ನವದೆಹಲಿ: ಅರವಿಂದ್ ಗೋಯಲ್ ಎಂಬ ವ್ಯಕ್ತಿ ತನ್ನ 600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ (Uttar Pradesh Government) ದಾನ ಮಾಡುವ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ಭಾರತದ ಬಡ ಜನರಿಗೆ ಸಹಾಯ ಮಾಡಲು ಅರವಿಂದ್ ಗೋಯಲ್ (Arvind Goyal) ಈ ರೀತಿ ತಮ್ಮ ಆಸ್ತಿಯನ್ನು ಸರ್ಕಾರದ ಹೆಸರಿಗೆ ವರ್ಗಾಯಿಸಿದ್ದಾರೆ. ಇಷ್ಟು ಭಾರೀ ಮೊತ್ತದ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಟ್ಟಿರುವ ಅರವಿಂದ್ ಗೋಯಲ್ ಯಾರು? ಇಲ್ಲಿದೆ ಮಾಹಿತಿ.
ಅರವಿಂದ್ ಗೋಯಲ್ ಉತ್ತರ ಪ್ರದೇಶದ ಅತ್ಯಂತ ಯಶಸ್ವಿ ವೈದ್ಯರಲ್ಲಿ ಒಬ್ಬರು. ಅವರು ಕಳೆದ 50 ವರ್ಷಗಳಿಂದ ವೈದ್ಯರಾಗಿ ಕೆಲಸ ಮಾಡುತ್ತಿದ್ದು, ತಮ್ಮ ಕಠಿಣ ಪರಿಶ್ರಮದಿಂದ ನೂರಾರು ಕೋಟಿ ರೂ. ಹಣವನ್ನು ಸಂಪಾದಿಸಿದ್ದಾರೆ. ಸುಮಾರು 25 ವರ್ಷಗಳ ಹಿಂದೆಯೇ ಅವರು ತಮ್ಮ ಸಂಪೂರ್ಣ ಆಸ್ತಿಯನ್ನು ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು.
ಅರವಿಂದ್ ಗೋಯಲ್ ಹಲವು ವರ್ಷಗಳಿಂದ ದತ್ತಿ ಕೆಲಸ ಮಾಡುತ್ತಿದ್ದಾರೆ. ಕೊವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಅವರು ಮೊರಾದಾಬಾದ್ ಸುತ್ತಮುತ್ತಲಿನ 50 ಹಳ್ಳಿಗಳಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸಿದ್ದರು. ಬಡವರಿಗಾಗಿ ಶಿಕ್ಷಣ ನೀಡುವ ಕ್ಷೇತ್ರದಲ್ಲೂ ಅವರು ದುಡಿದಿದ್ದಾರೆ.
ಇದನ್ನೂ ಓದಿ: Gautam Adani: ವಿಶ್ವದ ಟಾಪ್-5 ಶ್ರೀಮಂತರ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಅದಾನಿ
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ರಾಷ್ಟ್ರಪತಿ ಪ್ರತಿಭಾ ದೇವಿ ಪಾಟೀಲ್ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಅರವಿಂದ್ ಗೋಯಲ್ ಅವರನ್ನು ನಾಲ್ಕು ಬಾರಿ ರಾಷ್ಟ್ರಪತಿಗಳು ಗೌರವಿಸಿದ್ದಾರೆ.
ಅರವಿಂದ್ ಗೋಯಲ್ ಅವರು ರೇಣು ಗೋಯಲ್ ಎಂಬುವವರನ್ನು ವಿವಾಹವಾಗಿದ್ದಾರೆ. ಅವರಿಗೆ ಮೂವರು ಮಕ್ಕಳಿದ್ದಾರೆ. ತಮ್ಮ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಮೂವರು ಮಕ್ಕಳ ಹೆಸರಿಗೆ ಮಾಡದೆ ಸರ್ಕಾರಕ್ಕೆ ಬರೆದುಕೊಟ್ಟಿರುವ ಅವರ ನಡೆ ಇದೀಗ ಭಾರೀ ಚರ್ಚೆಯಾಗುತ್ತಿದೆ.
Published On - 9:58 am, Fri, 22 July 22