ಬಾಗಂಬರಿ ಮಠದಲ್ಲಿ ಡೆತ್​ನೋಟ್​ ಪತ್ತೆ: ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 21, 2021 | 6:46 PM

ನರೇಂದ್ರ ಗಿರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಅಮರ್ ಗಿರಿ ಪವನ್ ಮಹಾರಾಜ್ ದೂರು ಆಧರಿಸಿ ಆನಂದ್ ಗಿರಿ ವಿರುದ್ಧ ಐಪಿಸಿ ಸೆಕ್ಷನ್ 306ರಡಿ ಎಫ್ಐಆರ್ ದಾಖಲಾಗಿದೆ.

ಬಾಗಂಬರಿ ಮಠದಲ್ಲಿ ಡೆತ್​ನೋಟ್​ ಪತ್ತೆ: ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು
ಪೊಲೀಸರ ಬಂಧನದಲ್ಲಿರುವ ಆರೋಪಿ ಆನಂದ ಗಿರಿ ಹಾಗೂ ಮೃತ ನರೇಂದ್ರ ಗಿರಿ
Follow us on

ಲಖನೌ: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿರುವ ಬಾಗಂಬರಿ ಮಠದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಮಹಾಂತ ನರೇಂದ್ರ ಗಿರಿ ಅವರದ್ದು ಎನ್ನಲಾದ 14 ಪುಟಗಳ ಡೆತ್​ನೋಟ್ ಪತ್ತೆಯಾಗಿದೆ. ನರೇಂದ್ರ ಗಿರಿ ಅವರ ಪಾರ್ಥಿವ ಶರೀರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನರೇಂದ್ರ ಗಿರಿ ಅವರು ಅಖಾಡ ಪರಿಷತ್ ಅಧ್ಯಕ್ಷರಾಗಿದ್ದರು.

ಮಹಿಳೆಯೊಬ್ಬರ ಜೊತೆಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ಚಿತ್ರವೊಂದನ್ನು ಶಿಷ್ಯ ಆನಂದ್ ಗಿರಿ ವೈರಲ್ ಮಾಡಲು ಯತ್ನಿಸುತ್ತಿದ್ದಾನೆ. ಇಷ್ಟು ವರ್ಷ ಘನತೆಯಿಂದ ಬದುಕಿದ ನಾನು ಇಂಥ ಅವಮಾನ ಸಹಿಸಿಕೊಳ್ಳಲು ಆಗುವುದಿಲ್ಲ ಎಂಬ ಸಾಲು ಪತ್ರದಲ್ಲಿದೆ. ಐಷಾರಾಮಿ ಕಾರುಗಳ ಮೋಹ ಹೊಂದಿದ್ದ ಆನಂದ್​ ಗಿರಿ ಗೋಶಾಲೆಗೆಂದು ಮಂಜೂರಾಗಿದ್ದ ಜಾಗದಲ್ಲಿ ಪೆಟ್ರೋಲ್ ಬಂಕ್ ತೆರೆಯಬೇಕು ಎಂದುಕೊಂಡಿದ್ದರು. ಇದನ್ನು ನರೇಂದ್ರ ಗಿರಿ ಒಪ್ಪಿಗೆ ನೀಡಿರಲಿಲ್ಲ. ಇದಾದ ನಂತರ ಇಬ್ಬರ ಮಧ್ಯೆ ಬಿರುಕು ಹೆಚ್ಚಾಗಿತ್ತು. ಆಸ್ತಿ ವಿವಾದವೂ ಇತ್ತು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುಪಿ ಪೊಲೀಸರು ಮಹಾಂತ ಗಿರಿಯವರ ಒಬ್ಬ ಶಿಷ್ಯ ಮತ್ತು ಇಬ್ಬರು ಪೂಜಾರಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ದೇಶದ ಸಾಧುಗಳ ಅತಿದೊಡ್ಡ ಸಂಘಟನೆಯಾದ ಅಖಿಲ ಭಾರತೀಯ ಅಖಾಡ ಪರಿಷತ್​ ಅಧ್ಯಕ್ಷರ ಸಾವಿಗೆ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರು ಸಂತಾಪ ವ್ಯಕ್ತಪಡಿಸಿದ್ದರು.

ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಅಮರ್ ಗಿರಿ ಪವನ್ ಮಹಾರಾಜ್ ದೂರು ಆಧರಿಸಿ ಆನಂದ್ ಗಿರಿ ವಿರುದ್ಧ ಐಪಿಸಿ ಸೆಕ್ಷನ್ 306ರಡಿ ಎಫ್ಐಆರ್ ದಾಖಲಾಗಿದೆ.

ಆತ್ಮಹತ್ಯೆ ನೋಟ್ ಮತ್ತು ವಿಡಿಯೋ ಎರಡರದಲ್ಲೂ ಮಹಾಂತ ನರೇಂದ್ರ ಗಿರಿಯವರು ಕೆಲವು ಜನರ ಹೆಸರನ್ನು ಉಲ್ಲೇಖಿಸಿ, ನನಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ತುಂಬ ಘನತೆಯಿಂದ ಜೀವನ ನಡೆಸುತ್ತಿದ್ದೇನೆ. ಅವಮಾನಗಳನ್ನು ಸಹಿಸುತ್ತ ಬದುಕಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ನಾನು ನನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುತ್ತಿದ್ದೇನೆ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

(Suicide note found in Baghambari math sheds light on death of Narendra Giri)

ಇದನ್ನೂ ಓದಿ: ಬಾಗಂಬರಿ ಮಠದಲ್ಲಿ ಡೆತ್​ನೋಟ್​ ಪತ್ತೆ: ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು

ಇದನ್ನೂ ಓದಿ: ‘ಮಹಾಂತ ನರೇಂದ್ರ ಗಿರಿ ಸಾವಿಗೆ ಕೆಲವು ಕೇಂದ್ರ ನಾಯಕರೇ ಕಾರಣ’-ಕಾಂಗ್ರೆಸ್ ಆರೋಪ

Published On - 6:13 pm, Tue, 21 September 21