ಡ್ರಗ್ಸ್ ಪ್ರಕರಣ: ನಟಿ ರಿಯಾ ಚಕ್ರವರ್ತಿ ಬ್ಯಾಂಕ್ ಖಾತೆ ಮೇಲಿನ ನಿರ್ಬಂಧ ತೆರವಿಗೆ ನ್ಯಾಯಾಲಯ ಅನುಮತಿ

| Updated By: ರಶ್ಮಿ ಕಲ್ಲಕಟ್ಟ

Updated on: Nov 10, 2021 | 7:14 PM

Rhea Chakraborty ತನ್ನ ಖಾತೆಗಳು ಮತ್ತು ಸ್ಥಿರ ಠೇವಣಿಗಳನ್ನು ಬಳಕೆಗೆ ಮುಕ್ತ ಮಾಡುವಂತೆ ಕೋರಿ ಮಾಡಿದ ಮನವಿಗೆ ಎನ್‌ಸಿಬಿಯಿಂದ ಯಾವುದೇ ಬಲವಾದ ವಿರೋಧವಿಲ್ಲದಿದ್ದರೆ, ರಿಯಾ ತೋರಿಸಿರುವ ಬಾಕಿ ಮೊತ್ತವನ್ನು ಲಭ್ಯವಾಗುವಂತೆ ಲಿಖಿತ ಒಪ್ಪಂದ ಸೇರಿದಂತೆ ಷರತ್ತುಗಳಿಗೆ ಒಳಪಟ್ಟು ಅನುಮತಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಡ್ರಗ್ಸ್ ಪ್ರಕರಣ: ನಟಿ ರಿಯಾ ಚಕ್ರವರ್ತಿ ಬ್ಯಾಂಕ್ ಖಾತೆ ಮೇಲಿನ ನಿರ್ಬಂಧ ತೆರವಿಗೆ ನ್ಯಾಯಾಲಯ ಅನುಮತಿ
ರಿಯಾ ಚಕ್ರವರ್ತಿ
Follow us on

ಮುಂಬೈ: ಕಳೆದ ವರ್ಷ ಮಾದಕವಸ್ತು ನಿಯಂತ್ರಣ ಬ್ಯೂರೋ (NCB) ದಾಖಲಿಸಿದ ಡ್ರಗ್ಸ್ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಫ್ರೀಜ್ ಮಾಡಲಾದ ತನ್ನ ಬ್ಯಾಂಕ್ ಖಾತೆಗಳನ್ನು ಡಿ-ಫ್ರೀಜ್ ಮಾಡುವಂತೆ ಕೋರಿ ನಟಿ ರಿಯಾ ಚಕ್ರವರ್ತಿ(Rhea Chakraborty) ಸಲ್ಲಿಸಿದ ಮನವಿಗೆ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ನಂತರ ಕಳೆದ ವರ್ಷ ದಾಖಲಾದ ಪ್ರಕರಣದ ತನಿಖೆಯ ಸಂದರ್ಭದಲ್ಲಿ ವಶಪಡಿಸಿಕೊಂಡ ಆಕೆಯ ಲ್ಯಾಪ್‌ಟಾಪ್ ಮತ್ತು ಫೋನ್ ಅನ್ನು ಹಿಂದಿರುಗಿಸುವಂತೆ ಮಾಡಿದ ಮನವಿಯನ್ನು ಸಹ ನ್ಯಾಯಾಲಯವು ಅನುಮತಿಸಿದೆ. ತನ್ನ ಖಾತೆಗಳು ಮತ್ತು ಸ್ಥಿರ ಠೇವಣಿಗಳನ್ನು ಬಳಕೆಗೆ ಮುಕ್ತ ಮಾಡುವಂತೆ ಕೋರಿ ಮಾಡಿದ ಮನವಿಗೆ ಎನ್‌ಸಿಬಿಯಿಂದ ಯಾವುದೇ ಬಲವಾದ ವಿರೋಧವಿಲ್ಲದಿದ್ದರೆ, ರಿಯಾ ತೋರಿಸಿರುವ ಬಾಕಿ ಮೊತ್ತವನ್ನು ಲಭ್ಯವಾಗುವಂತೆ ಲಿಖಿತ ಒಪ್ಪಂದ ಸೇರಿದಂತೆ ಷರತ್ತುಗಳಿಗೆ ಒಳಪಟ್ಟು ಅನುಮತಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಕಳೆದ ವರ್ಷ ಸ್ಥಗಿತಗೊಂಡಿದ್ದ ತನ್ನ ಖಾತೆಗಳ ಹಣದಿಂದ ತಾನು ಮತ್ತು ತನ್ನ ಸಹೋದರ ಜೀವನ ಸಾಗಿಸುತ್ತಿದ್ದೆವು ಎಂದು ಆಕೆಯ ಮನವಿಯಲ್ಲಿ ತಿಳಿಸಲಾಗಿದೆ. ಆಕೆ ಮತ್ತು ಇತರ 32 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ನಂತರ ಪ್ರಕರಣದ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ.

