ಮಹಾರಾಷ್ಟ್ರ ಬಂಡಾಯ ಶಾಸಕರಿಗೆ ಸಿಆರ್​ಪಿಎಫ್ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧಾರ

ಈ ನಡುವೆ ಕೇಂದ್ರ ಸರ್ಕಾರವು ಶಿವಸೇನೆಯ 15 ಬಂಡಾಯ ಶಾಸಕರಿಗೆ Y+ ಭದ್ರತೆಯನ್ನು ಒದಗಿಸಿದೆ.

ಮಹಾರಾಷ್ಟ್ರ ಬಂಡಾಯ ಶಾಸಕರಿಗೆ ಸಿಆರ್​ಪಿಎಫ್ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧಾರ
ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 27, 2022 | 10:09 AM

ಮುಂಬೈ: ಶಿವಸೇನೆ ನಾಯಕ ಏಕನಾಥ ಶಿಂಧೆ (Eknath Shinde) ನೇತೃತ್ವದಲ್ಲಿ ಶಾಸಕರು ಬಂಡೆದ್ದ ನಂತರ ಉದ್ಭವಿಸಿರುವ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು (Maharashtra Political Crisis) ಭಾನುವಾರ ನಿರ್ಣಾಯಕ ಘಟ್ಟ ತಲುಪಿದೆ. ಶಾಸಕರ ಮನವೊಲಿಸುವ, ಬೆದರಿಕೆಯೊಡ್ಡುವ ಪ್ರಯತ್ನಗಳನ್ನು ಉದ್ಧವ್ ಠಾಕ್ರೆ ಮತ್ತು ಇತರ ನಾಯಕರು ಮುಂದುವರಿಸಿದ್ದಾರೆ. ಕೆಲ ಬಂಡಾಯ ಶಾಸಕರ ಮನೆಗಳು ಮತ್ತು ಕಚೇರಿಗಳ ಮೇಲೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಈ ನಡುವೆ ತಮ್ಮ ಬಂಡಾಯವು ಪಕ್ಷದ ಅಥವಾ ಕಾರ್ಯಕರ್ತರ ವಿರುದ್ಧವಲ್ಲ. ಮಹಾವಿಕಾಸ ಅಘಾಡಿ (Maha Vikas Aghadi – MVA) ಉಂಟು ಮಾಡಬಹುದಾದ ದುರಂತಗಳಿಂದ ಪಕ್ಷವನ್ನು ಉಳಿಸಲು ನಾನು ಪ್ರಯತ್ನಿಸುತ್ತಿದ್ದೇನೆ ಎಂಬುದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಬಂಡಾಯ ಬಣದ ಶಾಸಕ ಏಕನಾಥ ಶಿಂಧೆ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಪುಣೆ ಸೇರಿದಂತೆ ವಿವಿಧೆಡೆ ಬಂಡಾಯ ಶಾಸಕರ ಫ್ಲೆಕ್ಸ್​​ಗಳಿಗೆ ಸೆಗಣಿ ಎರಚಿ, ಕಲ್ಲು ತೂರಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ಏಕನಾಥ ಶಿಂಧೆ ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ. ಮಹಾ ವಿಕಾಸ ಅಘಾಡಿ ಮೈತ್ರಿಕೂಟದಿಂದ ಶಿವಸೇನೆ ಹೊರಬರಬೇಕು ಎಂದು ಶಿಂಧೆ ಮತ್ತು ಅವರ ಬೆಂಬಲಿಗರು ಈ ಹಿಂದೆಯೂ ಆಗ್ರಹಿಸಿದ್ದರು. ಕಾಂಗ್ರೆಸ್ ಮತ್ತು ಎನ್​ಸಿಪಿ ದೂರ ಇರಿಸಿ, ಬಿಜೆಪಿಯೊಂದಿಗೆ ಮತ್ತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಶಿಂಧೆ ಒತ್ತಾಯಿಸಿದ್ದರು.

