ಪಶ್ಚಿಮ ಬಂಗಾಳದಲ್ಲಿ ಘೋಷಣೆಗಳ ಪ್ರವಾಹ: ಬಿಜೆಪಿಗೆ ಬೇಕಾಯ್ತು ಇಟಲಿ ಮೂಲದ ಹಾಡಿನ ಸಹಾಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 23, 2021 | 4:29 PM

Bella Ciao: ಪದೇಪದೆ ಇಟಲಿ ಮೂಲವನ್ನು ದೂರುವ ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ಹಣಿಯಲು ಇಟಲಿ ಮೂಲದ ಹಾಡೇ ಬೇಕಾಗಿದೆ. ‘ಪ್ರತಿಭಟನೆಯ ಭಾಷೆ ಸತ್ಯವನ್ನೇ ಹೇಳುತ್ತದೆ’ ಎಂದು ಬೆಲ್ಲಾ ಸಿಯೋ ಬಳಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಘೋಷಣೆಗಳ ಪ್ರವಾಹ: ಬಿಜೆಪಿಗೆ ಬೇಕಾಯ್ತು ಇಟಲಿ ಮೂಲದ ಹಾಡಿನ ಸಹಾಯ
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಘೋಷಣೆಗಳ ಕದನ ಜೋರಾಗಿ ನಡೆಯುತ್ತಿದೆ.
Follow us on

ಇಡೀ ದೇಶ ರಾಜಕೀಯವಾಗಿ ಎಲ್ಲಿ ಕಣ್ಣು ನೆಟ್ಟಿದೆ ಎಂದು ಯಾರಾದರೂ ಕೇಳಿದರೆ ಥಟ್ಟನೆ ಹೇಳಬಹುದಾದ ಉತ್ತರ ‘ಪಶ್ಚಿಮ ಬಂಗಾಳ’. ಎಡರಂಗ, ತೃಣಮೂಲ ಕಾಂಗ್ರೆಸ್ ಪಕ್ಷಗಳ ಸುದೀರ್ಘಾವಧಿಯ ಆಡಳಿತಗಳ ನಂತರ ಮತ್ತೊಮ್ಮೆ ಚುನಾವಣೆಗೆ ಸಜ್ಜಾಗುತ್ತಿರುವ ಈಶಾನ್ಯ ಭಾರತದ ಪ್ರಮುಖಾತಿ ಪ್ರಮುಖ ರಾಜ್ಯದಲ್ಲಿ ಈಗ ಕೇಳುವುದೆಲ್ಲ ಚುನಾವಣಾ ಘೋಷಣೆಗಳು. ತಮ್ಮ ರಾಜ್ಯವನ್ನು ಹೊರಗಿನವರಿಗೆ ಬಿಟ್ಟುಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಟ್ಟುಬಿಡದೆ ಉಚ್ಛರಿಸುತ್ತಿದ್ದಾರೆ. ಅವರ ಈ ಎಡಬಿಡದ ಘೋಷಣೆಗಳ ಪೂರ್ಣ ಕಾರಣ ಆಕ್ರಮಣಶೀಲ ಮನಸ್ಥಿತಿಯ ಬಿಜೆಪಿಯ ಘೋಷಣೆಗಳ ಮಹಾಪ್ರವಾಹ. ಬಂಗಾಳದ ಬೀದಿಬೀದಿಗಳಲ್ಲಿ ಕಿವಿಗಪ್ಪಳಿಸುವ ಟಿಎಂಸಿ, ಬಿಜೆಪಿ ಘೋಷಣೆಗಳಲ್ಲಿ ಸ್ವಲ್ಪ ತೆಪ್ಪಗಿರುವುದು ಎಡಪಕ್ಷಗಳೇ. ವಿಚಿತ್ರವೆಂದರೆ ಪದೇ ಪದೇ ಇಟಲಿ ಮೂಲ, ಕಮ್ಯುನಿಸಮ್​ ಅನ್ನು ದೂರುವ, ಮತ ಗಳಿಕೆಗೆ ಬಳಸಿಕೊಳ್ಳುವ ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಗೆಲ್ಲಲು ಇಟಲಿ ಮೂಲವನ್ನೇ ಬಳಸಿಕೊಳ್ಳುತ್ತಿದೆ!

