
ಅಮೃತಸರ್, ಸೆಪ್ಟೆಂಬರ್ 2: ಬೇಹುಗಾರಿಕೆ ಆರೋಪದ ಮೇಲೆ ಪಂಜಾಬ್‌ನ ರೂಪನಗರ ಜಿಲ್ಲೆಯಿಂದ ಬಂಧಿಸಲ್ಪಟ್ಟ ಯೂಟ್ಯೂಬರ್ ಜಸ್ಬೀರ್ ಸಿಂಗ್ (Jasbir Singh) ವಿರುದ್ಧ ಪೊಲೀಸರು 1,700 ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಇರುವ ಮಾಹಿತಿಯ ಪ್ರಕಾರ, ಜಸ್ಬೀರ್ ಸಿಂಗ್ ಪಾಕಿಸ್ತಾನದೊಂದಿಗೆ (Pakistan) ಗುಪ್ತಚರ ಮಾಹಿತಿಯನ್ನು ಹಂಚಿಕೊಂಡ ಆರೋಪ ಹೊತ್ತಿದ್ದಾರೆ. ಬಹಳ ಸೂಕ್ಷ್ಮ ಸ್ಥಳಗಳಾದ ಭಾಕ್ರಾ ನಂಗಲ್ ಅಣೆಕಟ್ಟು, ವಿವಿಧ ಮಿಲಿಟರಿ ನೆಲೆಗಳ ಚಿತ್ರ ಮತ್ತಿತರ ಸೂಕ್ಷ್ಮ ಮಾಹಿತಿಯನ್ನು ಅವರು ಪಾಕಿಸ್ತಾನಕ್ಕೆ ರಹಸ್ಯವಾಗಿ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡ ಕೆಲ ಸಂಗತಿಗಳು ಭದ್ರತಾ ಸಂಸ್ಥೆಗಳನ್ನು ಅಲರ್ಟ್ ಮಾಡಿವೆ.
ಜಸ್ಬೀರ್ ಸಿಂಗ್ ಪಾಕಿಸ್ತಾನದಲ್ಲಿ ಸುಮಾರು 120 ಜನರೊಂದಿಗೆ ಸಂಪರ್ಕ ಹೊಂದಿರುತ್ತಾನೆ. ಅದರಲ್ಲಿ ಹಲವಾರು ಐಎಸ್ಐ ಅಧಿಕಾರಿಗಳು ಸೇರಿದ್ದಾರೆ. ಪಾಕಿಸ್ತಾನದ ಐಎಸ್ಐ ಏಜೆಂಟ್ ಶಕೀರ್ ಜೊತೆ ಜಸ್ಬೀರ್ ನಿರಂತರವಾಗಿ ಸಂಪರ್ಕದಲ್ಲಿರುತ್ತಾನೆ. ಆತನ ಫೋನ್ ಸಂಖ್ಯೆಯನ್ನು ಜಟ್ ರಾಂಧವ ಎಂಬ ಹೆಸರಿನಲ್ಲಿ ತನ್ನ ಫೋನ್‌ನಲ್ಲಿ ಸೇವ್ ಮಾಡಿಕೊಂಡಿರುತ್ತಾನೆ. ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿನ ಹಲವಾರು ಹೋಟೆಲ್‌ಗಳಲ್ಲಿ ಐಎಸ್‌ಐ ಅಧಿಕಾರಿಗಳನ್ನು ಭೇಟಿಯಾಗಿರುತ್ತಾನೆ. ಜಸ್ಬೀರ್ ಸಿಂಗ್ ಎರಡು ಪಾಸ್‌ಪೋರ್ಟ್‌ಗಳನ್ನು ಕೂಡ ಹೊಂದಿರುತ್ತಾನೆ ಎನ್ನುವ ವಿಚಾರಗಳು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಜಸ್ಬೀರ್ ಸಿಂಗ್ ಇದುವರೆಗೆ ಮೂರು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನ ಪವನ್ ಖೇರಾ ಬಳಿ 2 ವೋಟರ್ ಐಡಿ; ಎಷ್ಟು ಬಾರಿ ಮತ ಹಾಕಿದ್ದಾರೆ, ತನಿಖೆಯಾಗಲಿ: ಬಿಜೆಪಿ ಆಗ್ರಹ
