ಬಂಗಾಳಕೊಲ್ಲಿಯಲ್ಲಿ ಬೋಟ್ ಮುಳುಗಿ 9 ಮೀನುಗಾರರ ಸಾವು; ಇನ್ನೊಬ್ಬರು ನಾಪತ್ತೆ
ಬೋಟ್ ಮುಳುಗುತ್ತಿದ್ದಂತೆ ಇಬ್ಬರು ಮೀನುಗಾರರು ಸಮುದ್ರಕ್ಕೆ ಹಾರಿದ್ದಾರೆ. ಉಳಿದ 10 ಮಂದಿ ಮೀನುಗಾರರು ಆ ವೇಳೆ ನಿದ್ರೆ ಮಾಡುತ್ತಿದ್ದರು ಎನ್ನಲಾಗಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬೋಟ್ ಮುಳುಗಿ 9 ಮೀನುಗಾರರು ಸಾವನ್ನಪ್ಪಿದ್ದಾರೆ. ಬೋಟ್ನಲ್ಲಿದ್ದ ಇನ್ನೊಬ್ಬರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಬಂಗಾಳಕೊಲ್ಲಿ (Bay of Bengal) ಸಮುದ್ರದಲ್ಲಿ ಬುಧವಾರ ಮುಂಜಾನೆ ಈ ದುರಂತ ಸಂಭವಿಸಿದೆ. ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿದ್ದ ಬೋಟ್ ಇದ್ದಕ್ಕಿದ್ದಂತೆ ಮುಳುಗಿದೆ.
ಈಗಾಗಲೇ 9 ಮೀನುಗಾರರ ಶವಗಳನ್ನು ದಡಕ್ಕೆ ತರಲಾಗಿದೆ. ಇನ್ನೊಬ್ಬರು ನಾಪತ್ತೆಯಾಗಿದ್ದು, ಅವರಿಗಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಕೋಸ್ಟಲ್ ಗಾರ್ಡ್ಗಳ ಸಹಾಯದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಕಾಕ್ದ್ವೀಪ್ ಎಸ್ಡಿಪಿಓ ಅನಿಲ್ ಕುಮಾರ್ ರಾಯ್ ಮಾಹಿತಿ ನೀಡಿದ್ದಾರೆ.
ನಿನ್ನೆ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ 12 ಜನರು ಬಕ್ಕಾಲಿ-ಫ್ರಾಜರ್ಗಂಜ್ ಕರಾವಳಿ ಪ್ರದೇಶದಿಂದ 25ರಿಂದ 30 ಕಿ.ಮೀ ದೂರ ಚಲಿಸುತ್ತಿದ್ದಂತೆ ಬೋಟ್ ಮುಳುಗಿತ್ತು. ಬೋಟ್ ಮುಳುಗಲು ಕಾರಣವೇನೆಂದು ಇನ್ನೂ ಗೊತ್ತಾಗಿಲ್ಲ. ನಾಪತ್ತೆಯಾಗಿರುವ ಇನ್ನೋರ್ವ ಕೂಡ ಬದುಕಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಹೈಮಾಬತಿ ಎಂಬ ಹಡಗು ಮುಳುಗುತ್ತಿದ್ದಂತೆ ಇಬ್ಬರು ಮೀನುಗಾರರು ಸಮುದ್ರಕ್ಕೆ ಹಾರಿದ್ದಾರೆ. ಹಿಂದೆ ಬರುತ್ತಿದ್ದ ಇನ್ನೊಂದು ಬೋಟ್ನವರು ಆ ಇಬ್ಬರನ್ನು ಎಳೆದುಕೊಂಡು ರಕ್ಷಿಸಿದ್ದಾರೆ. ಉಳಿದ 10 ಮಂದಿ ಮೀನುಗಾರರು ಆ ವೇಳೆ ನಿದ್ರೆ ಮಾಡುತ್ತಿದ್ದರು ಎನ್ನಲಾಗಿದೆ. ಅವರಲ್ಲಿ 9 ಜನರು ಮೃತದೇಹಗಳು ಪತ್ತೆಯಾಗಿದ್ದು, ಇನ್ನೊಬ್ಬರ ಶವ ಇನ್ನೂ ಸಿಕ್ಕಿಲ್ಲ.
ಇದನ್ನೂ ಓದಿ: ಉಡುಪಿಯಲ್ಲಿ ಐದು ದಿನ ಆರೆಂಜ್ ಅಲರ್ಟ್; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಧಿಕಾರಿ ಸೂಚನೆ
Published On - 6:17 pm, Thu, 15 July 21