ನವದೆಹಲಿ: ವಿಧಾನಸಭೆಯಲ್ಲಿ ನಿನ್ನೆ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರ ರೇಪ್ ಕುರಿತಾದ ಹೇಳಿಕೆ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿದೆ. ಇಂದು ಲೋಕಸಭೆಯಲ್ಲೂ ರಮೇಶ್ ಕುಮಾರ್ ಹೇಳಿಕೆಯ ವಿಚಾರ ಪ್ರಸ್ತಾಪವಾಗಿದ್ದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಕೂಡಲೇ ಅವರನ್ನು ವಜಾ ಮಾಡಬೇಕು ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಶಾಸಕರ ಈ ರೀತಿಯ ಹೇಳಿಕೆ ಹೆಣ್ಣಿಗೆ ಅವಮಾನ ಮಾಡಿದಂತೆ ನಾನೂ ಹೆಣ್ಣು, ನಾನೂ ಹೋರಾಡಬಲ್ಲೆ ಎಂದು ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಸದನದಲ್ಲಿ ರೇಪ್ ಅಗುವುದನ್ನು ತಡೆಯಲು ಆಗದಿದ್ದರೆ ಅದನ್ನು ಎಂಜಾಯ್ ಮಾಡಿ ಎಂದು ಹೆಣ್ಣು ಮಕ್ಕಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ರಾಜ್ಯದಲ್ಲಿ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ರಮೇಶ್ ಕುಮಾರ್ ಬೆಳಗ್ಗೆ ಟ್ವೀಟ್ ಮೂಲಕ ಕ್ಷಮೆಯಾಚಿಸಿದ್ದರು.
ಸದನದಲ್ಲಿ ನಾನು ನೀಡಿದ ಅಸಡ್ಡೆ ಹಾಗೂ ನಿರ್ಲಕ್ಷ್ಯದ ಕಾಮೆಂಟ್ ಬಗ್ಗೆ ಪ್ರಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಈ ನೀಚ ಕೃತ್ಯವನ್ನು ಕ್ಷುಲಕ ಎಂದು ಹೇಳುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ಇನ್ನು ಮುಂದೆ ನಾನು ಪದಗಳನ್ನು ಆಯ್ಕೆ ಮಾಡಿ ಮಾತನಾಡುವುದ ರ ಬಗ್ಗೆ ಎಚ್ಚರಿಕೆ ವಹಿಸುತ್ತೇನೆ ಎಂದು ಬರೆದುಕೊಂಡು ಕ್ಷಮೆ ಕೇಳಿದ್ದರು. ಇದೀಗ ಲೋಕಸಭೆಯಲ್ಲಿಯೂ ರಮೇಶ್ ಕುಮಾರ್ ವಿಚಾರ ಚರ್ಚೆಗೆ ಬಂದಿದ್ದು ಕಾಂಗ್ರೆಸ್ ಶಾಸಕರ ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ರಮೇಶ್ ಕುಮಾರ್ ಈ ಹಿಂದೆಯೂ ಹೆಣ್ಣು ಮಕ್ಕಳ ಬಗ್ಗೆ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಸಿಲುಕಿದ್ದರು. ಇದೀಗ ಮತ್ತೆ ಅವರ ಹೇಳಿಕೆ ರಾಷ್ಟ್ರಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:
ಶಾಸಕ ರಮೇಶ್ ಕುಮಾರ್ ಹೇಳಿಕೆಯಿಂದ ಮುಜುಗರಕ್ಕೀಡಾದ ಕಾಂಗ್ರೆಸ್; ಪಕ್ಷದ ನಾಯಕರಿಂದಲೂ ಖಂಡನೆ