ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾಗಿ ರಾಜೀನಾಮೆ ಹಿಂಪಡೆದ ಸಚಿವ ದಿನೇಶ್ ಕಾಟಿಕ್
ಇಲಾಖೆಯ ಅಧಿಕಾರಿಗಳು ತನಗೆ ಸೂಕ್ತ ಗೌರವವನ್ನು ನೀಡುತ್ತಿಲ್ಲ. ನಮಾಮಿ ಗಂಗೆ ಮತ್ತು ಹರ್ ಘರ್ ಜಲ್ ಯೋಜನೆಗಳ ಅನುಷ್ಠಾನದಲ್ಲಿ ನಿಯಮಗಳನ್ನು ಅನುಸರಿಸುತ್ತಿಲ್ಲ. ವರ್ಗಾವಣೆ ಹೆಸರಿನಲ್ಲಿ ನನ್ನ ಇಲಾಖೆಯಿಂದ ಅಕ್ರಮವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ದಿನೇಶ್ ಕಾಟಿಕ್ ಆರೋಪಿಸಿದ್ದರು.
ನವದೆಹಲಿ: ವರ್ಗಾವಣೆಯಲ್ಲಿ ಅವ್ಯವಹಾರ ಹಾಗೂ ದಲಿತ ಎಂಬ ಕಾರಣಕ್ಕೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಉತ್ತರ ಪ್ರದೇಶದ ಜಲಶಕ್ತಿ ಖಾತೆ ಸಚಿವ ದಿನೇಶ್ ಕಾಟಿಕ್ (Dinesh Khatik) ರಾಜೀನಾಮೆ ಪತ್ರ ಕಳುಹಿಸಿದ್ದರು. ಅದಾದ ಒಂದು ದಿನದ ಬಳಿಕ ದಿನೇಶ್ ಕಾಟಿಕ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದು, ಸಚಿವರಾಗಿ ಕೆಲಸ ಮುಂದುವರೆಸುವುದಾಗಿ ಹೇಳಿಕೆ ನೀಡಿದ್ದಾರೆ.
ತಮ್ಮ ರಾಜೀನಾಮೆಯನ್ನು ಕಳುಹಿಸಿದ ಬೆನ್ನಲ್ಲೇ ಉತ್ತರ ಪ್ರದೇಶದ ಜಲಶಕ್ತಿ ರಾಜ್ಯ ಸಚಿವ ದಿನೇಶ್ ಕಾಟಿಕ್ ಗುರುವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು. ತಮ್ಮ ನಡುವಿನ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗಿರುವುದರಿಂದ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.
ದಿನೇಶ್ ಕಾಟಿಕ್ ಅವರು ಜುಲೈ 19ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಗವರ್ನರ್ ಆನಂದಿಬೆನ್ ಪಟೇಲ್ ಅವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಆ ಪತ್ರದಲ್ಲಿ ದಿನೇಶ್ ಕಾಟಿಕ್ ಅವರು ತಮ್ಮ ಇಲಾಖೆಯ ಭ್ರಷ್ಟಾಚಾರ ಮತ್ತು ಸಚಿವಾಲಯದಲ್ಲಿನ ಅಧಿಕಾರಿಗಳ ವರ್ತನೆಯೇ ತಮ್ಮ ರಾಜೀನಾಮೆಗೆ ಕಾರಣ ಎಂದು ಉಲ್ಲೇಖಿಸಿದ್ದರು.
ಇದನ್ನೂ ಓದಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಆದರೆ, ಇದೀಗ ಅವರ ಅಸಮಾಧಾನ ಕಡಿಮೆಯಾಗಿದ್ದು, ರಾಜೀನಾಮೆ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಗುರುವಾರ ಸಂಜೆ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ದಿನೇಶ್ ಕಾಟಿಕ್, ನಾನು ನನ್ನ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದೇನೆ. ಅವುಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಪತ್ರದಲ್ಲಿ ಉಲ್ಲೇಖಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸಿಎಂ ಮುಂದೆ ಸಮಸ್ಯೆಗಳನ್ನು ಮಂಡಿಸಿದ್ದೇನೆ ಎಂದರು.
ತಮ್ಮ ಇಲಾಖೆಯ ಅಧಿಕಾರಿಗಳು ತನಗೆ ಸೂಕ್ತ ಗೌರವವನ್ನು ನೀಡುತ್ತಿಲ್ಲ. ನಮಾಮಿ ಗಂಗೆ ಮತ್ತು ಹರ್ ಘರ್ ಜಲ್ ಯೋಜನೆಗಳ ಅನುಷ್ಠಾನದಲ್ಲಿ ನಿಯಮಗಳನ್ನು ಅನುಸರಿಸುತ್ತಿಲ್ಲ. ವರ್ಗಾವಣೆ ಹೆಸರಿನಲ್ಲಿ ನನ್ನ ಇಲಾಖೆಯಿಂದ ಅಕ್ರಮವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ದಿನೇಶ್ ಕಾಟಿಕ್ ಆರೋಪಿಸಿದ್ದರು.