ನವದೆಹಲಿ: ನ್ಯಾಷನಲ್ ಹೆರಾಲ್ಡ್ (National Herald Case) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಇಂದು ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಮುಂದಾಗಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗಲಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಕೊವಿಡ್ ಪಾಸಿಟಿವ್ ಬಂದಿದ್ದರಿಂದ ತಮ್ಮ ಸಮನ್ಸ್ ಮುಂದೂಡುವಂತೆ ಕೋರಿ ಮಾಡಿದ ಮನವಿಯನ್ನು ಇಡಿ ಈ ಹಿಂದೆ ಸ್ವೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಲು ಮತ್ತೊಂದು ಸಮನ್ಸ್ ಜಾರಿ ಮಾಡಿತ್ತು. ಇಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಪ್ರಧಾನ ಕಚೇರಿಯಿಂದ ಸೋನಿಯಾ ಗಾಂಧಿ ಇಡಿ ಕಚೇರಿಗೆ ತೆರಳಲಿದ್ದಾರೆ.
ಭಾರತದ ಯಾವುದೇ ಫೆಡರಲ್ ತನಿಖಾ ಸಂಸ್ಥೆ ಕಾಂಗ್ರೆಸ್ ಅಧ್ಯಕ್ಷರನ್ನು ಪ್ರಶ್ನಿಸುತ್ತಿರುವುದು ಇದೇ ಮೊದಲು. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನೂ ಈ ಪ್ರಕರಣದಲ್ಲಿ ಇಡಿ ಸುದೀರ್ಘ ವಿಚಾರಣೆ ನಡೆಸಿತ್ತು. ದೆಹಲಿಯಲ್ಲಿರುವ ಇಡಿ ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿಯನ್ನು ಐದು ದಿನಗಳಲ್ಲಿ 50 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಅದನ್ನು ವಿರೋಧಿಸಿ ಭಾರತದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು.
ಇಂದು ಕಾಂಗ್ರೆಸ್ ಪ್ರತಿಭಟನೆ:
ಸೋನಿಯಾ ಗಾಂಧಿ ಅವರನ್ನು ಇಡಿ ಪ್ರಶ್ನಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯ ಮೂಲಕ ತನ್ನ ಆಕ್ರೋಶವನ್ನು ವ್ಯಕ್ತಪಡಿಸುವ ಸಾಧ್ಯತೆಯಿದೆ. ಆಯಾ ರಾಜ್ಯಗಳ ರಾಜಧಾನಿಯಲ್ಲಿ ಮತ್ತು ಇತರೆ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುವಂತೆ ಕಾಂಗ್ರೆಸ್ ತನ್ನ ರಾಜ್ಯ ಘಟಕಗಳಿಗೆ ಹೇಳಿದೆ.
ಇದನ್ನೂ ಓದಿ: ಮೋದಿಯನ್ನು ಗೋಧ್ರಾ ಗಲಭೆ ಹಿಂದೆ ಸಿಲುಕಿಸುವ ಸಂಚು ರೂಪಿಸಿದ್ದು ಸೋನಿಯಾ ಗಾಂಧಿ: ಬಿಜೆಪಿ
ಕಾಂಗ್ರೆಸ್ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಬುಧವಾರ ಸಭೆ ನಡೆದಿದ್ದು, ಇಂದಿನ ಕಾರ್ಯತಂತ್ರವನ್ನು ಚರ್ಚಿಸಿ ಅಂತಿಮಗೊಳಿಸಲಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, “ಕಾಂಗ್ರೆಸ್ ಸೋನಿಯಾ ಗಾಂಧಿಯೊಂದಿಗೆ ಒಗ್ಗಟ್ಟಾಗಿ ನಿಲ್ಲುತ್ತದೆ” ಎಂದು ಹೇಳಿದ್ದರು.
