ಲಖಿಂಪುರ ಖೇರಿ ಹಿಂಸಾಚಾರ: ತನಿಖೆ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಾಧೀಶರನ್ನು ನಿಯೋಜಿಸಿದ ಸುಪ್ರೀಂಕೋರ್ಟ್​

| Updated By: Lakshmi Hegde

Updated on: Nov 17, 2021 | 2:31 PM

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್​, ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಪ್ರಕರಣವನ್ನು ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಲಖಿಂಪುರ ಖೇರಿ ಹಿಂಸಾಚಾರ: ತನಿಖೆ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಾಧೀಶರನ್ನು ನಿಯೋಜಿಸಿದ ಸುಪ್ರೀಂಕೋರ್ಟ್​
ಸುಪ್ರೀಂ ಕೋರ್ಟ್
Follow us on

ಅಕ್ಟೋಬರ್​ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ (Lakhimpur Kheri Violence Case) ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸಲು, ಸುಪ್ರೀಂಕೋರ್ಟ್​​ ಇಂದು ಪಂಜಾಬ್​ ಮತ್ತು ಹರ್ಯಾಣ ಹೈಕೋರ್ಟ್​​ನ ಮಾಜಿ ನ್ಯಾಯಾಧೀಶ ರಾಕೇಶ್​​ ಕುಮಾರ್​ ಜೈನ್​​ರನ್ನು ನೇಮಕ ಮಾಡಿದೆ. ಅಂದು ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವ ಅಜಯ್​ ಕುಮಾರ್ ಮಿಶ್ರಾರ ಪುತ್ರ ಆಶಿಶ್​ ಮಿಶ್ರಾ ಬೆಂಗಾವಲು ವಾಹನ ಹರಿದು ರೈತನೊಬ್ಬ ಮೃತಪಟ್ಟಿದ್ದರು. ಅದಾದ ಮೇಲೆ ಹಿಂಸಾಚಾರ ಭುಗಿಲೆದ್ದು, ಒಟ್ಟು 8 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಶಿಶ್​ ಮಿಶ್ರಾ ಆಗಿದ್ದು, ಸದ್ಯ ಅವರು ಬಂಧನದಲ್ಲಿದ್ದಾರೆ. ನಿನ್ನೆಯಷ್ಟೇ ಜಿಲ್ಲಾ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿದೆ.   

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್​, ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಪ್ರಕರಣವನ್ನು ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದೆ. ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ಸಂಪೂರ್ಣ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂಬ ಕಾರಣಕ್ಕೆ ಪಂಜಾಬ್​ ಮತ್ತು ಹರ್ಯಾಣ ಹೈಕೋರ್ಟ್​​ನ ನಿವೃತ್ತ ನ್ಯಾಯಾಧೀಶ ರಾಕೇಶ್​​ ಕುಮಾರ್​ ಜೈನ್​​ರನ್ನು ಮೇಲ್ವಿಚಾರಣೆಗಾಗಿ ನಿಯೋಜಿಸಿದೆ.  ಪ್ರಕರಣದ ತನಿಖೆಗಾಗಿ ಯುಪಿ ಸರ್ಕಾರ ಈಗಾಗಲೇ ರಚಿಸಿರುವ ವಿಶೇಷ ತನಿಖಾ ತಂಡದಲ್ಲಿ ಐಪಿಎಸ್ ಅಧಿಕಾರಿಗಳಾದ ಎಸ್​.ಬಿ.ಶಿರೋಡ್ಕರ್​, ದೀಪಿಂದರ್​ ಸಿಂಗ್​ ಮತ್ತು ಪದ್ಮಜಾ ಚೌಹಾಣ್​  ಅವರನ್ನು ಸೇರಿಸಿ, ಮರು ಸಂಘಟನೆ ಮಾಡಬೇಕು. ಅದಾದ ನಂತರ ಇದೀಗ ನಿಯೋಜಿಸಲಾದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮುಂದುವರಿಯಲಿದೆ. ಮೇಲ್ವಿಚಾರಣೆಗಾಗಿ ನೇಮಕಗೊಂಡ ನಿವೃತ್ತ ನ್ಯಾಯಾಧೀಶರು ಸಲ್ಲಿಸುವ ಸ್ಥಿತಿವರದಿಯನ್ನು ಆಧರಿಸಿ, ಚಾರ್ಜ್​ಶೀಟ್​ ಸಲ್ಲಿಕೆಯಾಗಲಿದೆ. ಬಳಿಕ ನಾವು ವಿಚಾರಣೆ ನಡೆಸುತ್ತೇವೆ ಎಂದು ಸುಪ್ರೀಂಕೋರ್ಟ್​ ಸಿಜೆಐ ಎನ್​. ವಿ.ರಮಣ ತಿಳಿಸಿದ್ದಾರೆ.

ನಾವು ಈ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ನಡೆಸಲು ಬೇರೊಂದು ರಾಜ್ಯದ ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವುದಾಗಿ ನವೆಂಬರ್​ 8ರಂದು ನಡೆಸಿದ್ದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೇಳಿತ್ತು. ಅದಕ್ಕೆ ಉತ್ತರ ಪ್ರದೇಶ ಸರ್ಕಾರವೂ ಕೂಡ ಒಪ್ಪಿಗೆ ನೀಡಿದ ಬಳಿಕ ಇದೀಗ ಪಂಜಾಬ್​-ಹರ್ಯಾಣ ಹೈಕೋರ್ಟ್​ನ ನಿವೃತ್ತ ಜಡ್ಜ್​​ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಶಕ್ತಿಧಾಮ ನೋಡಿಕೊಳ್ಳುವ ಬಗ್ಗೆ ಅಶ್ವಿನಿ​ ಜತೆ ವಿಶಾಲ್​ ಚರ್ಚೆ; ಪುನೀತ್​​ ಕುಟುಂಬದಿಂದ ಅನುಮತಿ ಸಿಗೋದು ಯಾವಾಗ?