ಈ ಬಾರಿ ಗೆಲ್ಲಲೇಬೇಕೆಂದು ಪಣತೊಟ್ಟಂತೆ, ಪಕ್ಷಕ್ಕೆ ಮಾತುಕೊಟ್ಟವರಂತೆ ಪ್ರಚಾರದಲ್ಲಿ ಹಲವು ತಿಂಗಳ ಹಿಂದಿನಿಂದಲೂ ಬಂಗಾಳದ ಬೀದಿಬೀದಿಗಳನ್ನು ಪರಿಚಯಿಸಿಕೊಳ್ಳುತ್ತ ಪಕ್ಷದ ಬಲವರ್ಧನೆಯಲ್ಲಿ ನಿರತರಾಗಿದ್ದಾರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ. ತಿಂಗಳು ತಿಂಗಳೂ ಬಂಗಾಳ ಪ್ರವಾಸ, ವಸತಿ, ಕಾರ್ಯಕರ್ತರ ಭೇಟಿ ಇವೆಲ್ಲದರ ಹಿಂದೆ ಟಿಎಂಸಿಯನ್ನು ಹಣಿಯಲು ಮಾಡಿಡುವ ನೇರ ಉಪಾಯಗಳೇ ಆಗಿವೆ.

ಇದರ ಜೊತೆಗೆ ಬಿಜೆಪಿ ಹೂಡಿದ ಇನ್ನೊಂದು ಉಪಾಯವೇ, ದೀದಿ ವಿರುದ್ಧದ ಘೋಷಣೆಗಳ ಪ್ರವಾಹ. ‘ಪೀಶಿ ಜಾವೋ’ (ಆಂಟಿ ಹೋಗು) ಎಂದು ಬಹು ಜೋರಾಗಿಯೇ ಕೂಗಿದೆ ಭಾಜಪ. ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದ ಅತಿ ಪ್ರಸಿದ್ಧ ‘ಮನಿ ಹೇಸ್ಟ್’ ವೆಬ್ ಸರಣಿಯ ಹಾಡು ‘ಬೆಲ್ಲಾ ಸಿಯೋ’ವನ್ನು ಮರು ಸೃಷ್ಟಿಸಿ ಈ ಘೋಷಣೆಯನ್ನು ಅಳವಡಿಸಿಕೊಂಡಿತು. ಬಿಜೆಪಿಯ ಈ ಉಪಾಯಕ್ಕೆ ಅಂದಾಜಿಗೂ ಮೀರಿ ಪ್ರತಿಫಲ ಸಿಗುತ್ತಿದೆ. ಆದರೆ ಬೆಲ್ಲಾ ಸಿಯೋದ ನೈಜ ಮೂಲ ಇಟಲಿಯಲ್ಲಿದೆ.

ಯಾವುದಿದು ಬೆಲ್ಲಾ ಸಿಯೋ?
19ನೇ ಶತಮಾನದ ಉತ್ತರಾರ್ಧವದು. ಉತ್ತರ ಇಟಲಿಯ ಭತ್ತದ ಗದ್ದೆಗಳಲ್ಲಿ ಕೆಳವರ್ಗದ ಮಹಿಳೆಯರು ಅತ್ಯಂತ ಕಠಿಣವಾಗಿ ಕೆಲಸ ನಿರ್ವಹಿಸುತ್ತಿದ್ದರು. ಮಳೆಗಾಲದಲ್ಲಿ ಗದ್ದೆಗಳಲ್ಲಿ ನೀರು ತುಂಬುತ್ತಿತ್ತು. ನೀರಲ್ಲೇ ನಿಂತು ಕಳೆ ತೆಗೆಯಬೇಕಿತ್ತು. ಇದರ ವಿರುದ್ಧ ಬಂಡೆದ್ದ ಮಹಿಳೆಯರು ರಚಿಸಿದ ಗೀತೆಯೇ ಬೆಲ್ಲಾ ಸಿಯೋ (Bella Ciao). ಫ್ಯಾಸಿಸ್ಟ್ ಆಡಳಿತ ವಿರೋಧ ಚಳುವಳಿಗಳಲ್ಲೂ ರೈತ ಮಹಿಳೆಯರ ಈ ಗೀತೆ ಬಳಕೆಯಾಯಿತು. ತಮ್ಮ ಸಮಸ್ಯೆ, ಬೇಡಿಕೆಗಳನ್ನೇ ಸಾಹಿತ್ಯವಾಗಿಸಿಕೊಂಡು ವಿಶ್ವದಾದ್ಯಂತ ಹಲವು ಚಳವಳಿಗಳು ಬೆಲ್ಲಾ ಸಿಯೋ ಧಾಟಿಯ ಗೀತೆಗಳನ್ನು ರಚಿಸಿಕೊಂಡವು. ಅಂದಹಾಗೆ ಬೆಲ್ಲಾ ಸಿಯೋ ಅಂದರೆ ‘ಸೌಂದರ್ಯಕ್ಕೆ ವಿದಾಯ’ (Goodbye Beautifull) ಎಂದರ್ಥ.

