ತನ್ನ ಮಹತ್ವದ ನಿರ್ಧಾರವೊಂದರಲ್ಲಿ, 24 ವಾರಗಳ ಗರ್ಭಿಣಿಯಾಗಿರುವ ಅವಿವಾಹಿತ ಮಹಿಳೆಗೆ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಲಿವ್-ಇನ್ ರಿಲೇಷನ್ಶಿಪ್ನಲ್ಲಿರುವಾಗ ಗರ್ಭಿಣಿಯಾಗಿದ್ದ ಅವಿವಾಹಿತ ಮಹಿಳೆಯೊಬ್ಬರು ತನಗೆ ಬೇಡವಾದ 24 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಆಕೆಯ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಗರ್ಭಪಾತದಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲವೆಂಬುದನ್ನು ಖಾತರಿಪಡಿಸಿಕೊಂಡು ಗರ್ಭಪಾತ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಹೇಳಿದೆ.
ವೈದ್ಯಕೀಯ ಗರ್ಭಪಾತ ಕಾಯ್ದೆಗೆ 2021ರಲ್ಲಿ ತಂದಿರುವ ತಿದ್ದುಪಡಿಯಲ್ಲಿ ಗಂಡ ಎಂಬ ಬದಲು ಸಂಗಾತಿ ಎಂಬ ಪದ ಬಳಸಲಾಗಿದೆ. ಇದು ಈ ಕಾಯ್ದೆಯಲ್ಲಿ ಅವಿವಾಹಿತ ಮಹಿಳೆಯನ್ನು ಕೂಡ ಒಳಗೊಳ್ಳಲು ಇರುವ ಶಾಸನದ ಉದ್ದೇಶವನ್ನು ತೋರಿಸುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇಂತಹ ಪರಿಸ್ಥಿತಿಯಲ್ಲಿ ಅವಿವಾಹಿತ ಮಹಿಳೆಯರೂ ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತಾರೆ. ಅರ್ಜಿದಾರ ಮಹಿಳೆ ಅವಿವಾಹಿತ ಮಹಿಳೆ ಎಂಬ ಕಾರಣಕ್ಕೆ ಕಾಯ್ದೆಯ ಪ್ರಯೋಜನವನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಶಾಸಕಾಂಗವು ಮಾಡಿದ ಕಾನೂನಿನ ಉದ್ದೇಶವು ಕೇವಲ ವೈವಾಹಿಕ ಸಂಬಂಧದಿಂದ ಅನಪೇಕ್ಷಿತ ಗರ್ಭಧಾರಣೆಯ ವಿಷಯಕ್ಕೆ ಸೀಮಿತವಾಗಿಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಮಹಿಳೆಯ ಗರ್ಭಪಾತಕ್ಕೆ ಅವಕಾಶ ನೀಡಿದ್ದು, ದೆಹಲಿಯ ಏಮ್ಸ್ ಮುಖ್ಯಸ್ಥರಿಗೆ ಸೂಚನೆ ನೀಡಿದ್ದು ವೈದ್ಯಕೀಯ ಮಂಡಳಿ ಸ್ಥಾಪಿಸಿ ಮಹಿಳೆಗೆ ಯಾವುದೇ ಅಪಾಯವಾಗದಂತೆ ಗರ್ಭಪಾತ ಮಾಡಿಸಲು ಸೂಚಿಸಿದೆ.
ವಿವಾಹಿತರು ಮತ್ತು ಅವಿವಾಹಿತರು ಎಂಬ ಭೇದವಿದ್ದರೆ ಮಾಡಿದ ಕಾನೂನಿನ ಉದ್ದೇಶ ಈಡೇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಗಮನಾರ್ಹ ಸಂಗತಿಯೆಂದರೆ, ಅರ್ಜಿದಾರರು ಅವಿವಾಹಿತ ಮಹಿಳೆಯಾಗಿದ್ದು, ಸಮ್ಮತಿಯ ಸಂಬಂಧದಿಂದ ಗರ್ಭಿಣಿಯಾಗಿದ್ದಾರೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.