ಈ ನಡುವೆ ಕೇಂದ್ರ ಸರ್ಕಾರವು ಶಿವಸೇನೆಯ 15 ಬಂಡಾಯ ಶಾಸಕರಿಗೆ Y+ ಭದ್ರತೆಯನ್ನು ಒದಗಿಸಿದೆ. ಇದರ ಅನ್ವಯ ಇನ್ನು ಮುಂದೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಪೊಲೀಸರು ಈ ಶಾಸಕರಿಗೆ ಭದ್ರತೆ ಒದಗಿಸಲಿದ್ದಾರೆ. ರಮೇಶ್​ ಬೊರ್​ನಾರೆ, ಮಂಗೇಶ್ ಕುದಾಲ್​ಕರ್, ಸಂಜಯ್ ಶ್ರೀಸಟ್, ಲತಾಬಾಯಿ ಸೊನಾವನೆ, ಪ್ರಕಾಶ್ ಸುರ್ವೆ ಈ ಪಟ್ಟಿಯಲ್ಲಿ ಸೇರಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಡಿಜಿಪಿ ರಜನೀಶ್ ಸೇಟ್ ಅವರಿಗೆ ನಿನ್ನೆಯಷ್ಟೇ ಏಕನಾಥ ಶಿಂಧೆ ಪತ್ರ ಬರೆದು, ಬಂಡಾಯ ಶಾಸಕರಿಗೆ ನೀಡಿದ್ದ ಭದ್ರತೆ ಹಿಂಪಡೆಯಲಾಗಿದೆ ಎಂದು ಆರೋಪಿಸಿದ್ದರು. ಅವರು ಪತ್ರ ಬರೆದ ಒಂದು ದಿನದ ನಂತರ ಕೇಂದ್ರ ಸರ್ಕಾರವು ಭದ್ರತೆ ಒದಗಿಸಲು ಕ್ರಮ ತೆಗೆದುಕೊಂಡಿದೆ.

ಅಂಕಿಅಂಶದ ಲೆಕ್ಕಾಚಾರ

ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಸದಸ್ಯ ಬಲವು 288. ಈ ಪೈಕಿ ಒಂದು ಸ್ಥಾನವು ತೆರವಾಗಿದೆ. ಹೀಗಾಗಿ ಸದ್ಯ 287 ಸದಸ್ಯರಿದ್ದಾರೆ. ಶಿವಸೇನೆಯ 55 ಸದಸ್ಯರಿದ್ದು, ಎನ್​ಸಿಪಿ 53, ಕಾಂಗ್ರೆಸ್ 44 ಸದಸ್ಯ ಬಲ ಹೊಂದಿದೆ. ಮೂರು ಸಣ್ಣ ಪಕ್ಷಗಳು ಮತ್ತು 9 ಪಕ್ಷೇತರರ ಬೆಂಬಲದೊಂದಿಗೆ ಮಹಾ ವಿಕಾಸ ಅಘಾಡಿ ಮೈತ್ರಿ 166 ಸದಸ್ಯ ಬಲದ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಬಿಜೆಪಿ 106 ಸದಸ್ಯ ಬಲ ಹೊಂದಿದ್ದು, ಎರಡು ಮಿತ್ರ ಪಕ್ಷಗಳು ಮತ್ತು ನಾಲ್ವರ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ 112 ಮಂದಿ ತನ್ನ ಪರ ಇರುವುದಾಗಿ ಹೇಳಿದೆ.

ಇದನ್ನೂ ಓದಿ

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬೇಕಿರುವ ಸದಸ್ಯರ ಸಂಖ್ಯೆ 143. ಸದ್ಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಎನ್​ಡಿಎ ಮೈತ್ರಿಕೂಟ 113 ಸಂಖ್ಯಾಬಲ ಹೊಂದಿದೆ. ಇದೀಗ ಏಕನಾಥ ಶಿಂಧೆ ಬಣದಲ್ಲಿ ಪಕ್ಷೇತರ ಶಾಸಕರು ಸೇರಿದಂತೆ 48 ಶಾಸಕರು ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಎನ್​​ಡಿಎ ಮತ್ತು ಏಕನಾಥ ಶಿಂಧೆ‌ ಬಣದ ಶಾಸಕರ ಸಂಖ್ಯೆ 161ಕ್ಕೆ ಹೆಚ್ಚಾಗಿದೆ. ಇದೇ ಹೊತ್ತಿಗೆ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸಂಖ್ಯಾಬಲವು 124ಕ್ಕೆ ಕುಸಿತ ಕಂಡಿದೆ. ವಿಧಾನಸಭೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಬಹುಮತ ಕಳೆದುಕೊಳ್ಳುವ ಸಾಧ್ಯತೆ ನಿಚ್ಚಳ ಎನಿಸಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada