ಈಗಿನ ಹೊಸ ಪೀಳಿಗೆಯ ಯುವಜನರ ಕೌಶಲಾಭಿವೃದ್ಧಿ ಮಾಡುವುದು ರಾಷ್ಟ್ರೀಯ ಅಗತ್ಯಗಳಲ್ಲಿ ಒಂದು. ನಮ್ಮ ನೂತನ ಯೋಜನೆ ಆತ್ಮನಿರ್ಭರ ಭಾರತಕ್ಕೆ ಬಹುದೊಡ್ಡ ಅಡಿಪಾಯವೂ ಹೌದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಹೇಳಿದರು. ಇಂದು ವಿಶ್ವ ಯುವ ಕೌಶಲಾಭಿವೃದ್ಧಿ ದಿನದ ನಿಮಿತ್ತ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಕೊರೊನಾ ಸಾಂಕ್ರಾಮಿಕ ಕಾರಣದ ಮಧ್ಯೆ ಇಂದು ಎರಡನೇ ಬಾರಿಗೆ ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸುತ್ತಿದ್ದೇವೆ. ಈ ಜಾಗತಿಕ ಸಾಂಕ್ರಾಮಿಕ ರೋಗ ವಿಶ್ವ ಯುವ ಕೌಶಲ್ಯ ದಿನದ ಮಹತ್ವವನ್ನು ಹೆಚ್ಚಿಸಿದೆ ಎಂದರು.
ನಮ್ಮ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಸುಮಾರು 1.25 ಕೋಟಿ ಯುವಕರು ತರಬೇತಿ ಪಡೆಯುತ್ತಿದ್ದಾರೆ. ಇದು ತುಂಬ ಸಂತೋಷದ ವಿಷಯ ಎಂದು ಹೇಳಿದ ಪ್ರಧಾನಿ ಮೋದಿ, ಕೌಶಲ, ಮರು ಕೌಶಲ ಮತ್ತು ಕೌಶಲ ವೃದ್ಧಿಯ ಬಗ್ಗೆ ಮರು ಉಚ್ಚರಿಸಿದರು. ಈ ದೇಶದ ಯುವಕರಲ್ಲಿ ಕೌಶಲಾಭಿವೃದ್ಧಿ ಮಾಡುವ ಅಗತ್ಯತೆ ಎಷ್ಟಿದೆ ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಯುವಜನರನ್ನು ಕೌಶಲ, ಮರುಕೌಶಲ, ಕೌಶಲ ವೃದ್ಧಿಗೆ ತೆರೆದುಕೊಳ್ಳುವಂತೆ ಮಾಡುವ ಯೋಜನೆ ಅವಿರತವಾಗಿ ಸಾಗಬೇಕು. ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವುದರಿಂದ ಕೌಶಲಾಭಿವೃದ್ಧಿ ಕಾರ್ಯ ತ್ವರಿತವಾಗಿ, ಆದ್ಯತೆ ಮೇರೆಗೆ ನಡೆಯಬೇಕು ಎಂದೂ ತಿಳಿಸಿದರು.
ದೈನಂದಿನ ಅಗತ್ಯಗಳಿಗೆ ಕೌಶಲ ಅದೆಷ್ಟು ಮುಖ್ಯ ಎಂಬುದನ್ನು ವಿವರಿಸಿದ ಪ್ರಧಾನಿ ಮೋದಿ, ಗಳಿಕೆಯೊಂದಿಗೆ ಕಲಿಕೆ ನಿಲ್ಲಬಾರದು. ಕೌಶಲಗಳನ್ನು ರೂಢಿಸಿಕೊಂಡು, ನುರಿತಿರುವ ವ್ಯಕ್ತಿ ಅದ್ಭುತವಾಗಿ ಬೆಳೆಯುತ್ತಾನೆ. ಕೌಶಲಯುತ ಮತ್ತು ಸ್ಮಾರ್ಟ್ ಆಗಿರುವ ಮಾನವ ಶಕ್ತಿಯನ್ನು ಜಗತ್ತಿಗೆ ನೀಡುವ ಭಾರತದ ಪರಿಕಲ್ಪನೆ ಸಾಕಾರವಾಗಲು ಯುವಜನರಲ್ಲಿ ಸ್ಕಿಲ್ ಡೆವಲಪ್ಮೆಂಟ್ ತುಂಬ ಮುಖ್ಯ ಎಂದು ನರೇಂದ್ರ ಮೋದಿ ಹೇಳಿದರು. ಹಾಗೇ, ದುರ್ಬಲ ವರ್ಗದವರಲ್ಲಿ ಕೌಶಲ ಬೆಳೆಸಲು ಒತ್ತುಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೂ ಉಲ್ಲೇಖಿಸಿದರು.
ಇದನ್ನೂ ಓದಿ: Jair Bolsonaro: 10 ದಿನಗಳಿಂದಲೂ ನಿಲ್ಲದ ಬಿಕ್ಕಳಿಕೆ; ಆಸ್ಪತ್ರೆಗೆ ದಾಖಲಾದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೋ