Success Story: 16ನೇ ವರ್ಷದಲ್ಲೇ ಶ್ರವಣ ಶಕ್ತಿ ಕಳೆದುಕೊಂಡ ಸೌಮ್ಯ ಈಗ ಐಎಎಸ್​ ಅಧಿಕಾರಿ

|

Updated on: Oct 19, 2023 | 11:50 AM

ಸೌಮ್ಯಾ ತನ್ನ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡಾಗ ಅವರಿಗೆ ಕೇವಲ 16 ವರ್ಷ. ಈ ಅಂಗವೈಕಲ್ಯವಿರುವುದರಿಂದ ಅನೇಕರು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಆದರೆ, ಸೌಮ್ಯ ತನ್ನ ದೈಹಿಕ ನ್ಯೂನತೆಯನ್ನು ಸವಾಲಾಗಿ ಸ್ವೀಕರಿಸಿದರು.

Success Story: 16ನೇ ವರ್ಷದಲ್ಲೇ ಶ್ರವಣ ಶಕ್ತಿ ಕಳೆದುಕೊಂಡ ಸೌಮ್ಯ ಈಗ ಐಎಎಸ್​ ಅಧಿಕಾರಿ
ಸೌಮ್ಯ ಶರ್ಮಾ
Image Credit source: iStock
Follow us on

ನವದೆಹಲಿ: ಯುಪಿಎಸ್‌ಸಿ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪರೀಕ್ಷೆಯಲ್ಲಿ ಪಾಸ್ ಆಗಲು ಹಗಲೂ ರಾತ್ರಿ ಓದುವವರಿದ್ದಾರೆ. ಹಲವು ವರ್ಷಗಳ ಕಾಲ ಹಠ ಬಿಡದೆ ಪರೀಕ್ಷೆ ಬರೆಯುವವರಿದ್ದಾರೆ. ಆದರೆ, ಸೌಮ್ಯ ಶರ್ಮಾ ಎಂಬ ಈ ಯುವತಿ ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಐಎಎಸ್​ ಅಧಿಕಾರಿಯಾಗಿದ್ದಾರೆ. ಈ ರೀತಿ ಹಲವು ಮಂದಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ, ಅದರಲ್ಲೇನು ವಿಶೇಷ? ಎಂದು ನೀವು ಅಂದುಕೊಳ್ಳಬಹುದು. ಈ ಸೌಮ್ಯ ಶರ್ಮಾ ಅವರಿಗೆ ಕಿವುಡುತನದ ಸಮಸ್ಯೆಯಿದೆ. ತಮ್ಮ 16ನೇ ವಯಸ್ಸಿನಲ್ಲೇ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡ ಸೌಮ್ಯ ಇದೀಗ ಐಎಎಸ್​ ಅಧಿಕಾರಿಯಾಗಿದ್ದಾರೆ. ಈ ಕಾರಣದಿಂದಲೇ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

ಸೌಮ್ಯ ಶರ್ಮಾ 2018ರಲ್ಲಿ ಅಖಿಲ ಭಾರತ 9ನೇ ರ್ಯಾಂಕ್​ನೊಂದಿಗೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್ ಆದರು. ಸೌಮ್ಯಾ ಬಗೆಗಿನ ಇನ್ನೊಂದು ಆಸಕ್ತಿದಾಯಕ ಸಂಗತಿಯೆಂದರೆ ಅವರು UPSC ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿ ಪಾಸ್ ಮಾಡಿದ್ದು ಮಾತ್ರವಲ್ಲದೆ ಆ ಪರೀಕ್ಷೆಗೆ ಅವರು ಯಾವುದೇ ತರಬೇತಿಯನ್ನೂ ಪಡೆದಿರಲಿಲ್ಲ. ಹಾಗೇ, ಕೇವಲ 4 ತಿಂಗಳು ಪರೀಕ್ಷೆಗೆ ತಯಾರಿ ಮಾಡಿಕೊಂಡು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ!

ಇದನ್ನೂ ಓದಿ: Success Story: ದಿನಕ್ಕೆ 10 ರೂ. ದುಡಿಯುತ್ತಿದ್ದ ದಿನಗೂಲಿ ನೌಕರ ಈಗ ಐಎಎಸ್​ ಅಧಿಕಾರಿ!

ಸೌಮ್ಯಾ ತನ್ನ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡಾಗ ಅವರಿಗೆ ಕೇವಲ 16 ವರ್ಷ. ಈ ಅಂಗವೈಕಲ್ಯವಿರುವುದರಿಂದ ಅನೇಕರು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಆದರೆ, ಸೌಮ್ಯ ತನ್ನ ದೈಹಿಕ ನ್ಯೂನತೆಯನ್ನು ಸವಾಲಾಗಿ ಸ್ವೀಕರಿಸಿದರು. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಮಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಲು ನಿರ್ಧರಿಸಿದರು.

