ಜಹಂಗೀರ್ಪುರಿ ಹಿಂಸಾಚಾರ ಪ್ರಕರಣ; ಆರೋಪಿಯೊಬ್ಬನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಕಲ್ಲು ಎಸೆದ ಕುಟುಂಬದವರು
ಇಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನಾ ಪ್ರತಿಕ್ರಿಯೆ ನೀಡಿ, ಅಪರಾಧದಲ್ಲಿ ಪಾಲ್ಗೊಂಡ ಎಲ್ಲರನ್ನೂ ಹುಡುಕಿ, ಬಂಧಿಸುತ್ತೇವೆ. ಬಂಧಿತರಾದ 21ಕ್ಕೂ ಹೆಚ್ಚು ಜನರಲ್ಲಿ ಹಿಂದು-ಮುಸ್ಲಿಂ ಎರಡೂ ಸಮುದಾಯದವರೂ ಇದ್ದಾರೆ ಎಂದು ತಿಳಿಸಿದ್ದಾರೆ.
ದೆಹಲಿಯ ಜಹಂಗೀರ್ಪುರಿಯಲ್ಲಿ ಶನಿವಾರ ಹನುಮ ಜಯಂತಿ ಮೆರವಣಿಗೆಯ ವೇಳೆ ಕೋಮು ಸಂಘರ್ಷ ಉಂಟಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 21 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೆಲವರು ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸರು ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹೀಗೆ ಪರಾರಿಯಾದವರನ್ನು ಪತ್ತೆ ಹಚ್ಚುವ ಸಲುವಾಗಿ ಅವರ ಸಂಬಂಧಿಗಳು, ಕುಟುಂಬದವರನ್ನು ವಿಚಾರಣೆಗೆ ಒಳಪಡಿಸುವ ಕೆಲಸವನ್ನು ಪೊಲೀಸರು ನಡೆಸುತ್ತಿದ್ದಾರೆ. ಹಾಗೇ, ಇಂದು ಪೊಲೀಸರ ತಂಡ ಘಟನೆ ನಡೆದ ಸ್ಥಳಗಳಿಗೆ ಭೇಟಿ ಕೊಟ್ಟಿತ್ತು. ಆದರೆ ಅವರ ಮೇಲೆ ಕಲ್ಲು ತೂರಾಟವಾಗಿದೆ.
ಇಂದು ಪೊಲೀಸರ ತಂಡ ಸೋನು ಚಿಕ್ನಾ ಎಂಬ ಆರೋಪಿಯನ್ನು ಹುಡುಕಿಕೊಂಡು ಘಟನೆ ನಡೆದ ಸ್ಥಳಕ್ಕೆ ಹೋಗಿತ್ತು. ಶನಿವಾರ ನಡೆದ ಸಂಘರ್ಷದ ವೇಳೆ ಈತ ಗುಂಡು ಹಾರಿಸಿದ್ದ ದೃಶ್ಯ ಎಲ್ಲೆಡೆ ವೈರಲ್ ಆಗಿರುವ ಬೆನ್ನಲ್ಲೇ, ಅವನನ್ನು ಪತ್ತೆ ಹಚ್ಚಿ, ಬಂಧಿಸಲು ಹೋಗಿದ್ದರು. ಅಲ್ಲಿ ಹಿಂಸಾಚಾರ ನಡೆದಾಗಿನಿಂದಲೂ ಸೋನು ಚಿಕ್ನಾ ಕಾಣೆಯಾಗಿದ್ದಾನೆ. ಈತನನ್ನು ಹುಡುಕಲು ಮುಂದಾದ ಪೊಲೀಸರು ಸೀದಾ ಮನೆಯ ಬಳಿ ಹೋಗಿದ್ದಾರೆ. ಸೋನು ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಲು ಅಲ್ಲಿಗೆ ಹೋದಾಗ ಪೊಲೀಸರ ಮೇಲೆ ದಾಳಿಯಾಗಿದೆ. ಸೋನು ಕುಟುಂಬ ಮತ್ತು ಪಕ್ಕದ ಮನೆಯವರೇ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ಎಸೆದಿದ್ದಾರೆ. ಈ ಹಿಂಸಾಚಾರ ಉಲ್ಬಣಗೊಳ್ಳಲು ಶುರುವಾಗುತ್ತಿದ್ದಂತೆ, ಆರ್ಎಫ್ ಸಿಬ್ಬಂದಿ ಕಾರ್ಯಪ್ರವೃತ್ತರಾದರು. ನಂತರ ಪೊಲೀಸರು ಸೋನು ಸೋದರನನ್ನೊಬ್ಬನ್ನು ವಶಕ್ಕೆ ಪಡೆದಿದ್ದಾರೆ.
ಇಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನಾ ಪ್ರತಿಕ್ರಿಯೆ ನೀಡಿ, ಅಪರಾಧದಲ್ಲಿ ಪಾಲ್ಗೊಂಡ ಎಲ್ಲರನ್ನೂ ಹುಡುಕಿ, ಬಂಧಿಸುತ್ತೇವೆ. ಬಂಧಿತರಾದ 21ಕ್ಕೂ ಹೆಚ್ಚು ಜನರಲ್ಲಿ ಹಿಂದು-ಮುಸ್ಲಿಂ ಎರಡೂ ಸಮುದಾಯದವರೂ ಇದ್ದಾರೆ. ಅವರು ಯಾವುದೇ ಧರ್ಮಕ್ಕೆ ಸೇರಿರಲಿ ಆರೋಪ ಸಾಬೀತಾಗಿದ್ದೇ ಆದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: IPL 2022: ಓಡಿ ಬಂದು ಕ್ಯಾಚ್ ಹಿಡಿಯದೇ ನಿಂತ ಶಿವಂ ದುಬೆ: ಅನುಮಾನ ವ್ಯಕ್ತಪಡಿಸಿದ ಅಭಿಮಾನಿಗಳು