ತಮಿಳುನಾಡಿನ ರಾಮೇಶ್ವರಂನಿಂದ-ಶ್ರೀಲಂಕಾದ ಮನ್ನಾರ್ಗೆ ಸಂಪರ್ಕ ಕಲ್ಪಿಸುವ ರಾಮ ಸೇತು(ರಾಮ ಸೇತುವೆ)ವಿಗೆ ರಾಷ್ಟ್ರೀಯ ಪಾರಂಪರಿಕ ಸ್ಥಾನಮಾನ (National Heritage Status For Ram Setu) ನೀಡಬೇಕು ಎಂದು ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಮಾರ್ಚ್ 9ರಂದು ನಡೆಸಲು ಸುಪ್ರೀಂಕೋರ್ಟ್ ಇಂದು ಒಪ್ಪಿಗೆ ಸೂಚಿಸಿದೆ. ಈ ಅರ್ಜಿಯನ್ನು ಸಲ್ಲಿಸಿದವರು ಬಿಜೆಪಿ ರಾಜ್ಯಸಭಾ ಸದಸ್ಯ ಡಾ. ಸುಬ್ರಹ್ಮಣಿಯನ್ ಸ್ವಾಮಿ (Subramanian Swamy) ಯವರಾಗಿದ್ದು, ಆದಷ್ಟು ಬೇಗ ಅರ್ಜಿ ವಿಚಾರಣೆಯನ್ನು ಕೈಗೊಳ್ಳಬೇಕು. ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮತ್ತೊಮ್ಮೆ ಮನವಿ ಮಾಡಿದ್ದರು. ನ್ಯಾಯಾಲಯಕ್ಕೆ ಹಾಜರಾಗಿ ಅವರು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆಗೆ ಅಸ್ತು ಎಂದಿದೆ. ಮಾರ್ಚ್ 9ರಂದು ಸಿಜೆಐ ಎನ್.ವಿ.ರಮಣ, ನ್ಯಾಯಮೂರ್ತಿಗಳಾ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಈ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಮಾರ್ಚ್ 9ರಂದು ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದು, ನಂತರ ಇದನ್ನು ಮುಂದುವರಿಸಬೇಕೇ? ಬೇಡವೇ ಎಂಬುದನ್ನು ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ನಿರ್ಧರಿಸಲಿದೆ. ಈ ಅರ್ಜಿಯನ್ನು ಯಾಕೆ ತುರ್ತಾಗಿ ವಿಚಾರಣೆಗೆ ಕೈಗೊಳ್ಳಬೇಕು ಎಂಬ ಸಿಜೆಐ ಎನ್.ವಿ.ರಮಣ ಅವರ ಪ್ರಶ್ನೆಗೆ ಉತ್ತರಿಸಿದ್ದ ಸುಬ್ರಮಹ್ಮಣಿಯನ್ ಸ್ವಾಮಿ, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವೂ ಈಗಾಗಲೇ ಪ್ರತಿ ಅಫಿಡವಿಟ್ ಸಲ್ಲಿಕೆ ಮಾಡಿದೆ. ಆದರೆ ವಿಚಾರಣೆ ದೀರ್ಘ ಕಾಲದಿಂದಲೂ ಬಾಕಿಯಿದೆ. ಸುಪ್ರೀಂಕೋರ್ಟ್ನಲ್ಲಿ ಹಿಂದಿನ ಸಿಜೆಐ ಎಸ್. ಎ.ಬಾಬ್ಡೆ ಇದ್ದಾಗಲೇ ಸಲ್ಲಿಕೆಯಾಗಿರುವ ಅರ್ಜಿ ಇದು. ರಾಮ ಸೇತುವಿಗೆ ರಾಷ್ಟ್ರೀಯ ಪಾರಂಪರಿಕ ಸ್ಥಾನ ಮಾನ ನೀಡುವ ಅರ್ಜಿಯನ್ನು 2021ರ ಏಪ್ರಿಲ್ 24ರಿಂದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಎನ್.ವಿ.ರಮಣ ಅವರು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಬಾಬ್ಡೆ ಸೂಚಿಸಿದ್ದರು ಎಂದು ಹೇಳಿದ್ದರು.
