ಕೋವಿಡ್-19ಕ್ಕೆ ಕಡಿವಾಣ: ಭಾರತದ ಪರಿಶ್ರಮಕ್ಕೆ ವಿಶ್ವಸಂಸ್ಥೆ ವಿಜ್ಞಾನಿ ಶ್ಲಾಘನೆ

ಕೊರೊನಾ ಎದುರಿಸುವಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳು ಅತ್ಯುತ್ತಮ ಕೆಲಸ ನಿರ್ವಹಿಸಿವೆ ಎಂದು ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.

ಕೋವಿಡ್-19ಕ್ಕೆ ಕಡಿವಾಣ: ಭಾರತದ ಪರಿಶ್ರಮಕ್ಕೆ ವಿಶ್ವಸಂಸ್ಥೆ ವಿಜ್ಞಾನಿ ಶ್ಲಾಘನೆ
ಸಾಂದರ್ಭಿಕ ಚಿತ್ರ
Edited By:

Updated on: Apr 06, 2022 | 11:20 PM

ದೆಹಲಿ: ಕೊರೊನಾ ವೈರಾಣು ಭಾರತಕ್ಕೆ ಕಾಲಿಟ್ಟಾಗ ಜನರು ಬಹಳಷ್ಟು ಭಯಪಟ್ಟಿದ್ದರು. 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೊವಿಡ್-19 ನಿಯಂತ್ರಣ ಸಾಧ್ಯವೇ? ಒತ್ತೊತ್ತಾಗಿ ಮನೆಗಳಿರುವ ನಗರಗಳಲ್ಲಿ, ಮುಂಬೈಯ ಧಾರಾವಿಯಂತಹ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಸಾಧ್ಯವೇ? ಆರ್ಥಿಕ ವ್ಯತ್ಯಾಸ, ಸಾಮಾಜಿಕ ಭಿನ್ನತೆ ಇತ್ಯಾದಿಗಳನ್ನು ಎದುರಿಸಿ ಕೊರೊನಾ ಗೆಲ್ಲುವುದು ಹೇಗೆ? ಎಂದು ಜನರೆಲ್ಲಾ ಆತಂಕಕ್ಕೊಳಗಾಗಿದ್ದರು. ಸರ್ಕಾರ ಕೈಗೊಂಡ ನಿಯಮಗಳ ವಿರುದ್ಧವೂ ಆಕ್ಷೇಪ ಎತ್ತಿದ್ದರು.

ಆದರೆ ಈಗ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ, ಶಿಶುತಜ್ಞೆ ಹಾಗೂ ವೈದ್ಯಕೀಯ ಸಂಶೋಧಕಿಯಾದ ಸೌಮ್ಯ ಸ್ವಾಮಿನಾಥನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೊರೊನಾ ಎದುರಿಸುವಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳು ಅತ್ಯುತ್ತಮ ಕೆಲಸ ನಿರ್ವಹಿಸಿವೆ ಎಂದು ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ. ಕೊವಿಡ್-19 ವಿರುದ್ಧ ವೈದ್ಯಕೀಯ ಹಾಗೂ ಸಾಂಕ್ರಾಮಿಕ ರೋಗ ಪತ್ತೆಯ ಸಂಶೋಧನೆ, ಲಸಿಕೆಗಳು, ರೋಗ ಪತ್ತೆಹಚ್ಚುವಿಕೆ ಮುಂತಾದ ವಿಭಾಗಗಳನ್ನು ಭಾರತ ಸವಾಲಾಗಿ ಸ್ವೀಕರಿಸಿದೆ ಎಂದು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಕೊವಿಡ್-19ರ ಮೊದಲ ಪ್ರಕರಣಗಳು ದಾಖಲಾದಾಗ ಭಾರತದಲ್ಲಿ ಸ್ಯಾನಿಟೈಸರ್​ಗಳು ಇರಲಿಲ್ಲ. ಪಿಪಿಇ ಕಿಟ್, ಆಕ್ಸಿಜನ್ ಸಿಲಿಂಡರ್, ತೀವ್ರ ನಿಗಾ ಘಟಕಗಳು, ಆಸ್ಪತ್ರೆಯ ವಾರ್ಡ್​ಗಳು, ಬೆಡ್​ಗಳು, ಕೈಗವಸು, ಮಾಸ್ಕ್ ಎಲ್ಲಕ್ಕೂ ಕೊರತೆ ಇದೆ ಎಂದು ಹೇಳಲಾಗುತ್ತಿತ್ತು. ಅವೆಲ್ಲವನ್ನೂ ಎದುರಿಸಿರುವ ಭಾರತ ಕೊರೊನಾ ವಿರುದ್ಧ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಸವಾಲನ್ನು ಗೆದ್ದು ತೋರಿಸಿದೆ. ಈ ಬಗ್ಗೆ ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯ ಹಂಚಿಕೊಂಡಿರುವುದು ವೈದ್ಯಕೀಯ ವಲಯದ, ಭಾರತೀಯರ ಆತ್ಮವಿಶ್ವಾಸ ಹೆಚ್ಚಿಸಿದೆ.

ಸೌಮ್ಯ ಸ್ವಾಮಿನಾಥನ್, WHOನ ಪ್ರಮುಖ ವಿಜ್ಞಾನಿಯಾಗಿದ್ದಾರೆ. ಹೆಚ್​ಐವಿ, ಕ್ಷಯ ರೋಗದ ಬಗ್ಗೆಯೂ ಅವರು ಅವರು ಸಂಶೋಧನೆ ನಡೆಸಿದ್ದಾರೆ.

Tv9 Facebook Live | ಭಾರತದಲ್ಲಿ ಸದ್ದಿಲ್ಲದೇ ರೂಪಾಂತರ ಹೊಂದಿದೆ ಕೊರೊನ ವೈರಾಣು

Published On - 9:31 pm, Wed, 23 December 20