ಸಿರಿಮಾನೋತ್ಸವ: ಕಾಲಿಗೆ ಮುಳ್ಳು ಚುಚ್ಚಿದರೆ ಅಮ್ಮಾ ಅಂತೀವಿ, ಆತಂಕ ಪಡ್ತೀವಿ, ಭಯ ಪಡ್ತೀವಿ .. ಅಂಥಾದ್ದರಲ್ಲಿ ಅಲ್ಲಿ ಆ ಜಾತ್ರೆಯಲ್ಲಿ ಪೂಜಾರಿಯೊಬ್ಬರು ರಾಶಿ ರಾಶಿ ಹಾಕಿರುವ ಮುಳ್ಳುಗಳ ಮೇಲೆ ಅರೆಬರೆ ಬಟ್ಟೆ ಧರಿಸಿ, ಬರಗಾಲಲ್ಲಿ ಏರಿ, ಮುಳ್ಳಿನ ಕಂಟಿಗಳನ್ನೇ ಸಿಂಹಾಸನವನ್ನಾಗಿಸಿಕೊಂಡು ಅದರ ಮೇಲೆ ಪವಡಿಸುವ ಆಚರಣೆಯೇ ಮಾರೆಮ್ಮನ ಜಾತ್ರೆ! ಅನಂತಪುರ ಜಿಲ್ಲೆಯ ಬೆಳಗುಪ್ಪ ಮಂಡಲದ ಬೆಳಗುಪ್ಪ ತಾಂಡಾದಲ್ಲಿ ಮಾರೆಮ್ಮ ಜಾತ್ರೆ ಹೀಗೆ ವಿನೂತನವಾಗಿ ನಡೆಯಿತು. ಇದನ್ನು ಸೀಮಾ ಸಿರಿಮಾನೋತ್ಸವ ಎನ್ನುತ್ತಾರೆ. ಕರ್ನಾಟಕದ ಗಡಿ ಭಾಗದ ಆದಿವಾಸಿಗಳು ಹಾಗೂ ಬೆಳಗುಪ್ಪ ಮಂಡಲದ ತಾಂಡಾ ನಿವಾಸಿಗಳು ಜಾತ್ರೆಗೆ ಆಗಮಿಸಿದ್ದರು. ಈ ವಿಶೇಷ ಜಾತ್ರೆಯಲ್ಲಿ ದೇವಿಯನ್ನು ನೋಡಲು ಭಕ್ತರ ದಂಡೇ ನೆರೆದಿತ್ತು ಅಲ್ಲಿ.
ಅವರನ್ನು ಭೇಟಿ ಮಾಡಿ ನಮನ ಸಲ್ಲಿಸಿದರು. ಪೂರ್ಣಕುಂಭ ಕಲಶಗಳೊಂದಿಗೆ ಮಹಿಳೆಯರಿಂದ ಬೆಳಗಿನ ಜಾವ ಮೆರವಣಿಗೆಯೊಂದಿಗೆ ಆರಂಭವಾಗಿ ಸಿರಿಮಾನೋತ್ಸವದವರೆಗೆ ಈ ಜಾತ್ರೆ ನಡೆಯಿತು. ಇದು ವೈವಿಧ್ಯಮಯ ವಿಧಾನಗಳು ಮತ್ತು ಆಚರಣೆಗಳೊಂದಿಗೆ ಕಣ್ಮನಕ್ಕೆ ಹಬ್ಬವಾಗಿದೆ. ಅದರಲ್ಲೂ ಈ ಬಾರಿಯ ಮಾರೆಮ್ಮನ ಜಾತ್ರೆಯಲ್ಲಿ ದೇವಸ್ಥಾನದ ಪೂಜಾರಿ ಮುಳ್ಳುತಂತಿಯ ಮೇಲೆ ಹತ್ತುತ್ತಿದ್ದುದ್ದು ವಿಶೇಷವಾಗಿ ಗಮನ ಸೆಳೆಯಿತು. ಹಾಗೆ ಸಾಗಿದ ಪೂಜಾರಿಯು ಇನ್ನೊಂದು ಬದಿಯಲ್ಲಿರುವ ದೇವಿಯ ದರ್ಶನ ಪಡೆಯುತ್ತಾರೆ. ಈ ಮಧ್ಯೆ ಚೂಪಾದ ಆ ಮುಳ್ಳುಗಳ ಮೇಲೆಯೇ ಮಲಗುತ್ತಾರೆ.
ಭಕ್ತರ ಕಿರುಚಾಟದ ನಡುವೆ ಡೊಳ್ಳು ಬಾರಿಸುವ, ಮೈನಡುಕ ತರಿಸುವ ಈ ಕರುಣಾಜನಕ ದೃಶ್ಯ ಭಕ್ತಿ ಪ್ರಧಾನವಾಗಿ ನೆರವೇರುತ್ತದೆ. ಅಲ್ಲದೆ ಉದ್ದನೆಯ ಕೋಲಿನ ಮುಂದೆ ಪುಟ್ಟ ಪಲ್ಲಕ್ಕಿಯನ್ನು ಇಟ್ಟು ಅದರಲ್ಲಿ ಪೂಜಾರಿಯನ್ನು ಕಟ್ಟಿ ಆಕಾಶದಲ್ಲಿ ವೃತ್ತಾಕಾರವಾಗಿ ಗಾಳಿಯಲ್ಲಿ ತಿರುಗುವಂತೆ ಮಾಡುತ್ತಾರೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ವಿಚಿತ್ರ ಆಚರಣೆಯನ್ನು ವೀಕ್ಷಿಸಲು ನಾನಾ ಕಡೆಗಳಿಂದ ಭಕ್ತರ ದಂಡು ಹರಿದು ಬರುತ್ತಿದ್ದು, ಗಾಳಿಯಲ್ಲಿ ತೂಗಾಡುವ, ಕೈಯಲ್ಲಿ ಕತ್ತಿ ಹಿಡಿದು ಝಳಪಿಸುವ ಕುತೂಹಲಕಾರಿ ಕ್ಷಣಗಳು ಕಣ್ಣಿಗೆ ಕಟ್ಟಿದಂತಿದ್ದವು.