ಈ ಪ್ರಕರಣದ ಆರೋಪಿಯೊಬ್ಬರು ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನೂ ನ್ಯಾಯಾಲಯ ಇತ್ತೀಚೆಗೆ ಅನುಮತಿಸಿದೆ. 23 ವರ್ಷದ ಅಬ್ದೆಲ್ ಬಸಿತ್ ಪರಿಹಾರ್ ನಾಲ್ಕು ತಿಂಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.

2020 ರಲ್ಲಿ ಮಾದಕವಸ್ತುಗಳನ್ನು ಸಂಗ್ರಹಿಸಿದ್ದಕ್ಕಾಗಿ ರಿಯಾಳನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿಯಲ್ಲಿ ಬಂಧಿಸಲಾಯಿತು. ಎನ್‌ಸಿಬಿ ರಿಯಾ ವಿರುದ್ಧ ಮಾದಕ ದ್ರವ್ಯಗಳನ್ನು ಸೇವಿಸಿದ್ದಕ್ಕಾಗಿ ಮತ್ತು ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯ್ದೆಗಳ ಸೆಕ್ಷನ್ 27 ಎ ಅಡಿಯಲ್ಲಿ ಆರೋಪ ಹೊರಿಸಿದೆ (ಎನ್‌ಡಿಪಿಎಸ್ 85) ಅಂದರೆ “ಅಕ್ರಮ ವಹಿವಾಟಿಗೆ ಹಣಕಾಸು ಒದಗಿಸುವ ಮತ್ತು ಅಪರಾಧಿಗಳಿಗೆ ಆಶ್ರಯ ನೀಡುವುದಕ್ಕಾಗಿ ಶಿಕ್ಷೆ”. ರಿಯಾ ಚಕ್ರವರ್ತಿ “ಡ್ರಗ್ ಒದಗಿಸುವ ಗುಂಪಿನ ಸಕ್ರಿಯ ಸದಸ್ಯರಾಗಿದ್ದಾರೆ” ಮತ್ತು ಅವರು ಸುಶಾಂತ್ ಸಿಂಗ್ ರಜಪೂತ್‌ಗಾಗಿ ಮಾದಕ ದ್ರವ್ಯಗಳನ್ನು ಸಂಗ್ರಹಿಸಿದ್ದರು ಎಂದು ಅದು ಆರೋಪಿಸಿದೆ.

ಅಕ್ಟೋಬರ್ 2020 ರಲ್ಲಿ ರಿಯಾ ಚಕ್ರವರ್ತಿ ಅವರಿಗೆ ಜಾಮೀನು ನೀಡುವಾಗ ಬಾಂಬೆ ಹೈಕೋರ್ಟ್, ಆದಾಗ್ಯೂ, ಅವರು “ಡ್ರಗ್ಸ್ ವ್ಯಾಪಾರಿಗಳ ಸರಪಳಿಯ ಭಾಗವಾಗಿಲ್ಲ” ಎಂದು ಹೇಳಿದೆ. “ಆಕೆಯಿಂದ ಸಂಗ್ರಹಿಸಲಾಗಿದೆ ಎಂದು ಹೇಳಲಾದ ಡ್ರಗ್ಸ್ ನ್ನು ಆಕೆ ಹಣಕ್ಕಾಗಿ ಅಥವಾ ಇತರ ಪ್ರಯೋಜನ ಪಡೆಯಲು ಬೇರೆಯವರಿಗೆ ರವಾನಿಸಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: MPLAD ಯೋಜನೆಯನ್ನು ಮರುಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ನಿರ್ಧಾರ: ಕೇಂದ್ರ ಸಚಿವ ಅನುರಾಗ್ ಠಾಕೂರ್