ತನ್ನ ಜೀವನದುದ್ದಕ್ಕೂ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಸೌಮ್ಯಾ ತನ್ನ ಶಾಲಾ ಶಿಕ್ಷಣದ ನಂತರ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕಾನೂನು ಪದವಿ ಮುಂದುವರಿಸಲು ಸೀಟು ಪಡೆದರು. 2017ರಲ್ಲಿ ಅವರು UPSC ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು. ಆದರೆ, ಆ ಹೊತ್ತಿಗೆ ಪರೀಕ್ಷೆಗೆ ಕೇವಲ 4 ತಿಂಗಳುಗಳು ಉಳಿದಿತ್ತು. ಎಷ್ಟೋ ಜನರು ವರ್ಷಗಟ್ಟಲೆ ತರಬೇತಿ ಪಡೆದು, ಅದಕ್ಕಾಗೇ ಸಮಯ ಮೀಸಲಿಟ್ಟು ಓದಿದರೂ ಯುಪಿಎಸ್​ಸಿ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. ಆದರೆ, ಸೌಮ್ಯ ನಾಲ್ಕೇ ತಿಂಗಳಲ್ಲಿ ಯಾವುದೇ ತರಬೇತಿ ಇಲ್ಲದೆ ಸ್ವಂತವಾಗಿ ಓದಿಕೊಂಡು, ಪರೀಕ್ಷೆ ಬರೆದು 9ನೇ ರ್ಯಾಂಕ್ ಪಡೆದಿರುವುದು ಕಡಿಮೆ ಸಾಧನೆಯೇನಲ್ಲ.

ಇದನ್ನೂ ಓದಿ: ಐಎಎಸ್​ ಅಧಿಕಾರಿಯ ತಲೆಮುಟ್ಟಿ ಆಶೀರ್ವದಿಸಿದ ಹಿರಿಯ ಮಹಿಳೆ

ಪಾಸ್ ಆಗಲೇಬೇಕೆಂಬ ಹಠದಿಂದ ಪರೀಕ್ಷೆಗೆ ಹಾಜರಾದ ಸೌಮ್ಯ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು. ಆಗ ಅವರಿಗೆ ಕೇವಲ 23 ವರ್ಷ. ಈ ಅಂಗವೈಕಲ್ಯದೊಂದಿಗೆ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳಿಗೆ ಕೋಟಾದ ಮೂಲಕ ಪರೀಕ್ಷೆಯನ್ನು ಭೇದಿಸಲು ಅನೇಕರು ಪ್ರಯತ್ನಿಸಬಹುದು. ಆದರೆ, ಸೌಮ್ಯ ಯಾವ ಕೋಟಾದಲ್ಲೂ ಸೀಟು ಗಿಟ್ಟಿಸಿಕೊಳ್ಳಲಿಲ್ಲ. ಅವರು ಜನರಲ್ ಕೆಟಗರಿಯಲ್ಲೇ ಪರೀಕ್ಷೆ ಬರೆದು, ಸ್ವಂತ ಸಾಮರ್ಥ್ಯದಿಂದ ಪಾಸ್ ಆಗಿದ್ದಾರೆ. ಅಷ್ಟೇ ಅಲ್ಲ, ಯುಪಿಎಸ್​ಸಿ ಮೇನ್ಸ್ ಪರೀಕ್ಷೆಯ ವೇಳೆ ಸೌಮ್ಯಾ ಅವರಿಗೆ ತೀವ್ರವಾಗಿ ಜ್ವರ ಕಾಣಿಸಿಕೊಂಡು ಹಾಸಿಗೆಯಿಂದ ಎದ್ದೇಳಲು ಸಹ ಸಾಧ್ಯವಾಗಲಿಲ್ಲ, ಆದರೂ ಅವರು ಹಿಂದೆ ಸರಿಯದೆ UPSC ಪರೀಕ್ಷೆಗೆ ಹಾಜರಾಗಿದ್ದರು.

ಸೌಮ್ಯ ಶರ್ಮಾ ಅವರು ಪ್ರಸ್ತುತ ಮಹಾರಾಷ್ಟ್ರ ಕೇಡರ್‌ನಲ್ಲಿ ನಾಗ್ಪುರ ಜಿಲ್ಲಾ ಪರಿಷತ್‌ನ ಸಿಇಒ ಆಗಿ ನೇಮಕವಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕೂಡ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ಪ್ರಸ್ತುತ ನಾಗ್ಪುರದ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಅರ್ಚಿತ್ ಚಂದಕ್ ಅವರನ್ನು ವಿವಾಹವಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