ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಹೆಲಿಕಾಪ್ಟರ್ಗೆ ಹಕ್ಕಿಯೊಂದು ಬಡಿದ ಕಾರಣ ತಾಂತ್ರಿಕ ಸಮಸ್ಯೆ ಉಂಟಾಯಿತು ಎಂದು ಹೇಳಲಾಗಿದೆ.
ಲಖನೌ: ತಾಂತ್ರಿಕ ಸಮಸ್ಯೆಯಿಂದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಘಟನೆ ವಾರಾಣಸಿ ಬಳಿ ಭಾನುವಾರ (ಜೂನ್ 26) ನಡೆದಿದೆ. ಹೆಲಿಕಾಪ್ಟರ್ಗೆ ಹಕ್ಕಿಯೊಂದು ಬಡಿದ ಕಾರಣ ತಾಂತ್ರಿಕ ಸಮಸ್ಯೆ ಉಂಟಾಯಿತು ಎಂದು ಹೇಳಲಾಗಿದೆ. ಯಾವುದೇ ಅಪಾಯಗಳಿಲ್ಲದೆ ಯೋಗಿ ಆದಿತ್ಯನಾಥ್ ಪಾರಾಗಿದ್ದಾರೆ.
‘ಯೋಗಿ ಆದಿತ್ಯನಾಥ್ ಅವರು ವಾರಾಣಸಿಯಿಂದ ಲಖನೌಗೆ ಹಿಂದಿರುಗುತ್ತಿದ್ದಾಗ ಹಕ್ಕಿಯೊಂದು ಬಡಿಯಿತು. ಹೀಗಾಗಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಬೇಕಾಯಿತು’ ಎಂದು ಜಿಲ್ಲಾಧಿಕಾರಿ ಕೌಶಲ್ರಾಜ್ ಶರ್ಮಾ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಅವರು ನಿನ್ನೆ (ಜೂನ್ 25) ಕಾಶಿ ವಿಶ್ವನಾಥ ದೇಗುಲಕ್ಕೆ ಆಗಮಿಸಿದ್ದರು.
ಪ್ರಸ್ತುತ ವಾರಾಣಸಿಯ ಸರ್ಕೀಟ್ ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆದಿತ್ಯನಾಥ್, ನಂತರ ಸರ್ಕಾರಿ ವಿಮಾನದಲ್ಲಿ ಲಖನೌಗೆ ತೆರಳಲಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಶನಿವಾರ ಮುಂಜಾನೆ ಲಖನೌ ನಗರದಲ್ಲಿ 11 ಲಕ್ಷ ಕುಟುಂಬಗಳಿಗೆ ಆನ್ಲೈನ್ ಮೂಲಕ ವಾಸ ದೃಢೀಕರಣ ಪತ್ರಗಳನ್ನು ವಿತರಿಸಿದ್ದರು. ರಾಜ್ಯವನ್ನು ಸ್ವಾವಲಂಬಿಯಾಗಿಸುವ ತಮ್ಮ ಆಶಯವನ್ನು ಅವರು ಪುನರುಚ್ಚರಿಸಿದ್ದರು. ಉತ್ತರ ಪ್ರದೇಶಗಳಲ್ಲಿ ವಿವಿಧ ಗ್ರಾಮಗಳಲ್ಲಿರುವ ಸುಮಾರು 2.5 ಕೋಟಿ ಮಂದಿಗೆ ಈ ದಾಖಲೆಗಳು ಶೀಘ್ರ ಲಭ್ಯವಾಗಲಿವೆ ಎಂದು ಹೇಳಿದ್ದರು.
Published On - 12:06 pm, Sun, 26 June 22