ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣಕ್ಕೆ (Sidhu Moose Wala Murder Case) ಸಂಬಂಧಿಸಿದಂತೆ ಸಿಧು ನಿವಾಸಕ್ಕೆ ಪಂಜಾಬ್ ಸಿಎಂ ಭಗವಂತ್ ಮಾನ್ (Bhagwamn Mann) ಭೇಟಿ ನೀಡಿದ್ದಾರೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಸಿಧು ಹತ್ಯೆ ಪ್ರಕರಣದಲ್ಲಿ ಈವರೆಗೆ ಮೂವರು ಹಂತಕರನ್ನು ಬಂಧಿಸಲಾಗಿದೆ. ಇನ್ನೊಂದೆಡೆ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಶೂಟೌಟ್ ಪ್ರಕರಣದಲ್ಲಿ ಕೇಸ್ನಲ್ಲಿ ನನ್ನ ಪಾತ್ರವಿದೆ ಎಂದು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ತಪ್ಪೊಪ್ಪಿಕೊಂಡಿದ್ದಾರೆ.
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇ ಸಿಧುನನ್ನು ಕೊಂದಿದ್ದು ಎಂದಿರುವ ಸಚಿನ್ ಬಿಷ್ಣೋಯಿ ಲಾರೆನ್ಸ್ ಗ್ಯಾಂಗ್ಗೆ ಸೇರಿದವನಾಗಿದ್ದಾನೆ. ವಿಕ್ಕಿ ಮಿಧುಖಿರಾ ಹತ್ಯೆಗೆ ಪ್ರತೀಕಾರವಾಗಿ ಸಿಧು ಮೂಸೆವಾಲಾ ಕೊಲೆ ಮಾಡಿದ್ದಾಗಿ ಪಂಜಾಬ್ ಟಿವಿ ಚಾನೆಲ್ಗೆ ಫೋನ್ ಮಾಡಿ ಸಚಿನ್ ಬಿಷ್ಣೋಯಿ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆನಡಾ ಮೂಲದ ಗೋಲ್ಡಿ ಬ್ರಾರ್ ಅವರು ಸಿಧು ಮೂಸ್ ವಾಲಾ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಲಾರೆನ್ಸ್ ಬಿಷ್ಣೋಯ್ ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. 2021ರ ಆಗಸ್ಟ್ 7ರಂದು ವಿಕ್ರಮಜಿತ್ ಸಿಂಗ್ ಅಲಿಯಾಸ್ ವಿಕ್ಕಿ ಮಿದ್ದುಖೇರಾ ಅವರ ಹತ್ಯೆಯಲ್ಲಿ ಸಿಧು ಮೂಸೆವಾಲಾ ಭಾಗಿಯಾಗಿದ್ದರು. ಇದು ಅವರ ಮತ್ತು ಗಾಯಕನ ನಡುವೆ ಸ್ಪರ್ಧೆಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಸಿದು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿರುವ ದರೋಡೆಕೋರರ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ಪೊಲೀಸ್ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ. ಮೇ 29ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೂಸ್ ವಾಲಾನನ್ನು ಕೊಂದವರಲ್ಲಿ ಗೋಲ್ಡಿ ಬ್ರಾರ್ ಒಬ್ಬರು ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾರೆ.
ಮೂಸೆವಾಲಾ ಕುಟುಂಬಸ್ಥರಿಗೆ ಸಿಎಂ ಸಾಂತ್ವನ:
ಗುಂಡೇಟಿಗೆ ಬಲಿಯಾಗಿರುವ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಪೋಷಕರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ಭೇಟಿ ಮಾಡಿದ್ದಾರೆ. ಮಾರ್ಗಮಧ್ಯದಲ್ಲಿ ಮುಖ್ಯಮಂತ್ರಿಗಳು ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮಕ್ಕೆ ಪ್ರವೇಶಿಸದಂತೆ ಅನೇಕರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.
ಮೇ 29ರಂದು ಗಾಯಕ ಮೂಸೆವಾಲಾ ಅವರನ್ನು ಮಾನ್ಸಾದಲ್ಲಿ ಕೆಲವು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ರಾಜ್ಯ ಸರ್ಕಾರವು ಮೂಸೆವಾಲಾಗೆ ನೀಡಿದ್ದ ಭದ್ರತೆಯನ್ನು ಸಡಿಲಗೊಳಿಸಿದ ಒಂದು ದಿನದ ಬಳಿಕ ಈ ದಾಳಿ ನಡೆದಿತ್ತು. ಅವರೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಆತನ ಸೋದರ ಸಂಬಂಧಿ ಹಾಗೂ ಸ್ನೇಹಿತ ಕೂಡ ದಾಳಿಯಲ್ಲಿ ಗಾಯಗೊಂಡಿದ್ದರು.
ಇದನ್ನೂ ಓದಿ: ಸಿಧು ಮೂಸೆ ವಾಲಾ ಮೇಲೆ ದುಷ್ಕರ್ಮಿಗಳು 30 ಬಾರಿ ಗುಂಡು ಹಾರಿಸಿದ್ದರು; ಹತ್ಯೆಯ ಭೀಕರ ದೃಶ್ಯವನ್ನು ವಿವರಿಸಿದ ಸ್ನೇಹಿತ
ಪಂಜಾಬ್ ರಾಜ್ಯದ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಗಾಯಕನ ಭದ್ರತೆಯನ್ನು ಕಡಿತಗೊಳಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದೆ. ಜೊತೆಗೆ 400ಕ್ಕೂ ಹೆಚ್ಚು ವಿಐಪಿಗಳ ಭದ್ರತೆಯನ್ನು ಕಡಿತಗೊಳಿಸಲಾಗಿದೆ. ಮೂಸೆವಾಲಾ ಕುಟುಂಬವೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ತಾತ್ಕಾಲಿಕವಾಗಿ ಕಡಿತಗೊಳಿಸಲಾದ 424 ವಿಐಪಿಗಳ ಭದ್ರತೆಯನ್ನು ಜೂನ್ 7ರಿಂದ ಮರುಸ್ಥಾಪಿಸಲಾಗುವುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಗುರುವಾರ ತಿಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Fri, 3 June 22