ಪಶ್ಚಿಮ ಬಂಗಾಳದಲ್ಲಿ ರಾಮನವಮಿಯಂದು ಪ್ರಾರಂಭವಾದ ಕೋಮು ಗಲಭೆ ಇನ್ನೂ ಮುಂದುವರೆದಿದೆ. ಹೂಗ್ಲಿ ಜಿಲ್ಲೆಯಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚಿದೆ. ಮೊನ್ನೆ ಭಾನುವಾರ (ಏಪ್ರಿಲ್ 2) ರಿಶ್ರಾ ಪ್ರದೇಶದಲ್ಲಿ ಹಿಂಸಾಚಾರದ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೊಮ್ಮೆ ಅದೇ ಪ್ರದೇಶದಲ್ಲಿ ನಾಲ್ಕು ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಲು ತೂರಾಟದ ನಂತರ ನಿಲ್ದಾಣದಲ್ಲಿದ್ದ ಜನರು ಸಹ ಘೋಷಣೆಗಳನ್ನು ಕೂಗಿದರು. ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ.
ಸ್ಥಳೀಯ ರೈಲುಗಳು ಮತ್ತು ಅನೇಕ ದೂರದ ರೈಲುಗಳನ್ನು ಒಳಗೊಂಡ ಹೌರಾ ಬರ್ಧಮಾನ್ ಮುಖ್ಯ ಮಾರ್ಗದಲ್ಲಿ ರೈಲು ಸಂಪೂರ್ಣವಾಗಿ ನಿಂತಿತು. ರೈಲ್ವೇ ಗೇಟ್ ಸಂಖ್ಯೆ ನಾಲ್ಕರ ಮೇಲೆ ರೈಲನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಆರೋಪವಿದೆ. ರೈಲು ಮಾರ್ಗದಲ್ಲೂ ಪ್ರತಿಭಟನೆಗಳು ನಡೆದಿದ್ದು, ಮೂರು ಗಂಟೆಗಳ ಕಾಲ ರೈಲು ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದರಿಂದ ಪ್ರಯಾಣಿಕರು ಸಹ ತೀವ್ರ ತೊಂದರೆ ಅನುಭವಿಸಬೇಕಾಯಿತು. ಇದೀಗ ಮತ್ತೆ ರೈಲು ಸಂಚಾರ ಆರಂಭಿಸಲಾಗಿದೆ.
ಮತ್ತಷ್ಟು ಓದಿ: ಪಶ್ಚಿಮ ಬಂಗಾಳದಲ್ಲಿ ರಾಮನವಮಿಯಂದು ಘರ್ಷಣೆ: ಪರಸ್ಪರ ಆರೋಪ ಮಾಡಿ ವಿಡಿಯೊ ಹಂಚಿಕೊಂಡ ಟಿಎಂಸಿ, ಬಿಜೆಪಿ
ಪೊಲೀಸರನ್ನು ಗುರಿಯಾಗಿಸಿಕೊಂಡು ಇಟ್ಟಿಗೆ ಮತ್ತು ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು. ರೈಲ್ವೆ ಗೇಟ್ ಮುಂಭಾಗದಲ್ಲಿ ಪೊಲೀಸ್ ವಾಹನವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳು ಸ್ಥಳಕ್ಕೆ ಆಗಮಿಸಿದ್ದವು. ಹಿಂಸಾಚಾರದ ನಂತರ, ಹೌರಾ-ಬಂದೇಲ್ ಮುಖ್ಯ ಮಾರ್ಗದಲ್ಲಿ ರೈಲು ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡವು. ಇದೇ ವೇಳೆ ಬಿಜೆಪಿ ನಾಯಕ ಸುಭೇಂದು ಅಧಿಕಾರಿ ಟ್ವೀಟ್ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ಶಾಂತಿ ಮರುಸ್ಥಾಪನೆಗೆ ಕೇಂದ್ರ ಬಲದ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಬಿಜೆಪಿ ಇಂದು ಈ ಪ್ರದೇಶದಲ್ಲಿ ಪ್ರತಿಭಟನೆ ನಡೆಸಬಹುದು ಎಂದು ನಂಬಲಾಗಿದೆ. ಇದನ್ನು ಕಂಡ ಪೊಲೀಸರು ಕೂಡ ಅಲರ್ಟ್ ಆಗಿ ಬಂದಿದ್ದಾರೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ರಿಶ್ರಾ ಪ್ರದೇಶದಲ್ಲಿ ಸೆಕ್ಷನ್ 144 ಇನ್ನೂ ಅನ್ವಯಿಸುತ್ತದೆ.
ಮೊನ್ನೆ ಭಾನುವಾರ (ಏಪ್ರಿಲ್ 2) ಹೂಗ್ಲಿ ಜಿಲ್ಲೆಯಲ್ಲಿ ರಾಮ ನವಮಿಯಂದು ಮೆರವಣಿಗೆಯನ್ನು ಕೈಗೊಳ್ಳಲಾಯಿತು. ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಪೊಲೀಸರಿಂದ ಬಂದಿರುವ ಮಾಹಿತಿ ಪ್ರಕಾರ ಜಿಲ್ಲೆಯ ಕೆಲವೆಡೆ ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ಹಿಂಸಾಚಾರದಲ್ಲಿ ಕೆಲ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:19 am, Tue, 4 April 23