ಯೂಟ್ಯೂಬರ್ ಜಸ್ಬೀರ್ ಸಿಂಗ್ ಪಾಕಿಸ್ತಾನಿ ಯೂಟ್ಯೂಬರ್ ನಾಸಿರ್ ಧಿಲ್ಲೋನ್ ಮೂಲಕ ಡ್ಯಾನಿಶ್ ಎಂಬ ಅಧಿಕಾರಿಯನ್ನು ಭೇಟಿಯಾಗಿರುತ್ತಾನೆ. ಡ್ಯಾನಿಶ್ ಪಾಕಿಸ್ತಾನಿ ರಾಯಭಾರ ಕಚೇರಿಯೊಂದಿಗೆ ಸಂಬಂಧ ಹೊಂದಿರುತ್ತಾನೆ. ಜಸ್ಬೀರ್ ಸಿಂಗ್ ಮತ್ತು ಡ್ಯಾನಿಶ್ ಹಲವಾರು ಬಾರಿ ಭೇಟಿಯಾಗಿದ್ದಾರೆ. ಬೇಹುಗಾರಿಕೆ ಆರೋಪದ ಮೇಲೆ ಈಗಾಗಲೇ ಬಂಧಿಸಲ್ಪಟ್ಟಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರೊಂದಿಗೆ ಜಸ್ಬೀರ್ ಪಾಕಿಸ್ತಾನ ರಾಯಭಾರ ಕಚೇರಿಗೆ ಹೋಗಿರುತ್ತಾನೆ. ಅಲ್ಲಿ ವಿವಿಧ ಪಾಕಿಸ್ತಾನಿ ಸೇನಾ ಅಧಿಕಾರಿಗಳನ್ನು ಸಹ ಭೇಟಿಯಾಗಿರುತ್ತಾನೆ ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ.
ಡ್ಯಾನಿಶ್ ಜಸ್ಬೀರ್ ಬಳಿ ಭಾರತೀಯ ಸಿಮ್ ಕಾರ್ಡ್ವೊಂದನ್ನು ಕೇಳಿದ್ದರು. ಆದರೆ ಅದನ್ನು ನೀಡಲು ಜಸ್ಬೀರ್ಗೆ ಸಾಧ್ಯವಾಗಿರಲಿಲ್ಲ. ಇದಲ್ಲದೆ, ಜಸ್ಬೀರ್ ತನ್ನ ಲ್ಯಾಪ್‌ಟಾಪ್ ಅನ್ನು ಪಾಕಿಸ್ತಾನದ ಗುಪ್ತಚರ ಅಧಿಕಾರಿಯೊಬ್ಬರಿಗೆ ಹಸ್ತಾಂತರಿಸಿದ್ದರು. ಬಂಧನಕ್ಕೂ ಮುನ್ನ, ಜಸ್ಬೀರ್ ತನ್ನ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನಿಂದ ಬಹಳಷ್ಟು ಡೇಟಾವನ್ನು ಅಳಿಸಿಹಾಕಿರುತ್ತಾನೆ. ತಾಂತ್ರಿಕ ತಂಡವು ಈಗ ಅಳಿಸಿದ ಡೇಟಾವನ್ನು ಹಿಂಪಡೆಯಲು ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: ಉಪರಾಷ್ಟ್ರಪತಿಯ ಸರ್ಕಾರಿ ಬಂಗಲೆ ಖಾಲಿ ಮಾಡಿದ ಜಗದೀಪ್ ಧನ್ಖರ್ ಖಾಸಗಿ ಫಾರ್ಮ್ಹೌಸ್ಗೆ ಶಿಫ್ಟ್
ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರೊಂದಿಗೆ ಸಂಪರ್ಕದಲ್ಲಿದ್ದಕ್ಕಾಗಿ ಜಸ್ಬೀರ್ ಅವರನ್ನು ಜೂನ್‌ನಲ್ಲಿ ಬಂಧಿಸಲಾಗಿತ್ತು. ಈಗ ಈತನೂ ಕೂಡ ಪಾಕಿಸ್ತಾನದೊಂದಿಗೆ ನೇರವಾಗಿ ಬೇಹುಗಾರಿಕೆ ಮಾಡುತ್ತಿದ್ದುದು ಬೆಚ್ಚಿಬೀಳಿಸುವ ಸಂಗತಿ ಎನಿಸಿದೆ. ಪಾಕಿಸ್ತಾನದ ಈ ಬೇಹುಗಾರಿಕೆ ಜಾಲ ಇನ್ನೂ ಎಷ್ಟು ಗಾಢವಾಗಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತಾ ಹೋಗಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