सीनियर कांग्रेस लीडर,राज्यसभा में नेता प्रतिपक्ष मल्लिकार्जुन खड़गे जी के निवास पर मीटिंग हुई जिसमें किस तरह विपक्ष की आवाज को कुचला जा रहा है,ED टार्गेट बना रही है उसके खिलाफ सभी ने रोष प्रकट किया और कल कांग्रेस अध्यक्ष सोनिया गांधी जी के साथ पूरी कांग्रेस एकजुट होकर खड़ी रहेगी। pic.twitter.com/VYcviFimSO
— Ashok Gehlot (@ashokgehlot51) July 20, 2022
ಇಂದು ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಜಮಾಯಿಸಲಿದ್ದು, ಅಲ್ಲಿಂದ ಇಡಿ ಕಚೇರಿಗೆ ಸೋನಿಯಾ ಗಾಂಧಿ ತೆರಳಲಿದ್ದಾರೆ. ಅಶೋಕ್ ಗೆಹ್ಲೋಟ್ ಮತ್ತು ಪಕ್ಷದ ಮಾಧ್ಯಮ ಮತ್ತು ಪ್ರಚಾರ ಅಧ್ಯಕ್ಷ ಪವನ್ ಖೇರಾ ಅವರು ಈ ಕುರಿತು ಮಾಹಿತಿ ನೀಡಲಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗುವ ವೇಳೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಪ್ರತಿಭಟನೆ ನಡೆಸಲು ಕೈ ನಾಯಕರು ನಿರ್ಧರಿಸಿದ್ದಾರೆ. ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಲಿದ್ದು, ಇಂದು ದೆಹಲಿಯ ಸಂಸತ್ ಆವರಣದಲ್ಲೂ ಕಾಂಗ್ರೆಸ್ ಸಂಸದರಿಂದ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ.
ಬೆಂಗಳೂರಲ್ಲೂ ಪ್ರತಿಭಟನೆ:
ಇಂದು ಇಡಿಯಿಂದ ಸೋನಿಯಾ ಗಾಂಧಿ ವಿಚಾರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಫ್ರೀಡಂ ಪಾರ್ಕ್ನಿಂದ ರಾಜಭವನದವರೆಗೆ ಪ್ರತಿಭಟನಾ ರ್ಯಾಲಿ ನಡೆಯಲಿದೆ. ದ್ವೇಷದ ರಾಜಕಾರಣ ಎಂದು ಆರೋಪಿಸಿ ಇಂದು ಪ್ರತಿಭಟನೆ ನಡೆಯಲಿದ್ದು, ಬೃಹತ್ ಱಲಿ ಮೂಲಕ ರಾಜಭವನ ಮುತ್ತಿಗೆಗೆ ನಿರ್ಧರಿಸಲಾಗಿದೆ. ಕಾಂಗ್ರೆಸ್ನ ಶಾಸಕರು, ಎಂಎಲ್ಸಿಗಳು, ರಾಜ್ಯಸಭಾ ಸದಸ್ಯರು, ಸಂಸದರು ಕಡ್ಡಾಯವಾಗಿ ಪ್ರತಿಭಟನೆಯಲ್ಲಿ ಹಾಜರಾಗಲು ಸೂಚನೆ ನೀಡಲಾಗಿದೆ. ಇಂದು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: Sonia Gandhi: ನಾಳೆ ಇಡಿ ವಿಚಾರಣೆಗೆ ಸೋನಿಯಾ ಗಾಂಧಿ ಹಾಜರು; ಬೆಂಗಳೂರು ಸೇರಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆಗೆ ಸಜ್ಜು
ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್?:
2012ರಲ್ಲಿ ಬಿಜೆಪಿ ನಾಯಕ ಮತ್ತು ವಕೀಲರಾಗಿರುವ ಸುಬ್ರಮಣ್ಯನ್ ಸ್ವಾಮಿ ಅವರು ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ನಿಂದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಕೆಲವು ಕಾಂಗ್ರೆಸ್ ನಾಯಕರು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವಿಚಾರಣಾ ನ್ಯಾಯಾಲಯದ ಮುಂದೆ ದೂರು ಸಲ್ಲಿಸಿದ್ದರು. ವೈಐಎಲ್ ನ್ಯಾಷನಲ್ ಹೆರಾಲ್ಡ್ನ ಆಸ್ತಿಯನ್ನು ದುರುದ್ದೇಶಪೂರಿತ ರೀತಿಯಲ್ಲಿ ಸ್ವಾಧೀನಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದರು.
ನ್ಯಾಷನಲ್ ಹೆರಾಲ್ಡ್ 1938ರಲ್ಲಿ ಜವಾಹರಲಾಲ್ ನೆಹರು ಇತರ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸ್ಥಾಪಿಸಿದ ಪತ್ರಿಕೆಯಾಗಿದೆ. 2014ರಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆಯೇ ಎಂದು ತನಿಖೆ ಆರಂಭಿಸಿತ್ತು. 2015 ರಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ತನ್ನ ತನಿಖೆಯನ್ನು ಪುನರಾರಂಭಿಸಿತ್ತು.