವಿನ ಮಾಹಿತಿಯನ್ನು ಸಂಗ್ರಹಿಸಿರುವ ಏಕೈಕ ದತ್ತಾಂಶ ಆಧಾರಿತ ಸಮೀಕ್ಷೆಯಾಗಿದೆ.

‘ಸೋಂಕಿಗೆ ಸಂಬಂಧಿಸಿದ ಸಾವುಗಳು ನೂರು ಅಥವಾ ಸಾವಿರಗಳ ಸಂಖ್ಯೆಯಲ್ಲಿಲ್ಲ, ಲಕ್ಷಗಳಲ್ಲಿದೆ. ಹಾಗಾಗಿ, ಮಾನವ ಕುಲದ ಸಾವುಗಳಿಗೆ ಸಂಬಂಧಿಸಿದಂತೆ ದೇಶದ ಇಬ್ಭಾಗ ಮತ್ತು ಸ್ಯಾತಂತ್ರ್ಯದ ನಂತರ ಇದು ಭಾರತದ ಅತಿದೊಡ್ಡ ಮಾನವ ದುರಂತವಾಗಿದೆ, ಎಂದು ವರದಿಯ ಸಹ ಲೇಖಕರಾಗಿರುವ ಭಾರತದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಹೇಳಿದ್ದ್ದಾರೆ.

ಭಾರತದ ಅಧಿಕೃತ ಮಾಹಿತಿ ಪ್ರಕಾರ ಕೋವಿಡ್ 4,14,000 ಜನ ಸೋಂಕಿಗೆ ಬಲಿಯಾಗಿದ್ದು ಜಾಗತಿಕವಾಗಿ ಇದು ಮೂರನೇ ಅತಿದೊಡ್ಡ ಸಂಖ್ಯೆಯಾಗಿದೆ. ಆದರೆ ಈ ಮಾಹಿತಿ ಬಹಳ ಕಡಿಮೆ ಸಂಖ್ಯೆಯನ್ನು ಸೂಚಿಸುತ್ತದೆ ಎಂದು ಅಧ್ಯಯನ ಹೇಳುತ್ತದೆ. ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಯೊಂದು ಭಾರತದಲ್ಲಿ 6 ಲಕ್ಷಕ್ಕಿಂತ ಹೆಚ್ಚು ಜನ ಸೋಂಕಿಗೆ ಬಲಿಯಾಗಿದ್ದಾರೆಂದು ಹೇಳಿದೆ. ಆದರೆ ಸರ್ಕಾರವು ಈ ವರದಿಗಳನ್ನು ತಳ್ಳಿಹಾಕಿದೆ.

‘ಪ್ರತಿಯೊಂದು ರಾಷ್ಟ್ರವು, ಸಾವುಗಳ ನೈಜ ಸಂಖ್ಯೆಯನ್ನು ಪ್ರಕಟಿಸಬೇಕು-ಹಾಗಾದಲ್ಲಿ ಮಾತ್ರ ಅದು ತನ್ನ ಆರೋಗ್ಯ ವ್ಯವಸ್ಥೆಯನ್ನು ಮುಂಬರುವ ಆಘಾತ ಮತ್ತು ಸಾವುಗಳನ್ನು ತಪ್ಪಿಸುವುದು ಸಾಧ್ಯವಾಗುತ್ತದೆ. ಅದಕ್ಕೆಂದೇ, ನಾವು ಒಂದು ಬಲವಾದ ನಾಗರಿಕ ನೋಂದಣಿ, ಪ್ರಮುಖವಾದ ಅಂಕಿ-ಅಂಶಗಳು ಹೊಂದಿದ್ದೇಯಾದಲ್ಲಿ ನಿಜವಾದ ದತ್ತಾಂಶದ ಮೇಲೆ ನೀತಿಗಳನ್ನು ರೂಪಿಸಲು ಸಾಧ್ಯವಾಗುತ್ತದೆ,’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್​ ಮೂರನೇ ಅಲೆ ಭಾರತವನ್ನು ಅಪ್ಪಳಿಸದಂತೆ ತಡೆಯುವ ಗುರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದಾರೆ: ಆರೋಗ್ಯ ಇಲಾಖೆ