ನಮ್ಮ ಸಿದ್ಧಾಂತ, ಮನೋಭಾವಗಳು ಭಿನ್ನವಾಗಿರಬಹುದು, ಆದರೆ ಪ್ರತಿಭಟನೆಯ ಭಾಷೆ ಸತ್ಯವನ್ನೇ ಹೇಳುತ್ತದೆ ಎಂಬರ್ಥದಲ್ಲಿ ಬಂಗಾಳ ಮೂಲದ ಬಿಜೆಪಿ ಟ್ವಿಟರ್ ಖಾತೆಯೊಂದು ಟ್ವಿಟ್ ಮಾಡಿದೆ.

ಬೆಂಗಾಳದ ಮಗಳೇ ಬೆಂಗಾಳಕ್ಕಿರಲಿ
ಮಮತಾ ಬ್ಯಾನರ್ಜಿ ಅವರೇನು ಸಾಮಾನ್ಯದವರಲ್ಲ; ದೇಶವ್ಯಾಪಿ ತನ್ನ ಕೊಂಬೆಗಳನ್ನು ಚಾಚಿದ್ದಲ್ಲದೇ, ಅಸ್ತಿತ್ವವೇ ಇಲ್ಲದ ರಾಜ್ಯಗಳಲ್ಲೂ ಬೇರುಗಳನ್ನು ನುಗ್ಗಿಸುತ್ತಿದೆ ಅವರ ಟಿಎಂಸಿ. ಅಂತಹ ಬಿಜೆಪಿಯಂತಹ ಬಿಜೆಪಿಯ ತಲೆ ಮೇಲೆ ಹೊಡೆಯದಿದ್ದರೆ ಈ ಬಾರಿ ಉಳಿಗಾಲವಿಲ್ಲ ಎಂದು ಅವರು ಮೊದಲೇ ಮನಗಂಡಿದ್ದರು. ಹೀಗಾಗಿಯೇ ಅವರು ‘ಬಂಗಾಲದ ಮಗಳನ್ನೇ ಬಂಗಾಳ ಬಯಸುತ್ತದೆ‘ ಎಂಬ ಘೋಷಣೆಯ ಅಲೆ ಎಬ್ಬಿಸಿದರು. ಮಗಳನ್ನು ಮನೆಯಿಂದ ಹೊರದೂಡುವ ಕ್ರೌರ್ಯ ಯಾರಲ್ಲಿದೆ? ಏಕೆ ಇರಬೇಕು? ಅದರ ಅಗತ್ಯವಾದರೂ ಏನು?

ಬಂಗಾಳಿಗರ ಮನದಲ್ಲಿ ಈ ಪ್ರಶ್ನೆಗಳನ್ನು ಸೃಷ್ಟಿಸುವ ಮಮತಾಬ್ಯಾನರ್ಜಿ ಅವರ ಉದ್ದೇಶ ತಕ್ಕಮಟ್ಟಿಗೆ ನೆರವೇರಿತು. ಒಂದುವೇಳೆ ಅವರ ಘೋಷಣೆಯನ್ನು ನೆಚ್ಚಿಕೊಂಡರೆ ತಮ್ಮ ಕಸರತ್ತುಗಳು ನೀರಲ್ಲಿ ಹೋಮ ಮಾಡಿದಂತಾಗಲಿದೆ ಎಂದು ಅರಿತ ಬಿಜೆಪಿ ಜನಪ್ರಿಯ ಬೆಲ್ಲಾ ಸಿಯೋ ಗೀತೆಯನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿತು. 1.49 ನಿಮಿಷದ ಈ ‘ಬಿಜೆಪಿ ಬೆಲ್ಲಾ ಸಿಯೋ’ದಲ್ಲಿ ಪಶ್ಚಿಮ ಬಂಗಾಳದ ಎಲ್ಲಾ ಸಮಸ್ಯೆಗಳಿಗೂ ಮಮತಾ ಬ್ಯಾನರ್ಜಿ ಸರ್ಕಾರವೇ ಕಾರಣವೆಂದು ದೂರುತ್ತದೆ.

ದೆಹಲಿ ಚಲೋದಲ್ಲೂ ಬಳಕೆಯಾಗಿತ್ತು
27 ವರ್ಷದ ಗಣಿತ ಶಿಕ್ಷಕ ಪೂಜನ್ ಸಾಹಿಲ್ ರಚಿಸಿರುವ ಬೆಲ್ಲಾ ಸಿಯೋ ಗೀತೆಯ ಪಂಜಾಬಿ ಆವೃತ್ತಿ ‘Karwaan-e-Mohabbat’ ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿತ್ತು. ಬಿಡುಗಡೆಯಾದ ಒಂದೇ ವಾರಕ್ಕೆ 2.7 ಲಕ್ಷ ವೀಕ್ಷಣೆಗಳೊಂದಿಗೆ ಜಗತ್ತಿನಾದ್ಯಂತ ಶೇರ್ ಆಗಿತ್ತು. ಚಳುವಳಿ ನಿರತ ಪಂಜಾಬಿ ರೈತರಿಗೆ ಬೆಂಬಲವಾಗಿ ಈ ಆವೃತ್ತಿಯನ್ನು ಹೊರತಂದಿರುವುದಾಗಿ ಅವರು ಹೇಳಿಕೊಂಡಿದ್ದರು. ತಮ್ಮ ಊರು ಕೇರಿಗಳನ್ನು ತೊರೆದು ನೂತನ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಲು ಆಗಮಿಸಿರುವ ರೈತರ ಕುರಿತು ಸಾಹಿತ್ಯ ರಚಿಸಿದ್ದರು ಪೂಜನ್ ಸಾಹಿಲ್.