ದಕ್ಷಿಣ ಭಾರತದ ರಾಮೇಶ್ವರಂ ಬಳಿಯ ಪಂಬನ್ ದ್ವೀಪದಿಂದ ಶ್ರೀಲಂಕಾದ ಉತ್ತರ ಕರಾವಳಿಯ ಮನ್ನಾರ್ ದ್ವೀಪವನ್ನು ಸಂಪರ್ಕಿಸುವ ಈ ಸೇತುವೆಯನ್ನು ಸುಣ್ಣದ ಕಲ್ಲುಗಳಿಂದ ನಿರ್ಮಾಣ ಮಾಡಲಾಗಿದೆ. ಇದು ಸುಮಾರು 1400 ಕಿಮೀ ಉದ್ದವಿದ್ದು, ಸೀತಾಮಾತೆ ಇದ್ದ ಲಂಕೆಯನ್ನು ತಲುಪಲು ಶ್ರೀರಾಮನ ಸೇನೆಯೇ ಸ್ವತಃ ನಿರ್ಮಿಸಿದ ಸೇತುವೆ ಇದು ಎಂದು ಹೇಳಲಾಗುತ್ತದೆ. ಇಂಥ ಪೌರಾಣಿಕ ಹಿನ್ನೆಲೆಯಿರುವ ರಾಮ ಸೇತುವೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಸೇತುಸಮುದ್ರಂ ಯೋಜನೆಗೆ ಅನುಮೋದನೆ ನೀಡಿತ್ತು. ಈ ಯೋಜನೆಯಡಿ ಸ್ಥಳದಲ್ಲಿ ಹೂಳೆತ್ತುವ ಮೂಲಕ, ಸೇತುವೆಯ ಸುಣ್ಣದ ಕಲ್ಲುಗಳನ್ನು ತೆಗೆದುಹಾಕಿ ತಮಿಳುನಾಡಿನ ಪಾಕ್ ಜಲಸಂಧಿಯಿಂದ ಮನ್ನಾರ್ನ್ನು ಸಂಪರ್ಕಿಸುವ 83 ಕಿಮೀ ಉದ್ದದಷ್ಟು ಆಳವಿರುವ ನೀರಿನ ಕಾಲುವೆ ರಚಿಸಬೇಕಿತ್ತು. ಆದರೆ ಈ ಯೋಜನೆಯನ್ನು ಅನೇಕ ಪರಿಸರವಾದಿಗಳು, ಹಿಂದು ಧಾರ್ಮಿಕ ಮುಖಂಡರು ವಿರೋಧಿಸಿದ್ದರು. ಪೌರಾಣಿಕ ಹಿನ್ನೆಲೆಯಿರುವ ಸೇತುವೆಗೆ ಧಕ್ಕೆ ಬರಬಾರದು ಎಂಬ ಆಗ್ರಹ ಕೇಳಿಬಂತು. ಈ ಮಧ್ಯೆ ಯೋಜನೆಗೆ ಸ್ಟೇ ನೀಡಬೇಕು. ರಾಮ ಸೇತುಗೆ ರಾಷ್ಟ್ರೀಯ ಪಾರಂಪರಿಕ ಸ್ಥಾನಮಾನ ನೀಡಬೇಕು ಎಂದು ಸುಬ್ರಹ್ಮಣಿಯನ್ ಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಕೂಡ ಯೋಜನೆ ಅನುಷ್ಠಾನಕ್ಕೆ ಸ್ಟೇ ನೀಡಿತು. ಆದರೆ ಅಂದಿನಿಂದಲೂ ವಿಚಾರಣೆ ಆಗಿರಲಿಲ್ಲ. ಇದೀಗ ಮಾರ್ಚ್ 9ಕ್ಕೆ ಸಿಜೆಐ ರಮಣ ನೇತೃತ್ವದ ಪೀಠ ಅರ್ಜಿಯನ್ನು ಪಟ್ಟಿ ಮಾಡಲು ಒಪ್ಪಿದೆ.
ಇದನ್ನೂ ಓದಿ: ಅಂಡರ್-19 ವಿಶ್ವಕಪ್ ಅವ್ಯವಸ್ಥೆಗಳ ಆಗರವಾಗಿತ್ತು! ವಿಂಡೀಸ್ನಲ್ಲಿ ಭಾರತ ಯುವಪಡೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ
Published On - 1:26 pm, Wed, 23 February 22