Amarnath Yatra: ಪ್ರತಿಕೂಲ ಹವಾಮಾನದಿಂದ ಅಮರನಾಥ ಯಾತ್ರೆ ಮತ್ತೆ ಸ್ಥಗಿತ, ಈವರೆಗೆ 2.29 ಲಕ್ಷ ಭಕ್ತರಿಂದ ದರ್ಶನ
ಕಳೆದ ಜೂನ್ 30ರಂದು ಆರಂಭವಾದ ಅಮರನಾಥ್ ಯಾತ್ರೆಯಲ್ಲಿ ಈವರೆಗೆ 2.29 ಲಕ್ಷ ಮಂದಿ ಶಿವಲಿಂಗದ ದರ್ಶನ ಪಡೆದಿದ್ದಾರೆ.
ದೆಹಲಿ: ಅಮರನಾಥ ಯಾತ್ರೆಗೆ (Amarnath Yatra) ಬಳಕೆಯಾಗುವ ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯ ಸುಮಾರು 300 ಕಿಮೀ ಪ್ರದೇಶದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಯಾತ್ರೆಯನ್ನು ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭೂಕುಸಿತ ಮತ್ತು ಬಂಡೆಗಳು ಉರುಳಿ ಬೀಳುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಸಂಚಾರವನ್ನು ಸಂಪೂರ್ಣ ನಿರ್ಬಂಭಿಸಲಾಗಿದೆ. ಕಳೆದ ಜೂನ್ 30ರಂದು ಆರಂಭವಾದ ಅಮರನಾಥ್ ಯಾತ್ರೆಯಲ್ಲಿ ಈವರೆಗೆ 2.29 ಲಕ್ಷ ಮಂದಿ ಶಿವಲಿಂಗದ ದರ್ಶನ ಪಡೆದಿದ್ದಾರೆ.
ಹೆದ್ದಾರಿಯಲ್ಲಿ ಇಂದು ವಾಹನ ಸಂಚಾರ ಇರುವುದಿಲ್ಲ. ಅದೇ ರೀತಿ ಜಮ್ಮುವಿನಿಂದ ಕಾಶ್ಮೀರ ಕಣಿವೆಯ ಕಡೆಗೆ, ಅಮರನಾಥ್ ಕಣಿವೆಗೆ ಪ್ರವಾಸಿಗರ ಸಂಚಾರವನ್ನೂ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 22 ದಿನಗಳಲ್ಲಿ 2,29,744 ಯಾತ್ರಿಗಳು ಪವಿತ್ರ ಗುಹೆಯಲ್ಲಿ ಶಿವಲಿಂಗದ ದರ್ಶನ ಪಡೆದುಕೊಂಡಿದ್ದಾರೆ. ನಿನ್ನೆ (ಜುಲೈ 21, ಗುರುವಾರ) ಒಂದೇ ದಿನ 10,310 ಯಾತ್ರಿಕರು ಪವಿತ್ರ ಗುಹೆ ಸಂದರ್ಶಿಸಿದ್ದರು. ಹಿಮಾಲಯದಲ್ಲಿರುವ ಅಮರನಾಥ ಗುಹೆಯು ಸಮುದ್ರ ಮಟ್ಟಕ್ಕಿಂತಲೂ 3,888 ಮೀಟರ್ ಎತ್ತರದಲ್ಲಿದೆ.
ಉತ್ತರ ಕಾಶ್ಮೀರದ ಬಲ್ತಲ್ ಮಾರ್ಗವು ಅಮರನಾಥಕ್ಕೆ ಹತ್ತಿರದ ದಾರಿಯಾಗಿದೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಮಾರ್ಗದಲ್ಲಿ ಮತ್ತೊಂದು ಹಾದಿಯೂ ಇದೆ. ಆದರೆ ಇದು ತುಸು ದೂರವಾಗುತ್ತದೆ. ಬಲ್ತಲ್ ಮಾರ್ಗದಲ್ಲಿ ಬರುವ ಯಾತ್ರಿಕರು ಪವಿತ್ರ ಗುಹೆ ತಲುಪಲು 14 ಕಿಮೀ ನಡೆದು ಬರಬೇಕಾಗುತ್ತದೆ. ಈ ಮಾರ್ಗದಲ್ಲಿ ಬರುವ ಭಕ್ತರು ದರ್ಶನದ ನಂತರ ಅಂದೇ ಮೂಲ ನೆಲೆಗೆ ಮರಳುತ್ತಾರೆ.
ಪಹಲ್ಗಾಮ್ ಮಾರ್ಗವಾಗಿ ಬರುವವರು 48 ಕಿಮೀ ನಡೆಯಬೇಕಾಗಿದ್ದು, 4 ದಿನ ತೆಗೆದುಕೊಳ್ಳುತ್ತಾರೆ. ಎರಡೂ ಮಾರ್ಗಗಳಲ್ಲಿ ಯಾತ್ರಿಕರಿಗೆ ಹೆಲಿಕಾಪ್ಟರ್ ಸೌಲಭ್ಯವೂ ಲಭ್ಯವಿದೆ. ಎರಡೂ ಮಾರ್ಗಗಳಲ್ಲಿ ಶುಕ್ರವಾರ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಚೆದುರಿದಂತೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಮರನಾಥ ಯಾತ್ರಿಕರು ಭೂ ಕುಸಿತ ಮತ್ತು ಹಠಾತ್ ಪ್ರವಾಹಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಪ್ರಸಕ್ತ ಸಾಲಿನ ಅಮರನಾಥ ಯಾತ್ರೆಯು ಆಗಸ್ಟ್ 11ರ ಶ್ರಾವಣ ಹುಣ್ಣಿಮೆ, ರಕ್ಷಾಬಂಧನದ ದಿನ ಅಂತ್ಯಗೊಳ್ಳಲಿದೆ.
Published On - 9:14 am, Fri, 22 July 22