ಕಳೆದ ವರ್ಷ ಸಿಎಎ ಪ್ರತಿಭಟನೆಯ ವೇಳೆಯೂ ಅವರು ಬೆಲ್ಲಾ ಸಿಯೋ ಗೀತೆಯ ಹಿಂದಿ ಆವೃತ್ತಿ ರಚಿಸಿದ್ದರು. ಈ ಗೀತೆಯ ಹಿಂದಿ ಆವೃತ್ತಿಯಾದ ‘ವಾಪಸ್ ಜಾವೋ’ವನ್ನು ದೇಶದ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಳಲ್ಲಿ ಬಳಸಿಕೊಂಡಿದ್ದವು. ಪಂಜಾಬ್ ರೈತರ ಚಳುವಳಿಗೂ ಸ್ಪೂರ್ತಿದಾಯಕವಾಗಬಹುದು ಎಂದು ಪಂಜಾಬಿ ಆವೃತ್ತಿ ರಚಿಸಿದೆ ಎಂದು ಪೂಜನ್ ಸಾಹಿಲ್ ತಿಳಿಸಿದ್ದರು. ‘ಚಳುವಳಿಯ ಕಾವನ್ನು ನಿರಂತರವಾಗಿ ಜೀವಂತವಿರಿಸಲು ಬೆಲ್ಲಾ ಸಿಯೋದ ಪಂಜಾಬಿ ಆವೃತ್ತಿ ಸಹಕಾರಿಯಾಗಿದೆ. ನಾನು ರಚಿಸಿದ ಸಾಹಿತ್ಯ, ಗೀತೆ ರೈತ ಹೋರಾಟಗಾರರಿಗೆ ಸ್ಪೂರ್ತಿಯಾದರೆ ನನ್ನ ಶ್ರಮ ಸಾರ್ಥಕ’ಎಂದು ಅಭಿಪ್ರಾಯಪಟ್ಟಿದ್ದರು ಸಾಹಿಲ್.

ಇಂದು ನಾವು ಹೂಡಿದ ಬಾಣ ಇನ್ನೊಂದು ದಿನ ನಮ್ಮ ಎದೆಗೇ ನಾಟಬಹುದು ಬಹುದು ಎನ್ನುತ್ತಾರೆ ಹಿರಿಯರು. ಇದೀಗ ಬಿಜೆಪಿಗೆ ಈ ಮಾತನ್ನು ಅಕ್ಷರಶಃ ಅನ್ವಯಿಸಬಹುದು. ಪದೇಪದೇ ಇಟಲಿ ಮೂಲವನ್ನು ದೂರುವ, ಮತ ಗಳಿಕೆಗೆ ಬಳಸಿಕೊಳ್ಳುವ ಬಿಜೆಪಿಗೆ ಇಟಲಿ ಮೂಲದ ಹಾಡು ಬಳಸಿಕೊಂಡಿದೆ, ಇದನ್ನು ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ನಾಯಕರು ಪ್ರತ್ಯಸ್ತ್ರವಾಗಿ ಬಳಸಿಕೊಳ್ಳುವರೇ?

ಕಾದು ನೋಡೋಣ, ಚುನಾವಣೆಗೆ ಇನ್ನೂ ತುಸು ಸಮಯವಿದೆ.

ಇದನ್ನೂ ಓದಿ: West Bengal Election 2021: ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ಐದು ರೂಪಾಯಿ ಊಟ, ‘ಮಾ’ ಯೋಜನೆ ಜಾರಿಗೆ ತಂದ ಮಮತಾ

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಚಿವ ಜಕೀರ್ ಹುಸೇನ್ ಮೇಲೆ ಕಚ್ಚಾ ಬಾಂಬ್ ದಾಳಿಗೆ ರಾಜಕೀಯ ವೈಷಮ್ಯವೇ ಕಾರಣ: ರೈಲ್ವೆ ಅಧಿಕಾರಿ

 

Published On - 4:28 pm, Tue, 23 February 21